ತುಮಕೂರು:
ನಿರುದ್ಯೋಗ ಪದವೀಧರರು ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಪಿ.ಕರಬಸಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪ್ರಸ್ತುತ ಪ್ರಾಂಶುಪಾಲನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷನಾಗಿ, ರಾಜ್ಯ ಪದವಿಪೂರ್ವ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷನಾಗಿ ಸಂಘಟನೆಯಲ್ಲಿ ತೊಡಗಿಕೊಂಡು, ಶಿಕ್ಷಕರು ಮತ್ತು ಉಪನ್ಯಾಸಕರ ಸಮಸ್ಯೆ ಕುರಿತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವರಿಗೆ ಸ್ಪಂದಿಸಿದ್ದೇನೆ ಎಂದರು.
ಈಗಾಗಲೇ ನಾನು ಈ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದು, ಈಗ ಮೂರನೇ ಬಾರಿಗೆ ಆಗ್ನೇಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಪದವೀಧರ ಮತದಾರರು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ನಿರುದ್ಯೋಗ ಪದವೀಧರರ ಸಮಸ್ಯೆ ಬಗೆಹರಿಸಲು ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ಕೊಡಿಸುವುದು, ಅನುದಾನಿತ ನೌಕರರಿಗೆ ಸಂಬಂಧಿಸಿದಂತೆ ಅನುದಾನರಹಿತ ಸೇವೆ ಪರಿಗಣಿಸುವ ಮಾಜಿ ಸಚಿವರಾದ ಬಸವರಾಜ ಹೊರಟ್ಟಿ ಅವರು ನೀಡಿದ ವರದಿ ಪ್ರಕಾರ 2006 ಏಪ್ರಿಲ್ 1ರ ಹಿಂದೆ ಸೇವೆಗೆ ಸೇರಿ ಮೊದಲು ಹಾಗೂ ನಂತರ ಅನುದಾನಕ್ಕೊಳಪಟ್ಟವರಿಗೆ ವೇತನ ನಿಗದಿ ಹಾಗೂ ಹಳೆ ಪಿಂಚಣಿ ಮಂಜೂರಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಗುತ್ತಿಗೆ ಆಧಾರದ ಮೇಲೆ ನೇಮಕ ಹೊಂದಿದ ಸರ್ಕಾರಿ ನೌಕರರ ಸೇವೆ ಪರಿಗಣಿಸುವುದು, 2006 ಏಪ್ರಿಲ್ 1ರ ನಂತರ ನೇಮಕವಾದ ಸರ್ಕಾರಿ ಹಾಗೂ ಅನುದಾನಿತ ಸಿಬ್ಬಂದಿಗೆ ಈ ಹಿಂದೆ ಇದ್ದ ಹಳೆ ಪಿಂಚಣಿ ಯೋಜನೆ ಮುಂದುವರೆಸುವುದು, ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರುಗಳ ಹುದ್ದೆ ಖಾಲಿಯಾದ ತಕ್ಷಣ ಭರ್ತಿ ಮಾಡಿಕೊಳ್ಳಲು ಅನುಮತಿ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರಿ ಕಾಲೇಜಿನ ಉಪನ್ಯಾಸಕರಿಗೆ ಈಗ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳುವ ಕಾಯ್ದೆಗೆ ಕೂಡಲೇ ಬಡ್ತಿ ನೀಡುವುದು, ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು ಹಾಗೂ ಅನುದಾನಕ್ಕೆ ಒಳಪಡಿಸುವವರೆಗೆ ಸರ್ಕಾರಿ, ಅನುದಾನಿತ ನೌಕರರಂತೆ ಸೇವಾ ಭದ್ರತೆ ಒದಗಿಸುವುದು, ಕೇಂದ್ರ ಮಾದರಿ ವೇತನವನ್ನು ರಾಜ್ಯ ನೌಕರರಿಗೂ ವಿಸ್ತರಿಸಲು ಹೋರಾಟ, ಕಾಲಮಿತಿ ಬಡ್ತಿ, ಸಮಯಕ್ಕೆ ಸರಿಯಾಗಿ ವೇತನ, ಕಡತ ವಿಲೇವಾರಿ ಹಾಗೂ ಇತರೆ ಬೇಡಿಕೆಗಳನ್ನು ಕೂಡಲೇ ಮಂಜೂರು ಮಾಡುವುದು, ವರ್ಗಾವಣೆಯನ್ನು ನಿಗಧಿತ ಸಮಯದಲ್ಲಿ ಹಾಗೂ ಸರಳೀಕರಣಗೊಳಿಸುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ಜಯದೇವಪ್ಪ, ಚಂದ್ರೇಗೌಡ, ಸುರೇಶ್, ತಮ್ಮಣ್ಣ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ