ದಾವಣಗೆರೆ:
ಇತ್ತೀಚೆಗೆ ಬಿರುಗಾಳಿ, ಆಲೆಕಲ್ಲು ಸಹಿತ ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದ ಗ್ರಾಮಗಳ ಹೊಲ, ಗದ್ದೆ ಹಾಗೂ ತೋಟಗಳಿಗೆ ಶನಿವಾರ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿ, ಬೆಳೆ ನಷ್ಟವನ್ನು ಪರಿಶೀಲಿಸಿದರು.
ದಾವಣಗೆರೆ ತಾಲೂಕಿನ ಎಲೆ ಬೇತೂರು, ಬಿ.ಕಲ್ಪನಹಳ್ಳಿ, ಚಿತ್ತಾನಹಳ್ಳಿ, ಪುಟಗನಾಳ್, ಗಡಿ ಬೇವಿನಮರ ಹಾಗೂ ಹರಪನಹಳ್ಳಿ ತಾಲೂಕಿನ ಹಿರೇ ಮೆಗಳಗೆರೆ, ಚಿಕ್ಕ ಮೆಗಳಗೆರೆ, ಶ್ರೀಕಂಠಪುರ, ವಟ್ಲಹಳ್ಳಿ, ಜಂಬುಲಿಂಗನಹಳ್ಳಿ ಗ್ರಾಮಗಳ ಹೊಲ, ಗದ್ದೆ, ತೋಟಗಳಿಗೆ ರೈತರು, ಬಿಜೆಪಿ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಸಂಸದ ಜಿ.ಎಂ.ಸಿದ್ದೇಶ್ವರ ಬೆಳೆ ಹಾನಿಯನ್ನು ಪರಿಶೀಲಿಸಿ, ಬೆಳೆ ಕಳೆದುಕೊಂಡಿರುವ ಸಂತ್ರಸ್ತ ರೈತರಿಂದ ಮಾಹಿತಿ ಪಡೆದರು.
ಎಲೆ ಬೇತೂರಿನ ಬಸವನಾಳ್ ರೇವಣಸಿದ್ದಪ್ಪ ಹಾಗೂ ಬಸವಂತಪ್ಪನವರ ಬಾಳೆ ತೋಟಕ್ಕೆ ಭೇಟಿ ನೀಡಿದ ಸಂಸದರು, ಎಷ್ಟು ಎಕರೆಯಲ್ಲಿ ಬಾಳೆ ಬೆಳೆಯಲಾಗಿದೆ. ಬೆಳೆಯಲು ಎಷ್ಟು ಹಣ ಖರ್ಚು ಮಾಡಿದೀರಿ? ಎಷ್ಟು ಬಾಳೆ ಗಿಡಗಳು ಹಾನಿಗೆ ಒಳಗಾಗಿವೆ ಎಂಬುದರ ಬಗ್ಗೆ ಸಂತ್ರಸ್ಥ ರೈತರಿಂದ ಮಾಹಿತಿ ಪಡೆದು, ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ಎಷ್ಟು ಬೆಳೆ ಹಾನಿ ಆಗಿದೆ ಎಂಬುದರ ಬಗ್ಗೆ ಅರ್ಜಿಯಲ್ಲಿ ಸ್ಪಷ್ಟವಾಗಿ ಬರೆದು ಮಾಹಿತಿ ಕೊಟ್ಟು, ಅದರ ಒಂದು ಪ್ರತಿಯನ್ನು ತಮಗೂ ನೀಡಿ ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಸಂತ್ರಸ್ತ ರೈತರು, 3 ಎಕರೆ 34 ಗುಂಟೆ ಹಾಗೂ 2 ಎಕರೆ 17 ಗುಂಟೆಯ ಎರಡು ಪ್ಲಾಟ್ಗಳಲ್ಲಿ ಬಾಳೆ ಬೆಳೆದಿದ್ದು, ಕ್ರಮವಾಗಿ 1.60 ಲಕ್ಷ ರೂ. ಹಾಗೂ 1.20 ಲಕ್ಷ ರೂ. ಖರ್ಚು ಮಾಡಿದ್ದೇವು. ಆದರೆ, ಕಳೆದ ಸೋಮವಾರ ಬಿರುಗಾಳಿ ಸಮೇತ ಸುರಿದ ಮಳೆಗೆ ಇಡೀ ಬಾಳೆ ತೋಟವೇ ನೆಲ ಕಚ್ಚಿದ್ದು, ಸುಮಾರು ಐದು ಲಕ್ಷದ ಬೆಳೆ ಹಾನಿಯಾಗಿದೆ ಎಂದು ಅಳಲು ತೋಡಿಕೊಂಡರು.
ಎಲೆ ಬೇತೂರಿನ ಮತ್ತೋರ್ವ ರೈತ ನಾಗನಗೌಡರು ಬೆಳೆದಿದ್ದ ಎರಡೂವರೆ ಎಕರೆ ಬಾಳೆ ತೋಟಕ್ಕೂ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿ, ಬೆಳೆ ಹಾನಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಸಂತ್ರಸ್ತ ರೈತ ನಾಗನಗೌಡ, 24 ರೂ.ಗೆ ಒಂದರಂತೆ ಬಾಳೆ ಸಸಿ ತಂದಿದ್ವಿ, ಬಾಳೆ ಬೆಳೆಯಲು ಸುಮಾರು 15 ಲೋಡ್ ಕೊಟ್ಟಿಗೆ ಗೊಬ್ಬರ ಹಾಕಿದ್ದೇವು. ಅಲ್ಲದೇ, ಒಂದು ಗಿಡಕ್ಕೆ ಐದು ಬಾರಿ ಅಂದರೆ, ಸುಮಾರು 400 ಗ್ರಾಂ. ಕಾಂಪೋಸ್ಟ್ ಗೊಬ್ಬರ ನೀಡಿದ್ದೇವು. ಆದರೆ, ಸೋಮವಾರ ಸುರಿದ ಆಲೆಕಲ್ಲು ಮಳೆಗೆ ಬಾಳೆ ಗಿಡಗಳೆಲ್ಲ ನೆಲ ಕಚ್ಚಿವೆ. ಬಾಳೆ ಬೆಳೆಯಲು ಎರಡೂವರೆ ಲಕ್ಷ ಖರ್ಚು ಮಾಡಿದ್ದು, ಬೆಳೆ ಹಾನಿಯಾಗಿರುವುದರಿಂದ ಹಾಕಿದ ಬಂಡವಾಳವು ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದಂತಾಗಿದೆ ಎಂದು ಅಲವತ್ತುಕೊಂಡರು.
ಎಲೆ ಬೇತೂರು ಗ್ರಾಮದ ಮತ್ತೋರ್ವ ರೈತ ಕಲ್ಲೇಶಪ್ಪನವರ ಅಡಿಕೆ ತೋಟಕ್ಕೆ ಸಂಸದರು ಭೇಟಿ ನೀಡಿ ಪರಿಶೀಲಿಸಿದಾಗ, ಮಳೆಯ ಹೊಡೆತಕ್ಕೆ ನೆಲಕ್ಕೆ ಉರುಳಿದ್ದ ಅಡಿಕೆ ಮರಗಳನ್ನು ಕತ್ತರಿಸಿ, ಒಂದೆಡೆ ಸಂಗ್ರಹಿಸಿ ಇಟ್ಟಿದ್ದನ್ನು ಕಂಡು ಮರುಗಿದರು.
ಈ ವೇಳೆ ಮಾತನಾಡಿದ ಸಂತ್ರಸ್ತ ರೈತರು, ನಮ್ಮ ಅಡಿಕೆ ತೋಟದಲ್ಲಿ ಸುಮಾರು 450 ಅಡಿಕೆ ಮರಗಳು ಬಿರುಗಾಳಿಯ ಹೊಡತಕ್ಕೆ ಸಂಪೂರ್ಣವಾಗಿ ನೆಲ ಕಚ್ಚಿವೆ. 20 ವರ್ಷಗಳಿಂದ ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಜೋಪಾನ ಮಾಡಿದ್ದೇವು. ಈ ಮರಗಳು ಇನ್ನೂ ಹಲವು ವರ್ಷಗಳ ಕಾಲ ಫಸಲು ನೀಡುತ್ತಿದ್ದವು. ಆದರೆ, ಅಷ್ಟು ದಿನ ಜೋಪಾನ ಮಾಡಿದ್ದ ಮರಗಳು ಈಗ ನೆಲಕ್ಕೆ ಉರುಳಿರುವುದರಿಂದ ಮುಂದೆ ನಷ್ಟವಾಗುವುದನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿ.ಕಲ್ಪನಹಳ್ಳಿಯ ರೈತ ಕೆ.ಎಂ.ಲಿಂಗರಾಜ್ ಅವರ ಅಡಿಕೆ ತೋಟ, ಚಿತ್ತಾನಹಳ್ಳಿಯ ಎಂ.ಡಿ.ರವೀಂದ್ರ ಅವರ ಅಡಿಕೆ ತೋಟಕ್ಕೆ, ಹರಪನಹಳ್ಳಿ ತಾಲೂಕಿನ ವಟ್ಲಳ್ಳಿ ಗ್ರಾಮದ ದುರುಗಪ್ಪ ಎಂಬುವರ ಭತ್ತದ ಗದ್ದೆಗೆ, ಹಿರೇಮೇಗಳಗೇರಿ ಗ್ರಾಮದ ಭತ್ತದ ಗದ್ದೆಗಳಿಗೆ ಸಂಸದರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತ ರೈತರಿಗೆ ಧೈರ್ಯ ತುಂಬಿದರು.
ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಮಳೆಗೆ ಅಡಿಕೆ, ಭತ್ತ, ಬಾಳೆ, ಮೆಕ್ಕೆಜೋಳ, ಪಪ್ಪಾಯ, ಕಬ್ಬು ಬೆಳೆಗಳು ನೆಲಸಮ ಆಗಿರುವುದು ಪರಿಶೀಲನೆಯ ವೇಳೆಯಲ್ಲಿ ಅಲ್ಲಲ್ಲಿ ಕಂಡು ಬಂತು.ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಗೌಡ್ರ ಸಂಗಪ್ಪ, ಬಿಜೆಪಿ ಮುಖಂಡರಾದ ಪಿ.ಮಹಾಬಲೇಶ್ವರಗೌಡ್ರು, ರವೀಂದ್ರ ಎಂ.ಡಿ, ಬಾತಿ ವೀರೇಶ್ ಸೇರಿದಂತೆ ಆಯಾ ಗ್ರಾಮಗಳ ರೈತರು ಹಾಜರಿದ್ದರು.