ಬೆಳಗಾವಿ
ರಾಜ್ಯದಲ್ಲಿರುವ ಜಲಾಶಯಗಳ ಹಾಗೂ ಜಲಾಶಯಕ್ಕೆ ಸೇರುವ ನದಿಗಳ ಮಾರ್ಗದ ಹೂಳಿನ ಪ್ರಮಾಣವನ್ನು ಪತ್ತೆ ಹಚ್ಚಲು ಡ್ರೋನ್ ಬಳಸಿ ಸಮೀಕ್ಷೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಿಧಾನಪರಿಷತ್ತಿನಲ್ಲಿಂದು ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ, ರಾಜ್ಯದಲ್ಲಿರುವ ಜಲಾಶಯ ಹಾಗೂ ನದಿಗಳಲ್ಲಿ ಹೂಳು ತುಂಬಿರುವುದರಿಂದ ನದಿಗಳ ಮಾರ್ಗ ಬದಲಾಗಿದ್ದು, ರೈತರ ಬೆಳೆಗಳಿಗೆ ಹರಿದು ಹೋಗುತ್ತಿದ್ದು, ಸರ್ಕಾರ ಆದಷ್ಟು ಬೇಗ ಸಮಸ್ಯೆ ಪರಿಹರಿಸುವಂತೆ ಹೇಳಿದರು.
ಇದಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಉತ್ತರಿಸಿ, ಕೆಲ ತಿಂಗಳ ಹಿಂದೆ ಕೊಡಗಿನಲ್ಲಿ ಪ್ರವಾಹ ಉಂಟಾಗಿ ಗುಡ್ಡ ಕುಸಿತದಿಂದ ನದಿಗಳಲ್ಲಿ ಹೂಳು ತುಂಬಿದೆ. ಡ್ರೋನ್ ಸಮೀಕ್ಷೆಯನ್ನಾಧರಿಸಿ, ನದಿ ಮಾರ್ಗಗಳ ಬದಲಾವಣೆಗಳು ಏನಾದರೂ ಆಗಿದ್ದರೆ ಅದನ್ನು ಸರಿಪಡಿಸುವ ಕೆಲಸವನ್ನು ಇಲಾಖೆ ಮಾಡಲಿದ್ದು, ವರದಿ ಬಳಿಕ ಉತ್ತರಿಸುವುದಾಗಿ ಭರವಸೆ ನೀಡಿದರು.
ವೀಣಾ ಅಚ್ಚಯ್ಯ ಪ್ರಶ್ನೆಗೆ ಪೂರಕವಾಗಿ ಮಾತನಾಡಿದ ಬಿಜೆಪಿ ಸದಸ್ಯ ಸುನೀಲ್ ಸುಬ್ರಹ್ಮಣ್ಯ “ಕೊಡಗು ಪರಿಹಾರಕ್ಕೆ ರಾಜಕೀಯ ಬೇಡ’’ ಎನ್ನುವ ಹೇಳಿಕೆಗೆ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ಆಕ್ಷೇಪಕ್ಕೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ತಾವು ಸುನೀಲ್‍ಗೆ ಹೇಳುತ್ತೇನೆ. ಡಿ.ಕೆ.ಶಿವಕುಮಾರ್ ಜೊತೆ ಯಾರಾದರೂ ರಾಜಕೀಯ ಮಾಡಲು ಸಾಧ್ಯವೇ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
