ದಾವಣಗೆರೆ
ಬೆದರಿಕೆ ಪತ್ರ ಮೂಲಕ ಸುಗ್ರೀವಾಜ್ಞೆ ಹೊರಡಿಸಿರುವ ಬಿಜೆಪಿ ಸರ್ಕಾರ ಜನ ವಿರೋಧಿ, ರೈತ ವಿರೋಧಿ ಮಸೂದೆ ಜಾರಿಗೆ ತಂದಿದೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ಮಾರುಕಟ್ಟೆಯಿಂದ ಹೊರಗೆ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ಎಪಿಎಂಸಿ ಸಂಪೂರ್ಣ ಮುಚ್ಚಿ ಹೋಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆ ಹೆಸರಲ್ಲಿ ರೈತರ ಶೋಷಣೆ ನಡೆಯುತ್ತದೆ. ರೈತರು ಉದ್ಯಮಿಗಳ ಗುಲಾಮರಾಗಬೇಕಾಗುತ್ತದೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರು ಅಂಬಾನಿ ಕುಟುಂಬಕ್ಕೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಉದಾಹರಣೆ ಜಿಯೋಗೆ ಅವಕಾಶ ಮಾಡಿಕೊಟ್ಟು ಬಿಎಸ್‍ಎನ್‍ಎಲ್ ಸಂಸ್ಥೆಯನ್ನೇ ಮುಚ್ಚಿ ಹಾಕುತ್ತಿದ್ದಾರೆ. ಹೀಗೆ ಕೇಂದ್ರ ಸರ್ಕಾರ ತಮ್ಮ ಆಪ್ತರಿಗೆ ಅನುಕೂಲ ಮಾಡಿಕೊಟ್ಟಂತೆ ಎಪಿಎಂಸಿಯನ್ನ ಅದೇ ರೀತಿ ಮಾಡಲು ಮುಂದಾಗಿದ್ದಾರೆ ಎಂದರು.
ರಫೆಲ್‍ಗಿಂತ ನೂರುಪಟ್ಟು ಭ್ರಷ್ಟಾಚಾರ ಫಸಲ್ ಭೀಮಾ ಬೆಳೆ ವಿಮೆಯಲ್ಲಿ ನಡೆಯುತ್ತಿದೆ. ಭ್ರಷ್ಟಾಚಾರ ಆರೋಪ ಆಡಳಿತ ನಡೆಸಿದ ಎಲ್ಲಾ ಪಕ್ಷಗಳ ಮೇಲೆ ಇದೆ. ಆದರೆ ಸ್ವಾತಂತ್ರ್ಯದ ಬಳಿಕ ರೈತರ ದುಡ್ದನ್ನು ದೋಚಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದು ಆರೋಪಿಸಿದರು.
ಬೆಳೆ ನಷ್ಟವಾದ ರೈತರಿಗೆ ಕೊಟ್ಟಿದ್ದು ಕೇವಲ 4,900 ಕೋಟಿ ಮಾತ್ರ. ಸಂಗ್ರಹವಾಗಿದ್ದು ಸುಮಾರು 15 ಸಾವಿರ ಕೋಟಿಯಷ್ಟು ಎಂದು ಸಚಿನ್ ಮೀಗಾ ಆರೋಪಿಸಿದ ಅವರು, ಮುಂದಿನ ತಿಂಗಳು ರಾಜ್ಯದಲ್ಲಿ ಕಿಸಾನ್ ಯಾತ್ರೆ ಆರಂಭಿಸುವ ಮೂಲಕ ಹೋರಾಟ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ. ಶಿವಗಂಗಾ, ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಾತಿ ಶಿವಕುಮಾರ್, ಪ್ರವೀಣ್ ಕುಮಾರ್, ಮಾಯಕೊಂಡ ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹಾಲೇಶ್ ಬಸವನಾಳ್ ಸೇರಿದಂತೆ ಕಿಸಾನ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ