ಬೆಂಗಳೂರು
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರ ವ್ಯಾಪಕ ಚರ್ಚೆಯಾಗುತ್ತಿದ್ದರೆ, ರಾಜಧಾನಿ ಬೆಂಗಳೂರಿನಲ್ಲೂ ಸಣ್ಣ ಪ್ರಮಾಣದ “ರಾಮಮಂದಿರ” ನಿರ್ಮಾಣಕ್ಕೆ ಬಿಜೆಪಿಯಿಂದ ಸದ್ದಿಲ್ಲದೇ ಸಿದ್ಧತೆಗಳು ನಡೆಯುತ್ತಿವೆ. ಪಕ್ಕದಲ್ಲೇ 150 ಮೀಟರ್ ಎತ್ತರದ ರಾಮನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಆರ್. ಅಶೋಕ್, ನಗರದ ಪದ್ಮನಾಭನಗರದ ಹನುಮಗಿರಿ ತಪ್ಪಲಿನಲ್ಲಿ ರಾಮ ಮಂದಿರ ನಿರ್ಮಿಸಿ, ರಾಮನ ಬೃಹತ್ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿದ್ದಾರೆ.
ರಾಮ ಮಂದಿರದ ನಿರ್ಮಾಣದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದ್ದು, ರಾಮನ ಪ್ರತಿಮೆ ನಿರ್ಮಾಣದ ಹಿಂದೆ ರಾಜಕೀಯ ಉದ್ದೇಶಗಳಿರುವುದು ಸ್ಪಷ್ಟವಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಮನ ಪ್ರತಿಮೆ ನಿರ್ಮಿಸುವ ಮೂಲಕ ಭಾವನಾತ್ಮಕವಾಗಿ ಕ್ಷೇತ್ರದ ಜನರನ್ನು ಸೆಳೆಯುವ ಕಾರ್ಯಸೂಚಿ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಕಡಿಮೆ. ಹೀಗಾಗಿ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆರ್. ಅಶೋಕ್ ಮನಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕರೆ ಈ ರಾಮ ಮಂದಿರ ನಿರ್ಮಾಣದ ಯೋಜನೆ ಮಹತ್ವದ ಪಾತ್ರ ವಹಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








