ಶಿರಾ ಉಪಚುನಾವಣೆ ಸಂಬಂಧ ಸಭೆ ಕರೆದ ಸಿದ್ದರಾಮಯ್ಯ

ಬೆಂಗಳೂರು

   ಶಿರಾ ಉಪಚುನಾವಣೆಗೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿದ್ದಂತೆಯೇ ತುಮಕೂರು ಕಾಂಗ್ರೆಸ್ ನಲ್ಲಿ ಬಂಡಾಯದ ಗಾಳಿ ಬೀಸಲಾರಂಭಿಸಿದೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಕಣಕ್ಕಿಳಿಸಲು ಒಲವು ತೋರುತ್ತಿದ್ದಂತೆಯೇ ಶಿರಾ ಮೇಲೆ ಕಣ್ಣಿಟ್ಟಿರುವ ಕೆ.ಎನ್.ರಾಜಣ್ಣ ಬಂಡಾಯ ಸೂಚನೆಯನ್ನು ರವಾನಿಸಲಾರಂಭಿಸಿದ್ದಾರೆ.ಹೀಗಾಗಿ ಶಿರಾಕ್ಕೆ ಅಭ್ಯರ್ಥಿಯನ್ನು ಅಳೆದುತೂಗಿ ಕಣಕ್ಕಿಳಿಸುವ ಜೊತೆಗೆ ಗೆಲುವಿನ ಬಾವುಟವನ್ನು ಹಾರಿಸಬೇಕಿದೆ.

   ಹೀಗಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಜೊತೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಬುಧವಾರ ಸಭೆ ಕರೆದಿದ್ದಾರೆ.

   ಅಭ್ಯರ್ಥಿ ಆಯ್ಕೆ ಗೊಂದಲದ ಗೂಡಾಗಿದ್ದು, ಈಗಾಗಲೇ ಕುಸಿಯುತ್ತಿರುವ ಪಕ್ಷವನ್ನು ಮೇಲಕ್ಕೆತ್ತಬಲ್ಲ ರಣಕಲಿ ಶಿರಾಕ್ಕೆ ಬೇಕಾಗಿದೆ. ಜೆಡಿಎಸ್ ಕೋಟೆಯನ್ನು ಬೇಧಿಸಿ ಕೈಯನ್ನು ಎತ್ತಿಹಿಡಿಯಬೇಕಿದೆ. ಪಕ್ಷದಿಂದ ಅಭ್ಯರ್ಥಿ ಯಾರೆಂಬುದಿನ್ನೂ ಅಂತಿಮವಾಗದಿದ್ದರೂ ಸಹ ಈಗಾಗಲೇ ಟಿಬಿಜೆ ಮತ್ತು ಕೆ.ಎನ್.ರಾಜಣ್ಣ ನಡುವೆ ಗುದ್ದಾಟ ಹೆಚ್ಚಾಗಿದೆ. ಅಭ್ಯರ್ಥಿ ಆಯ್ಕೆ ವೇಳೆ ತಮ್ಮನ್ನು ಪರಿಗಣಿಸಬೇಕು.ಇಲ್ಲವೇ ತಮಗೋ ತಮ್ಮ ಕಡೆಯವರಿಗೋ ಟಿಕೆಟ್ ನೀಡಬೇಕೆಂಬುದು ಕೆ.ಎನ್.ರಾಜಣ್ಣ ವಾದ.

   ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಚರ್ಚಿಸಿದ್ದಾರೆ ಕೂಡ. ತುಮಕೂರಿನಲ್ಲಿ ರಾಜಣ್ಣರನ್ನು ಕಾಂಗ್ರೆಸ್ ಹಗುರವಾಗಿ ಪರಿಗಣಿಸುವಂತಿಲ್ಲ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸದ ಕಾರಣ ಕಾಂಗ್ರೆಸ್ ಮತಗಳು ಬಿಜೆಪಿ ಪಾಲಾಗಿದ್ದವು. ಶಿರಾ ಟಿಕೆಟ್ ವಿಚಾರಕ್ಕೆ ಸಿದ್ದರಾಮಯ್ಯ ಮಧ್ಯಪ್ರವೇಶಕ್ಕೆ ಡಿಕೆಶಿ ಕೇಳಿದ್ದಾರೆ ಕೂಡ.

   ಈ ಹಿನ್ನಲೆಯಲ್ಲಿ ಬುಧವಾರ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದಾರೆ. ಶಿರಾ ಅಭ್ಯರ್ಥಿ ಆಯ್ಕೆಗೆ ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದು ಪಕ್ಷದ ವಲಯಗಳಲ್ಲಿ ಮಾತುಗಳು ಕೇಳಿಬರುತ್ತಿವೆಯಾದರೂ ಅದಿನ್ನೂ ಪಕ್ಕಾ ಆಗಿಲ್ಲ. ಹೀಗಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್.ರಾಜಣ್ಣ ಇಬ್ಬರನ್ನು ಮುಖಾಮುಖಿಯಾಗಿ ಚರ್ಚಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link