ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ

ದಾವಣಗೆರೆ:

     ನಾನು ಕ್ರಿಯಾಶೀಲ ರಾಜಕಾರಣಿಯಾಗಿದ್ದೇನೆ, ಸನ್ಯಾಸಿಯಲ್ಲ. ನಾನು ನಾಳೆ ಸಿಎಂ ಆಗುತ್ತೇನೆ ಅಂತಾ ಹೇಳಿದ್ದೇನೆ. ಹಾಗಂತ ನಾಳೆಯೇ ಸಿಎಂ ಆಗುತ್ತೇನೆ ಅಂತಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿಯಾಗುವುದಾಗಿ ಹೇಳಿದ್ದೇನೆ ಎಂದು ಮಾಜಿ ಸಿಎಂ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

      ನಗರದ ಬಾಪೂಜಿ ಎಂಬಿಎ ಕಾಲೇಜು ಹೆಲಿಪ್ಯಾಡ್‍ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಸಂನ್ಯಾಸಿಯಾಗಿದ್ದರೆ ಉರಿ ಬಿಸಿಲಲ್ಲಿ ಏಕೆ ರಾಜ್ಯಾದ್ಯಂತ ಸುತ್ತುತ್ತಿದ್ದೆ. ಆರಾಮಾಗಿ ನೆರಳಲ್ಲಿ ಇರುತ್ತಿದ್ದೆ ಎಂದರು.ಮೇ.23ರ ಬಳಿಕ ಮೈತ್ರಿ ಸರ್ಕಾರ ಪತನವಾಗುವುದಿಲ್ಲ. ಬದಲಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪತನವಾಗಲಿದೆ ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಇದೇ ರೀತಿ ಹೇಳಿಕೊಂಡೇ ಬರುತ್ತಿದ್ದಾರೆ. ಮೈತ್ರಿ ಸರ್ಕಾರ ಪತನವಾಯ್ತೇ ಎಂದು ಪ್ರಶ್ನಿಸಿದರು.

     ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 5 ವರ್ಷ ಅವದಿ ಪೂರ್ಣಗೊಳಿಸಲಿದ್ದು, ಮೈತ್ರಿ ಸುಭದ್ರವಾಗಿರುತ್ತದೆ. ಯಡಿಯೂರಪ್ಪಗೆ ಮಾನ ಮರ್ಯಾದೆಯೇ ಇಲ್ಲ. 2 ದಿನ ಮುಖ್ಯಮಂತ್ರಿಯಾದ. ಆಮೇಲೆ ಬಹುಮತ ಸಾಬೀತುಪಡಿಸುವಲ್ಲಿ ಫೇಲ್ ಆದ. ಯಡಿಯೂರಪ್ಪನಿಗೆ ಅಧಿಕಾರದ ಹುಚ್ಚು ಹಿಡಿದಿದೆ ಎಂದು ವ್ಯಂಗ್ಯವಾಡಿದರು.

     ಬಿಜೆಪಿ ಶಾಸಕ ಸಿ.ಟಿ.ರವಿ ಅಲ್ಲ, ಆತ ಲೂಟಿ ರವಿ ಅಷ್ಟೇ. ಬರೀ ಬೂಟಾಟಿಕೆ ಮಾಡ್ತಾನೆ. ಕೆ.ಎಸ್.ಈಶ್ವರಪ್ಪ, ಲೂಟಿ ರವಿ, ಶೋಭಾ ಕರಂದ್ಲಾಜೆ ಇಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ಇಂತಹವರ ಬಗ್ಗೆ ನಾನು ಮಾತನಾಡದಿರುವುದೇ ಒಳ್ಳೆಯದು ಎಂದು ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆಂಬ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿಕೆಗೆ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

      ರಾಜ್ಯದ 28 ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ ಸಹ ದಾಟುವುದಿಲ್ಲ. ಇನ್ನು ಡಬಲ್ ಡಿಜಿಟ್ ಮಾತಾದರೂ ಎಲ್ಲಿಂದ ಬರಬೇಕು? ಶಿವಮೊಗ್ಗದಲ್ಲೂ ಬಿಜೆಪಿ ಅಭ್ಯರ್ಥಿ ಸೋಲು ನಿಶ್ಚಿತ. ಯಡಿಯೂರಪ್ಪನಿಗೆ ಮಾಧ್ಯಮದವರು ಪ್ರಶ್ನೆಗಳನ್ನು ಕೇಳುವುದಿಲ್ಲ ಅನಿಸುತ್ತ. ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೋದಲ್ಲೆಲ್ಲಾ ಪೆದ್ದನಂತೆ ಹೇಳಿಕೆ ನೀಡುವುದು, ಮಾತಾಡುವುದನ್ನು ಮಾಡುತ್ತಾರೆ ಎಂದು ಅವರು ಟೀಕಿಸಿದರು. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ವಿಪ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಮೋಹನ ಕೊಂಡಜ್ಜಿ, ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ.ಮಂಜಪ್ಪ, ಸೈಯದ್, ಡಾ.ನಸೀರ್ ಅಹಮ್ಮದ್ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link