ಸಂಗೀತಕ್ಕೆ ಬದುಕು ರೂಪಿಸಿಕೊಡುವ ಶಕ್ತಿ ಇದೆ

ಚಿತ್ರದುರ್ಗ;

        ಸಾಹಿತ್ಯ ಮತ್ತು ಸಂಗೀತ ಬದುಕಿನ ಎರಡು ಕಣ್ಣುಗಳು. ಅವುಗಳ ಮುಖೇನ ನಮ್ಮ ಬದುಕನ್ನು ಬೆಳಗಿಸಿಕೊಳ್ಳಬೇಕು. ಸಂಗೀತಕ್ಕೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿಇದೆ. ಮನವನ್ನು ಅರಳಿಸಿ ಹೃದಯವನ್ನು ಉದ್ದೀಪಿಸಿ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರೊಂದಿಗೆ ಬದುಕುವ ರೀತಿ-ನೀತಿಗಳನ್ನು ಕಲಿಸುತ್ತದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

        ನಾಗರತ್ನಮ್ಮ ಸಾಂಸ್ಕತಿಕ ವೇದಿಕೆ ಮತ್ತು ನಾಟ್ಯೋದಯ ಕಲಾಸಂಘ, ಚಿತ್ರದುರ್ಗ ಇವುಗಳ ಆಶ್ರಯದಲ್ಲಿ ತ.ರಾ.ಸು. ರಂಗಮಂದಿರದಲ್ಲಿ ಜರುಗಿದ ಮನತುಂಬಿ ಹಾಡು ಬಾ ಗಾಯನ ಸ್ಪರ್ಧೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಂಗೀತ, ಜ್ಞಾಪನ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶಾಂತಿ-ಸಮಾಧಾನ ನೀಡುತ್ತದೆ. ಜಗತ್ತಿನ ಜೀವ-ಜಂತುಗಳು ಸಹ ನಾದಕ್ಕೆ ತಲೆದೂಗುತ್ತವೆ. ಇತ್ತೀಚಿಗೆ ಸಂಗೀತ ತೋಟಗಳನ್ನು ನಿರ್ಮಾಣ ಮಾಡುವುದರೊಂದಿಗೆ ಗಿಡ-ಮರಗಳು ಸಹ ಸಂಗೀತಕ್ಕೆ ಮಾರು ಹೋಗಿವೆ ಎಂದು ಸಂಶೋಧನೆ ಮಾಡಲಾಗಿದೆ. ಗಾಯನ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳು ತಮ್ಮ ಹಾಡುಗಳನ್ನು ಹಾಡುವ ಮುಖೇನ ಲೋಕ ಪ್ರಸಿದ್ದಿಯಾಗಿದ್ದಾರೆ. ಈ ದಿಸೆಯಲ್ಲಿ ಸಂಗೀತ ಜಾಗೃತಿ ಮೂಡಿಸುವುದರೊಂದಿಗೆ ಮುಂದಿನ ಜನಾಂಗಕ್ಕೆ ಅದನ್ನು ಹಸ್ತಾಂತರಿಸುವ ಕಾರ್ಯ ಜರುಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

        ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಿರಂಜನ ದೇವರಮನೆ ಮಾತನಾಡಿ ಸಂಗೀತಕ್ಕೆ ತನ್ನದೆ ಆದ ಇತಿಹಾಸ, ಪರಂಪರೆ ಇದೆ. ಧಾರ್ಮಿಕ ಹಿನ್ನೆಲೆ ಹೊಂದಿರುವ ಇದು ಸಾಹಿತ್ಯ, ಗಾನ, ನೃತ್ಯ ಈ ಮೂರು ಪ್ರಕಾರಗಳನ್ನು ಮೇಳೈಸಿಕೊಂಡು ಮನಸಿಗೆ ಮುದ ನೀಡುತ್ತದೆ. ಸಂಗೀತ ಹಾಗೂ ಗಾಯನವನ್ನು ಆಧುನಿಕತೆಗೆ ಮುಖಾಮುಖಿಯಾಗಿಸಿಕೊಂಡು ಅಸ್ಮಿತೆಯನ್ನು ಹಾಗೆ ಉಳಿಸಿಕೊಳ್ಳಬೇಕಿದೆ. ಹೊಸ-ಹೊಸ ಸಾಧ್ಯತೆಗಳಿಗೆ ಸಂಗೀತವನ್ನು ಹೊಂದಿಸಿಕೊಂಡು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅದನ್ನು ಮತ್ತಷ್ಟು ವಿಸ್ತರಿಸುವ ಕಾರ್ಯ ನಡೆಸಬೇಕಿದೆ.

       ಪ್ರತಿಭಾ ಶೋಧನೆಯ ಮುಖೇನ ಹೊಸ-ಹೊಸ ಗಾಯನ ಪ್ರತಿಭೆಗಳನ್ನು ಹೊರತಂದು ಅವರ ಗಾಯನ ಕಲೆಯನ್ನು ಪ್ರದರ್ಶಿಸಬೇಕು. ಸಪ್ತ ಸ್ವರಗಳು ಹಾಗೂ ರಾಗ, ಭಾವ, ತಾಳದೊಂದಿಗೆ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ, ಪ್ರೇಕ್ಷಕರನ್ನು ರಂಜಿಸಬೇಕು ಅವರ ಜೀವನಕ್ಕೆ ಸಂಗೀತದ ಮೂಲಕ ಸಂಸ್ಕಾರ-ಸಂಸ್ಕತಿ ಸಿಂಚನ ಮಾಡುವುದರೊಂದಿಗೆ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

        ಮುಖ್ಯ ಅತಿಥಿಗಳಾಗಿ ಖ್ಯಾತಗಾಯಕರಾದ ಶ್ರೀ ಸುರೇಶ ಕೇಸಾಪುರ, ಶ್ರೀಮತಿ ಕೋಕಿಲ ರುದ್ರಮುನಿ ಹಾಗೂ ಶ್ರೀ ಡಿ.ಮಂಜೂನಾಥ್ ಹಾಗೂ ರಂಗಭೂಮಿ ಕಲಾವಿದ ಶ್ರೀ ಗಿರೀಶ್ ರಾಗಿ, ಉಪಸ್ಥಿತರಿದ್ದರು ಸುಮಾರು 20 ಕಿರಿಯ ಮತ್ತು ಹಿರಿಯ ಪ್ರತಿಭೆಗಳು ತಮ್ಮ ಗಾಯನದ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap