ದಾವಣಗೆರೆ:
ಚೈಲ್ಡ್ ಲೈನ್ ಕೊಲ್ಯಾಬ್, ಡಾನ್ ಬಾಸ್ಕೋ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈಲ್ಡ್ ಲೈಫ್ ಫೌಂಡೇಷನ್ ಆಫ್ ಇಂಡಿಯಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಅಂತರ್ಜಾಲ ಸುರಕ್ಷತೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನಗರದಲ್ಲಿ ಶುಕ್ರವಾರ ಮೌನ ಜಾಗೃತಿ ಜಾಥಾ ನಡೆಯಿತು.
ಇಲ್ಲಿನ ವಿನೋಬನಗರದ ಎಸ್‍ಎಸ್‍ಎಂಬಿ ಶಾಲೆಯಿಂದ ಆರಂಭಗೊಂಡ ಜಾಥಾವು ಪಿಬಿ ರಸ್ತೆ, ಅರುಣಟಾಕೀಸ್, ಬಿಎಸ್‍ಎನ್‍ಎಲ್ ರಸ್ತೆ, ರಾಮಕೃಷ್ಣ ಆಶ್ರಮ, ಪೊಲೀಸ್ ಕ್ವಾಟ್ರಸ್ ಹಿಂಭಾಗದಿಂದ ವಿನೋಬನಗರ 1ನೇ ಮೇನ್ ಚೌಡೇಶ್ವರಿ ದೇವಸ್ಥಾನದ ಮಾರ್ಗವಾಗಿ ಎಸ್‍ಎಸ್‍ಎಂ ಶಾಲೆಗೆ ತಲುಪಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾನ್ ಬಾಸ್ಕೋ ಸಂಸ್ಥೆಯ ಸಂಯೋಜಕ ಕೊಟ್ರೇಶ್, ಮಾದಕ ದ್ರವ್ಯ ವಸ್ತುಗಳ ತಡೆಗಟ್ಟಲು ಮೌನಜಾಗೃತಿಯನ್ನು ಪ್ರತಿ ವರ್ಷ ನವೆಂಬರ್‍ನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮಕ್ಕಳ ಹಕ್ಕುಗಳಿಗೆ ಸಂಬಂಧಪಟ್ಟಂತೆ ಮಕ್ಕಳಿಗೆ ಸಹಾಯವಾಗಲಿಕ್ಕೆ, ಸಮುದಾಯ, ಸರ್ಕಾರ, ಇಲಾಖೆ, ಸಂಘಟನೆಗಳು, ಯುವಕರು, ಪಂಚಾಯಿತಿಗಳು ಹೆಚ್ಚು ಸಹಾಯ ಮಾಡುವುದಕ್ಕೆ ಮುಂದೆ ಬರಬೇಕು. ಒಂದು ವಾರದಿಂದ ಮಕ್ಕಳ ಹಕ್ಕುಗಳ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂತರ್ಜಾಲ ದುಷ್ಪರಿಣಾಮ ಮತ್ತು ಮಾದಕ ವಸ್ತುಗಳಿಂದ ಯುವ ಜನತೆ ಎಚ್ಚೆತ್ತುಕೊಳ್ಳಬೇಕು. ಅಂತರ್ಜಾಲದಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳಿಂದ ಹೇಗೆ ರಕ್ಷಣೆ ಪಡೆಯಬೇಕೆಂಬ ಬಗ್ಗೆ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
