ಕಾನೂನುಗಳ ಸರಳೀಕರಣ

ಬೆಂಗಳೂರು

      ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಲು ಕೆಲ ಕಾನೂನುಗಳನ್ನು ಸರಳೀಕರಣಗೊಳಿಸಲಾಗುವುದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ..

       ನಗರದ ಹೈಕೋರ್ಟ್ ಸಭಾಂಗಣದಲ್ಲಿ ರಾಜ್ಯ ಜಿಲ್ಲಾ ಮತ್ತು ತಾಲ್ಲೂಕು ವಕೀಲರ ಸಂಘಗಳ ಚುನಾಯಿತ ಪದಾಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನ-ಸಾಮಾನ್ಯರಿಗೂ ಕಾನೂನು ಅರಿವು, ತಿಳಿವಳಿಕೆ ಮೂಡಿಸಲು ಕೆಲ ಕಾನೂನುಗಳ ಸರಳೀಕರಣ ಮಾಡುವ ದಿಸೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು. .

       ಕೇಂದ್ರ ಸರ್ಕಾರ ಸೂಕ್ತ ಸಮಯಕ್ಕೆ ಅನುದಾಮ ನೀಡದಿದ್ದರೂ, ರಾಜ್ಯ ಸರ್ಕಾರವು ಯಾವುದೇ ರೀತಿಯಲ್ಲಿ ತಡೆ ಮಾಡದೆ, ರಾಜ್ಯ ವ್ಯಾಪ್ತಿಯ ನ್ಯಾಯಾಲಯ ಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ಮುಂದೆಯೂ ಇದೇ ರೀತಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ದೇಶದಲ್ಲಿಯೇ ಅತಿ ಉನ್ನತ ಕಾನೂನು ಶಾಲೆ ಕರ್ನಾಟಕದಲ್ಲಿದೆ. ಇನ್ನೂ, ಈ ಕಾಲೇಜಿನ ಆವರಣ ವ್ಯಾಪ್ತಿಯೊಳಗೆ ಶೀಘ್ರದಲ್ಲೇ ಸಭಾಂಗಣ ನಿರ್ಮಾಣ ಮಾಡಲಾಗುವುದು. ಅದೇ ರೀತಿ, ಇತರೆ ಕಾಲೇಜಿನ ಅಭಿವೃದ್ಧಿಗೂ ಬದ್ಧವಾಗಿರುವುದಾಗಿ ಅವರು ತಿಳಿಸಿದರು.

       ಪ್ರತಿ ವರ್ಷ ಲೋಕೋಪಯೋಗಿ ಇಲಾಖೆ ಯಿಂದ ನ್ಯಾಯಲಯಗಳಿಗೆ ಮೂಲ ಸೌಕರ್ಯ ಒದಗಿಸುವ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದ ಅವರು, ವಕೀಲಯ ಕಲ್ಯಾಣ ನಿಧಿಗೆ ಐದು ಕೋಟಿ ಬಿಡುಗಡೆ ಮಾಡಲಾಗಿದೆ. ಸ್ಟೆಪೆಂಟ್ 2 ವರ್ಷವರೆಗೂ ನೀಡುತ್ತಿದ್ದೇವೆ ಎಂದರು.

ಗ್ರಾಮೀಣ ಸೇವೆ ಕಡ್ಡಾಯ       ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡಿರುವ ಮಾದರಿಯಲ್ಲಿಯೇ, ವಕೀಲರಿಗೂ ಗ್ರಾಮೀಣ ಸೇವೆ ಇರಬೇಕು ಎಂದು ಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದರು.

     ನಾವು ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸೀಟು ಪಡೆದುಕೊಂಡು, ಉತ್ತಮ ವಕೀಲರಾದರೂ, ಹಳ್ಳಿಗಡೆಗೆ ಗಮನ ನೀಡುವುದನ್ನು ಕಡಿಮೆ ಮಾಡಿದ್ದೇವೆ.ಆದರೆ, ದೇಶದಲ್ಲಿ ಶೇಕಡ 90ರಷ್ಟಿನ ಪ್ರಕರಣಗಳು ಹಳ್ಳಿಗಳ ಸಮಸ್ಯೆಗೆ ಸಂಬಂಧಪಟ್ಟಿವೆ . ಇದನ್ನು ನಾವು ಬಗೆಹರಿಸಬೇಕು.ಹೀಗಾಗಿ, ವಕೀಲರ ಸೇವೆ ಹಳ್ಳಿಗೆ ತಲುಪಬೇಕು ಎಂದು ನುಡಿದರು.

      ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎಂಬ ಮಾತಿನಂತೆ, ಇಂದಿನ ಯುವ ವಕೀಲರೇ, ಮುಂದಿನ ನ್ಯಾಯಮೂರ್ತಿಗಳು, ಹಾಗಾಗಿ, ನಮ್ಮ ದೇಶದಲ್ಲಿ ವಕೀಲ ಪಾತ್ರ ಬಹು ಮುಖ್ಯವಾಗಿದೆ.ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಸಲಹೆ ಮಾಡಿದರು.

      ನ್ಯಾಯಾಲಯ ಇರುವುದು ಜನರಿಗಾಗಿ ಹೊರತು, ಜನರು ನ್ಯಾಯಾಲಯಕ್ಕೆ ಅಲ್ಲ ಎಂದ ಅವರು, ಸ್ಥಳೀಯ ಭಾಷೆಗಳನ್ನು ಉತ್ತೇಜನ ನೀಡಬೇಕು. ಜೊತೆ, ಹೊಸ ವಕೀಲರಿಗೆ ಉತ್ತಮ ಸಲಹೆ, ಮಾರ್ಗದರ್ಶನ ದೊರೆಯಬೇಕು ಎಂದು ನುಡಿದರು.
ಕಾನೂನು ಬದಲಾವಣೆ    ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ರಂಗನಾಥ ಮಾತನಾಡಿ, ಕೆಲ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ವಕೀಲರು ಹೋದ ಸಂದರ್ಭದಲ್ಲಿ ಅಲ್ಲಿನ ಠಾಣಾಧಿಕಾರಿಗಳ ಆಸ್ತಿ ಕೇಳಿದಂತೆ ನಡೆದುಕೊಳ್ಳುತ್ತಾರೆ. ಹೀಗಾಗಿ, ಕೆಲ ಕಾನೂನು ಬದಲಾವಣೆ ಆಗಬೇಕು. ಶೀಘ್ರದಲ್ಲೇ ರಾಜ್ಯ ವಕೀಲರ ಬೃಹತ್ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

       ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್, ಹೈಕೋರ್ಟ್ ನ್ಯಾ.ರವಿ.ವಿ.ಮಳಿಮಠ, ಅಡ್ವೋಕೆಟ್ ಜನರಲ್ ಉದಯ್ ಹೊಳ್ಳ, ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಸೇರಿದಂತೆ ಪ್ರಮುಖರಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ