ಬೆಂಗಳೂರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನೇ ನಕಲು ಮಾಡಿ 200 ಕೋಟಿ ಹಣ ಮಂಜೂರಾತಿ ಮಾಡಿಸಿಕೊಳ್ಳಲು ವಿಫಲಯತ್ನ ನಡೆಸಿದ ಇಬ್ಬರು ಖದೀಮರು ಕಬ್ಬನ್ ಪಾರ್ಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಸಿದ್ದರಾಮಯ್ಯರ ಸಹಿ ಕಾಪಿ ಮಾಡಿದ್ದ ಸಿದ್ಧಾರೂಡ ಸಂಗೊಳ್ಳಿ ಹಾಗೂ ಅಂದಿನ ಮುಖ್ಯಮಂತ್ರಿ ಕಚೇರಿಯ ಸ್ಟೆನೊಗ್ರಾಫರ್ ಗುರುನಾಥ್ ಬಂಧಿತ ಆರೋಪಿಗಳಾಗಿದ್ದು ನಕಲು ಮಾಡಲು ಬಳಸಿದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಳಗಾವಿಯ ಸಂಗೊಳ್ಳಿ ಮೂಲದ ಆರೋಪಿ ಸಿದ್ಧಾರೂಢ ಸಂಗೊಳ್ಳಿಯಲ್ಲಿ ಕುರುಬರ ಭವನ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದನು.
ಕುರುಬರ ಸಂಘ ನಿರ್ಮಾಣಕ್ಕೆ 200 ಕೋಟಿ ರೂ. ಹಣ ಮಂಜೂರು ಮಾಡಿರುವುದಾಗಿ ಲೆಟರ್ ಮಾಡಿ ಸಿದ್ದರಾಮಯ್ಯರ ನಕಲಿ ಸಹಿ ಮಾಡಿ ಅದನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿಗೆ ತೋರಿಸಿದ್ದ ಪತ್ರದ ಬಗ್ಗೆ ಅನುಮಾನಗೊಂಡು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಿದ್ದರಾಮಯ್ಯ ಅವರ ನಕಲಿ ಸಹಿ ಮಾಡಿರುವುದು ಗೊತ್ತಾಗಿತ್ತು. ಈ ಬಗ್ಗೆ ಹಿಂದುಳಿದ ವರ್ಗಗಳ ಉಪ ಕಾರ್ಯದರ್ಶಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣ ಕಬ್ಬನ್ ಪಾರ್ಕ್ ಪೊಲೀಸರಿಗೆ ವರ್ಗಾವಣೆಗೊಂಡಿದ್ದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಸಿದ್ಧಾರೂಡ ಸಂಗೊಳ್ಳಿಯನ್ನು ಬಂಧಿಸಿ ಆತನ ಕೃತ್ಯಕ್ಕೆ ಸಹಕಾರ ನೀಡಿದ ಗುರುನಾಥ್ ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ