ಹರಪನಹಳ್ಳಿ
ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿರುವ ದಾವಣಗೆರೆ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಸಂಸದನಾಗಲು ನಾಲಾಯಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಜಗಳೂರು ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಮೂರು ಬಾರಿ ಸಂಸದರಾಗಿರುವ ಸಿದ್ದೇಶ್ವರ, ಕ್ಷೇತ್ರದಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ. ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಕೇಳದೇ ಮೋದಿ ಮುಖ ನೋಡಿ ಓಟು ಕೊಡಿ ಎಂದು ಕೇಳುತ್ತಿರುವುದು ನಾಚಿಕೆಗೇಡು ವಿಷಯ. ಜನಬಲದ ಮುಂದೆ ಹಣ ಬಲದ ಆಟ ನಡೆಯಲ್ಲ. ಈಗ ಕಾಲ ಪಕ್ಷವಾಗಿದೆ. ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಂಜಪ್ಪನವರ ಗೆಲುವೇ ಇದಕ್ಕೆ ಸಾಕ್ಷಿ ಆಗಲಿದೆ ಎಂದು ಹೇಳಿದರು.
ನಾನು ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿ ದೇಶದ ಸಾಮಾನ್ಯ ಪ್ರಜೆಯ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಂಬಾನಿ, ಲಲಿತ ಮೋದಿ, ನಿರವ್ ಮೋದಿ, ಮಲ್ಯ, ಅದಾನಿ ಮುಂತಾದವರ ಚೌಕಿದಾರನ್ನಾಗಿದ್ದೇ ಇವರ ದೊಡ್ಡ ಸಾಧನೆ. ರೈತ, ಬಡವ, ದಲಿತ, ಅಲ್ಪಸಂಖ್ಯಾತರ, ಮಹಿಳೆಯರ ಕಡೆಗಣಿಸಿ ಅವರ ಬದುಕನ್ನು ಸಂಕಷ್ಟಕ್ಕೆ ತಳ್ಳಿದ ಶ್ರೇಯಸ್ಸು ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ದೂರಿದರು.
ದೇಶದ ಭವಿಷ್ಯ, ದೇಶದ ಸುರಕ್ಷತೆ ಹಾಗೂ ಸಂವಿಧಾನ ರಕ್ಷಣೆಗೆ ಯಾರ ಕೈಗೆ ಅಧಿಕಾರ ಕೊಡಬೇಕು ಎಂಬುದನ್ನು ಈ ಚುನಾವಣೆ ತೀರ್ಮಾನ ಮಾಡಲಿದೆ. ಆದರೆ ಮೋದಿ ಪ್ರಧಾನಿ ಆದ ನಂತರ ದೇಶದ ಪ್ರಜಾತಂತ್ರ ವ್ಯವಸ್ಥೆ ಧಕ್ಕೆ ಆಗಿದೆ. ಸಂವಿಧಾನ ಬದಲಾಯಿಸುವ ಕುತುಂತ್ರಗಳು ನಡೆಯುತ್ತಿವೆ. ಹೀಗಾಗಿ ಮತದಾರರು ಯೋಚಿಸಿ ಮತ ನೀಡಬೇಕು ಎಂದು ಹೇಳಿದರು.
ಬಿಜೆಪಿ ಉಳ್ಳವರ ಪಕ್ಷ. ಹಿಂದೂಳಿದ ಯಾವುದೇ ನಾಯಕರಿಗೆ ಟಿಕೆಟ್ ನೀಡಿಲ್ಲ. ಕಾಂಗ್ರೆಸ್-ಜೆಡಿಎಸ್ ಎಂಟು ಹಿಂದುಳಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯ ಕಾಪಾಡಿದೆ. ಇಂತ ವಿಷಯದ ಬಗ್ಗೆ ಮಾತಾಡದ ಈಶ್ವರಪ್ಪಗೆ ಯಾವುದೇ ಬದ್ಧತೆಯಿಲ್ಲ ಎಂದು ಆರೋಪಿಸಿದರು.
ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಯುವಕರಿಗೆ ಪಕೋಡ ಮಾರಾಟ ಮಾಡಿ ಎಂದು ಹೇಳಿ ದೇಶದ ಯುವಜನತೆಗೆ ಪ್ರಧಾನಿ ಅವಮಾನಿಸಿದ್ದಾರೆ. ಪ್ರತಿ ಪ್ರಜೆಗೆ 15 ಲಕ್ಷ ಹಣ ನೀಡುತ್ತೇನೆ ಎಂದು ಹೇಳಿದ್ದ ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಪರ ಸಾಕಷ್ಟು ಯೋಜನೆ ಜಾರಿಗೆ ತಂದು ನುಡಿದಂತೆ ನಡೆದಿದೆ. ಮುಂದಿನ ಬಾರಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಇದು ಹಣ ಬಲ ಹಾಗೂ ಜನ ಬಲದ ಚುನಾವಣೆ ಆಗಿದೆ. ಹರಪನಹಳ್ಳಿ ಹಾಗೂ ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ದಿ.ಎಂ.ಪಿ.ರವೀಂದ್ರ ಅವರು ಹರಪನಹಳ್ಳಿಗೆ 371ಜೆ ಸೌಲಭ್ಯ ಕಲ್ಪಿಸಿದ ಧಿಮಂತ ನಾಯಕ. ಅವರನ್ನು ಸ್ಮರಿಸಲು ಹರಪನಹಳ್ಳಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು ಮತ ನೀಡಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಚ್.ಮಂಜಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿದೆ. ನನ್ನ ಬಳಿ ಹಣವಿಲ್ಲದಿದ್ದರೂ ಜನರಿಗೆ ಸದಾ ಸ್ಪಂದಿಸುವ ಗುಣವಿದೆ. ನನ್ನನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿ ಶ್ರಮಿಸುವೆ ಎಂದರು.ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಮಾಜಿ ಸಚಿವ ಡಿ.ಬಿ.ಜಯಚಂದ್ರ, ಎಂಎಲ್ಸಿ ಅಬ್ದುಲ್ ಜಬ್ಬರ್, ಜೆಡಿಎಸ್ ಎನ್.ಕೊಟ್ರೇಶ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ, ಕಲ್ಲೇರ್ ರುದ್ರೇಶ್ ಮಾತನಾಡಿದರು.
ಮುಖಂಡರಾದ ಡಿ.ಬಸವರಾಜ, ಎಂ.ಪಿ.ವೀಣಾ, ಎಚ್.ಬಿ.ಪರಶುರಾಮಪ್ಪ, ಮಹಾಂತೇಶ್ ಚರಂತಿಮಠ, ಕೆ.ಸಿ.ಪಾಲಯ್ಯ, ಎಸ್.ಮಂಜುನಾಥ್, ಶಿವಕುಮಾರಸ್ವಾಮಿ, ಬೇಲೂರು ಅಂಜಪ್ಪ, ಎಂ.ವಿ.ಅಂಜೀನಪ್ಪ, ಪಿ.ಟಿ.ಭರತ, ಪೋಮ್ಯಾನಾಯ್ಕ, ಪ್ರಕಾಶ ಪಾಟೀಲ,ಎಂ.ಟಿ.ಬಸನಗೌಡ, ಮುತ್ತಗಿ ಜಂಬಣ್ಣ, ಡಿ.ಅಬ್ದುಲ್ ರೆಹಮಾನ, ಟಿ.ವೆಂಕಟೇಶ್, ನೀಲಗುಂದ ವಾಗೀಶ್ ಇತರರಿದ್ದರು.