ಶಿರಾ ಭಾಗದ ಬತ್ತಿದ ಅಂತರ್ಜಲಕ್ಕೆ ಇಂಬು ನೀಡದ ವರುಣ

ಶಿರಾ:

   ಬಾರದ ಮಳೆ, ಬೆಳೆಯದ ಫಸಲು, ಮೊಳಕೆಯೊಡೆದು ಮಳೆ ಬಾರದೆ ಬತ್ತಿ ಹೋಗುವ ಬೆಳೆ, ಅಂತರ್ಜಲ ಕುಸಿದು ಒಣಗಿ ಹೋದ ತೋಟ-ತುಡಿಕೆಗಳ ದಾರುಣ ಚಿತ್ರಣಗಳು ಶಿರಾ ಭಾಗದ ರೈತಾಪಿ ವರ್ಗದ ಕಣ್ಣಿಗೆ ರಾಚುತ್ತಿವೆ.ಎತ್ತ ನೋಡಿದರೂ ಬತ್ತಿದ ಕೆರೆಗಳು, ಒಣಗಿದ ತೋಟಗಳು, ಕೃಷಿ ಕಾಯಕ ಮಾಡಲಾಗದೆ ಬೇಸತ್ತು ಕೂತ ರೈತಾಪಿ ವರ್ಗದ ಕನಸು ನನಸಾಗುವ ರೀತಿಯಲ್ಲಿ ವರುಣನ ಅವಕೃಪೆ ಶಿರಾ ಭಾಗದ ಬರದ ಬೀಡಿಗೆ ಆಗುತ್ತಿಲ್ಲ.

     ಪ್ರಸಕ್ತ ವರ್ಷ ಉತ್ತಮ ಮಳೆ ಬಂದು ಶಿರಾ ಭಾಗವು ಸಮೃದ್ಧಗೊಳ್ಳುತ್ತದೆ ಎಂಬ ನಿರೀಕ್ಷೆ ರೈತರಲ್ಲಿತ್ತು. ಇನ್ನೇನು ಮುಂಗಾರು ಮಳೆ ಕೈ ಕೊಟ್ಟಿತು ಅನ್ನುವಷ್ಟರಲ್ಲಿ ತಾಲ್ಲೂಕಿನ ಒಂದೆರಡು ಹೋಬಳಿಗಳ ಅದರಲ್ಲೂ ಬೆರಳೆಣಿಕೆಯ ಗ್ರಾಮಗಳಲ್ಲಿ ಹದ ಮಳೆ ಬಂದು ರೈತರಲ್ಲಿ ಆಸೆಯನ್ನು ಚಿಗುರಿಸಿದ್ದು ಸರಿಯಷ್ಟೇ.

     ತಾಲ್ಲೂಕಿನ ಹುಲಿಕುಂಟೆ, ಗೌಡಗೆರೆ, ಕಸಬಾ ಭಾಗದ ಕೆಲವೇ ಕೆಲವು ಗ್ರಾಮಗಳ ಭಾಗಗಳಲ್ಲಿ ಕಳೆದ ತಿಂಗಳು ಒಂದಿಷ್ಟು ಹದ ಮಳೆಯಾದಾಗ ಆ ಭಾಗದ ರೈತರು ಭೂಮಿ ಹಸನು ಮಾಡಿಕೊಂಡರೆ ಮತ್ತಲವು ರೈತರು ಬಿತ್ತನೆ ಕಾರ್ಯವನ್ನು ಆರಂಭಿಸಿದ್ದರು. ಮುಂಗಾರು ಹಂಗಾಮಿನ ಚುರುಕನ್ನು ಕಂಡ ರೈತರು ಭೂಮಿ ಹಸನು ಮಾಡಿಕೊಂಡ ಪರಿಯನ್ನು ಕಂಡರೆ ರೈತರ ಮೊಗದಲ್ಲಿ ಉತ್ತಮ ಮಳೆಯ ಆಶಾ ಭಾವನೆಯಂತೂ ಮೂಡಿದ್ದು ಸರಿಯಷ್ಟೆ.

     ರಣ ಬಿಸಿಲ ದಗೆ ಅಂತ್ಯಗೊಂಡಿತಾದರೂ ರೈತರು ಸಮೃದ್ಧಿಗೊಳ್ಳುವಷ್ಟು ಬಾರದ ಮಳೆ ರೈತನ ಆಶಾ ಭಾವನೆಗಳಿಗೆ ಸೆಡ್ಡು ಹೊಡೆದಂತಾಗಿದೆ. ಪ್ರತಿ ದಿನವೂ ಮೋಡ ಕವಿದ ವಾತಾವರಣ ಇನ್ನೇನು ಮಳೆ ಬರುತ್ತದೆನ್ನುವ ಸೂಚನೆಗೆ ಇಂಬು ನೀಡುವಂತೆ ದಟ್ಟನೆಯ ಮೋಡ ಕವಿದು ಮಳೆಯ ವಾಸನೆ ಮೂಗಿಗೆ ಬಡಿದರೂ ಕಾಣಿಸಿಕೊಂಡ ಮೋಡಗಳನ್ನು ಅಷಾಡದ ಗಾಳಿ ಬೀಸಿ ಕವಿದ ಮೋಡಗಳನ್ನು ಎತ್ತಲೋ ಕೊಂಡೊಯ್ದು ರೈತರು ಹಾಗೂ ಸಾರ್ವಜನಿಕರನ್ನು ಕಂಗಾಲಾಗುವಂತೆ ಮಾಡಿದೆ.ತಾಲ್ಲೂಕಿನ ಕೆಲವೆಡೆ ತುಂತುರು ಮಳೆ ಹನಿದು ಭೂಮಿಯನ್ನು ಕೊಂಚ ತಣಿಸಿದರೂ ರೈತರಿಗೆ ನೆಮ್ಮದಿ ನೀಡುವಷ್ಟು ಮಳೆ ಈವರೆಗೂ ಬಾರಲೇ ಇಲ್ಲ. ಮುಂಗಾರಿನಲ್ಲಿ ಕೆಲವೆಡೆ

ಮಳೆಯಾದ ಪರಿಣಾಮ ಕೆಲ

    ರೈತರು ಬಿತ್ತಿದ ಶೇಂಗಾ ಬೀಜಗಳು ಮೊಳಕೆಯೊಡೆದು ಕಮರುವ ಹಂತ ತಪುಪಿದ್ದು ಮಳೆಗಾಗಿ ಹಪಹಪಿಸುವುದು ಅನಿವಾರ್ಯವಾಗಿದೆ. ಒಣಗುತ್ತಿರುವ ತೋಟಗಳನ್ನು ನೋಡಿ ಸಂಕಟವನ್ನು ತಡೆಯಲಾಗದೆ ಬಹುತೇಕ ರೈತರು ಕೊಳವೆ ಬಾವಿ ಕೊರೆಸಿ ನೀರೂ ಕೂಡಾ ಲಭ್ಯವಾಗದೆ ಜೇಬು ಖಾಲಿ ಮಾಡಿಕೊಂಡ ನಿದರ್ಶನಗಳು ಸಾಕಷ್ಟಿವೆ.

     ಕಳೆದ ವರ್ಷ ಕನಿಷ್ಟ ತಾಲ್ಲೂಕಿನ ಕೆಲವು ಕೆರೆ-ಕಟ್ಟೆಗಳಾದರೂ ತುಂಬಿದ್ದವಾದರೂ ಈ ವರ್ಷ ಬಹುತೇಕ ಕೆರೆಗಳು ವರುಣನಿಗಾಗಿ ಕಾದು ಕೂತಿವೆ. ಭೂಮಿಯನ್ನು ಹಸನು ಮಾಡಿಕೊಂಡು ಬೀಜಗಳನ್ನೂ ಕೂಡಿಟ್ಟುಕೊಂಡ ಕೆಲ ರೈತರು ಮಳೆಗಾಗಿ ಕಾದು ಕೂತಿದ್ದರೆ ಮತ್ತಲವರು ಮಳೆ ಬಾರದಿದ್ದರೆ ತಾವು ಕೊಂಡು ತಂದ ಬೀಜದ ಗತಿಏನು? ಎಂದು ಸಂಕಟಪಡುವಂತಾಗಿದೆ.

      ಕೃಷಿ ಇಲಾಖೆ ನಿಗಧಿಪಡಿಸಿಕೊಂಡಂತೆ ಜುಲೈ 3 ರೊಳಗೆ 166 ಮಿ.ಮೀ. ಬರಬೇಕಿದ್ದ ಮಳೆ 191 ಮಿ.ಮೀ. ನಷ್ಟು ಬಂದಿದ್ದರೂ ಚದುರಿದಂತೆ ಅಲ್ಲಿಲ್ಲಿ ಬಂದ ಈ ಮಳೆಯಿಂದ ರೈತರಿಗೆ ಯಾವುದೇ ಪ್ರಯೋಜನವೂ ಆಗಿಲ್ಲ. ತಾಲ್ಲೂಕಿನಲ್ಲಿ 61030 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯನ್ನು ಗುರಿಯನ್ನು ಹೊಂದಿದ್ದು ಇದುವರೆಗೂ ಕೇವಲ ಶೇ. 8 ರಷ್ಟು ಮಾತ್ರ ಬಿತ್ತನೆಯಾಗಿದೆ. ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು 37510 ಹೆಕ್ಟೇರ್ ನಲ್ಲಿ ಬಿತ್ತನೆಯಾಗಬೇಕಿದ್ದ ಶೇಂಗಾ ಕೇವಲ 225 ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆಯಾಗಿದೆ.

     ಮಳೆಯ ಆಶಾ ಭಾವನೆಯನ್ನು ಹೊಂದಿರುವ ಕೃಷಿ ಇಲಾಖೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ರೈತರಿಗೆ ರಿಯಾಯಿತಿ ಧರದಲ್ಲಿ ನೀಡಲು ಶೇಖರಿಸಿಕೊಂಡಿದೆ. ತಾಲ್ಲೂಕಿನ ಬಹುತೇಕ ರೈತರಿಗೆ ಮೇವಿನ ಅಬಾವ ಕಂಡು ಬಂದರೂ ಆರಂಭಿಸಿದ್ದ ಮೇವು ಬ್ಯಾಂಕುಗಳಲ್ಲಿ ಮೇವನ್ನು ಕೂಡಾ ವಿತರಿಸದ ಅಧಿಕಾರಿಗಳು ಕೈ ಚೆಲ್ಲಿ ಕೂತಿದ್ದಾರೆ. ಮೇವನ್ನು ಒದಗಿಸಲು ಸಾದ್ಯವಿಲ್ಲವೆಂದು ಗುತ್ತಿಗೆದಾರ ತಾಲ್ಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದು ಮೇವನ್ನು ಪಡೆಯಲಾಗದೆ ರೈತರು ಕೂಡಾ ಬೇಸತ್ತು ಕೂತಿದ್ದಾರೆ.

     ಒಟ್ಟಾರೆ ಬಾರದ ಮಳೆಯಿಂದ ಈ ವರ್ಷ ಇಡೀ ತಾಲ್ಲೂಕಿನ ಕೆರೆಗಳು ಒಣಗಿ ಕೂತಿದ್ದು ಮುಂಬರುವ ಬರದ ಸೂಚನೆಯ ಲಕ್ಷಣಗಳನ್ನು ಕಂಡು ರೈತರು ಕಂಗಾಲಾಗುವಂತಹ ವಾತಾವರಣ ನಿರ್ಮಾಣಗೊಂಡಿದೆ. ಶಿರಾ ನಗರಕ್ಕೆ ನೀರು ಒದಗಿಸುವ ಶಿರಾ ದೊಡ್ಡ ಕೆರೆಯ ಜಲ ಸಂಗ್ರಹಾಗಾರದಲ್ಲಿನ ಹೇಮಾವತಿಯ ನೀರು ಕೂಡಾ ಖಾಲಿಯಾಗುವ ಹಂತ ತಲುಪಿದ್ದು ನಗರಸಭೆ ಈಗಿನಿಂದಲೇ ಪೂರ್ವಭಾವಿ ಕ್ರಮ ಕೈಗೊಳ್ಳದಿದ್ದಲ್ಲಿ ಜನತೆಯ ಶಾಪಕ್ಕೂ ಗುರಿಯಾಗಬೇಕಾಗುತ್ತದೆ.

    ಇನ್ನು ಗ್ರಾಮೀಣ ಪ್ರದೇಶಗಳಲ್ಲೂ ಕೂಡಾ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದ್ದು ಆಯಾ ಪಂಚಾಯ್ತಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮೀಣ ಜನತೆ ಗ್ರಾಮ ಪಂಚಾಯ್ತಿಗಳ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭನೆಗೂ ಮುಂದಾಗುವ ಮುನ್ನ ಜಾಗ್ರತೆ ವಹಿಸಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap