ಶಿರಾ:
ಶಿಕ್ಷಣವೇ ಶಕ್ತಿ, ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾದ್ಯ, ಅಕ್ಷರಸ್ಥ ಸಮಾಜ ನಿರ್ಮಾಣವೇ ನಮ್ಮ ಗುರಿ ಎಂದೆಲ್ಲಾ ಬೊಬ್ಬೆ ಹೊಡೆಯುವ ಸರ್ಕಾರಗಳು ಶೈಕ್ಷಣಿಕ ಅಭಿವೃದ್ಧಿಯ ನೆಪದಲ್ಲಿ ಕೋಟಿ ಕೋಟಿ ರೂಗಳ ಅನುದಾನವನ್ನು ಮಂಜೂರು ಮಾಡುತ್ತಿದ್ದರೂ ಇಂದು ಅನೇಕ ಶಾಲೆಗಳು ಸುಸಜ್ಜಿತ ಸೂರುಗಳಿಲ್ಲದೆ ತತ್ತರಿಸಿ ಹೋಗುತ್ತಿವೆ ಎಂಬ ಸತ್ಯದ ಸಂಗತಿ ಮಾತ್ರಾ ಅದೆಷ್ಟೋ ಸರ್ಕಾರಗಳ ಜನಪ್ರತಿನಿಧಿಗಳಿಗೆ ತಿಳಿದಿಲ್ಲವೇ ನೋ ಅನ್ನಿಸುತ್ತಿದೆ.
ಶಿರಾ ಒಂದು ಐತಿಹಾಸಿಕ ಸ್ಥಳವಷ್ಟೇ ಅಲ್ಲದೆ ಒಂದಲ್ಲಾ ಒಂದು ರೀತಿಯಲ್ಲಿ ಸದಾ ರಾಜ್ಯದ ಬಹುತೇಕ ವಿಚಾರಗಳಿಗೆ ಸಂಬಂಧಿಸಿದಂತೆ ಸದ್ದು ಮಾಡುತ್ತಲೇ ಇರುತ್ತದೆ. ಇಂತಹ ಏಳು-ಬೀಳುಗಳ ನಡುವೆಯೋ ಸ್ವಾತಂತ್ರ್ಯ ಲಭಿಸುವ ಸಂದರ್ಬದಲ್ಲಿ ನಿರ್ಮಾಣಗೊಂಡ ಅದೆಷ್ಟೋ ಶಾಲೆಗಳ ಕಟ್ಟಡಗಳು ಜೀಣೋದ್ಧಾರವನ್ನೂ ಕಾಣದೆ ಸದರಿ ಆಗಲೋ ಈಗಲೋ ಬೀಳುವ ಕಟ್ಟಡದಲ್ಲಿಯೇ ಕುಳಿತು ಮಕ್ಕಳು ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಶಿರಾ ನಗರದ ಅದರಲ್ಲೂ ಕ್ಷೇತ್ರ ಶಿಕ್ಷಣ ಇಲಾಖೆಯ ಕೂಗಳತೆಯ ದೂರದಲ್ಲಿಯೇ ಅತ್ಯಂತ ಹಳೆಯದಾದ ಅಂದರೆ ಸುಮಾರು 65 ವರ್ಷಗಳ ಅತ್ಯಂತ ಹಳೆಯದಾದ ಶಾಲಾ ಕಟ್ಟಡವೊಂದಿದ್ದು ಅದರ ಹಿಂದಿನ ಹೆಸರು ಶಿರಾ ಮುನಿಸಿಫಲ್ ಹೈಸ್ಕೂಲು. ನಗರದ ಪ್ರವಾಸಿ ಮಂದಿರದ ವೃತ್ತದ ಬಳಿಯೇ ಇರುವ ಈ ಹೈಸ್ಕೂಲನ್ನು ಈಗ ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗವನ್ನಾಗಿಸಿ ಕೈತೊಳೆದುಕೊಳ್ಳಲಾಯಿತೇ ಹೊರತು ಸದರಿ ಶಾಲಾ ಕಟ್ಟಡಗಳನ್ನು ಸುಸಜ್ಜಿತವಾಗಿ ಕಟ್ಟಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳುವ ಕೆಲಸವನ್ನು ಮಾತ್ರಾ ಈ ಕ್ಷೇತ್ರದ ಶಾಸಕರಾರೂ ಮಾಡಲೇ ಇಲ್ಲ.
ಸದರಿ ಮುನಿಸಿಫಲ್ ಹೈಸ್ಕೂಲಿನ ಜಾಗದಲ್ಲಿ ಪ್ರಪ್ರಥಮವಾಗಿ ಮೈಸೂರು ರಾಜ್ಯದ ಅರಸು ಜಯ ಚಾಮರಾಜ ಒಡೆಯರ್ ಅವರು 30.7.1947ರಲ್ಲಿ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಎರಡೇ ವರ್ಷದಲ್ಲಿ ಶಿಲಾನ್ಯಾಸವನ್ನು ನೆರವೇರಿಸಿದರು. 27.4.1955ರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆ.ಹನುಮಂತಯ್ಯ ಅವರು ನೂತನ ಶಾಲಾ ಕಟ್ಟಡದ ುದ್ಘಾಟನೆಯನ್ನೂ ಮಾಡಿದ್ದರು.
ಇಲ್ಲಿಂದ ಆರಂಭಗೊಂಡ ಶಿರಾ ತಾಲ್ಲೂಕಿನ ಪ್ರಪ್ರಥಮ ಹೈಸ್ಕೂಲು ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ ಗಣ್ಯರ ಪಟ್ಟಿಯನ್ನು ಕಂಡರೆ ನಿಜಕ್ಕೂ ಅಚ್ಚರಿಯಾಗದೇ ಇರದು. ಇತ್ತೀಚೆಗಷ್ಟೆ ನಿಧನರಾದ ಶಾಸಕ ಬಿ.ಸತ್ಯನಾರಾಯಣ್, ಮಾಜಿ ಶಾಸಕರಾದ ಸಾ.ಲಿಂಗಯ್ಯ, ಹಿರಿಯ ಸಾಹಿತಿ ದಿವಂಗತ ಟಿ.ಸುಬ್ಬರಾವ್, ಮಾಜಿ ಶಾಸಕ ದಿವಂಗತ ಎಸ್.ಕೆ.ದಾಸಪ್ಪ, ಎಸ್.ಕೆ.ಹಿರಿಯ ಸಹಕಾರಿ ದುರೀಣ ಎಸ್.ಎನ್.ಕೃಷ್ಣಯ್ಯ, ಎಸ್.ಕೆ.ದಾಸಪ್ಪ, ಖ್ಯಾತ ವೈದ್ಯರಾದ ಡಾ.ಶಂಕರ್, ಡಾ.ವಿನಯ್, ಸಹಕಾರಿ ಕ್ಷೇತ್ರದ ಬಿ.ವಿ.ಪ್ರಭು…ಹೀಗೆ ಈ ಶಾಲೆಯ ಸೂರಿನಡಿ ಓದಿದ ಬಹುತೇಕ ಮಂದಿ ಇಂದು ಉನ್ನತ ಸ್ಥಾನಗಳನ್ನು ಅಲಂಕರಿಸಿದ ನಿದರ್ಶನಗಳಿವೆ.
ಬಿ.ಸತ್ಯನಾರಾಯಣ್ ಮೊದಲಿಗೆ ಶಾಸಕರಾಗಿ ಆಯ್ಕೆಗೊಂಡ ಸಂದರ್ಬದಲ್ಲಿ ಕಾರ್ಮಿಕ ಸಚಿವರೂ ಆಗಿದ್ದಾಗ ಸದರಿ ಮುನಿಸಿಫಲ್ ಶಾಲಾ ಕಟ್ಟಡಕ್ಕೆ ಹೊಂದಿಕೊಂಡಂತೆ ಮೂರು ಕೊಠಡಿಗಳನ್ನು ತಮ್ಮ ಅನುದಾನದಲ್ಲಿ ನಿರ್ಮಾಣ ಮಾಡಿಸಿಕೊಟ್ಟಿದ್ದನ್ನು ಬಿಟ್ಟರೆ ಉಳಿದಂತೆ ಯಾವುದೇ ಕೊಠಡಿಗಳನ್ನು ನೂತನವಾಗಿ ನಿರ್ಮಿಸಿಕೊಡುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಲೇ ಇಲ್ಲ.
ತಾವು ಓದಿದ ಶಾಲೆಯ ಸನಿಹವೇ ಇರುವ ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನವನ್ನು ನೀಡಿದ ಕೀರ್ತಿ ಮಾಜಿ ಶಾಸಕ ದಿ.ಎಸ್.ಕೆ.ದಾಸಪ್ಪ ಅವರದ್ದು.ಈ ನಡುವೆ ರಾಜಕೀಯ ಏಳುಬೀಳುಗಳು ನಿರಂತರವಾಗಿ ನಡೆದು ಕಾಲ ಸವೆಯುತ್ತಾ ಹೋದರೂ ಈ ಹಳೆಯ ಮುನಿಸಿಪಲ್ ಶಾಲೆಗೆ ಹೊಂದಿಕೊಂಡಿರುವ ಸರ್ಕಾರಿ ಪ.ಪೂ. ಕಾಲೇಜಿನ ಕಟ್ಟಡದ ಅಭಿವೃದ್ಧಿಗೆ ಬಹುತೇಕ ಶಾಸಕರು ಅನುದಾನವನ್ನು ಸುರಿದರೇ ಹೊರತು. ಈ ಹಳೆಯ ಹೈಸ್ಕೂಲು ಕಟ್ಟಡ ಮಾತ್ರಾ ಯಾರ ಕಣ್ಣಿಗೂ ಬೀಳಲೇ ಇಲ್ಲ.
ಹಿಂದಿನ ಕಾಲದಲ್ಲಿ ಗಾರೆಯನ್ನು ರುಬ್ಬಿ ಕಟ್ಟಿದ ಶಾಲಾ ಕೊಠಡಿಗಳ ಮೇಲ್ಚಾವಣಿ ಮಳೆಯ ನೀರಿನಿಂದ ನೆನೆದು ಸೋರುತ್ತಿವೆ. ಕೊಠಡಿಯೊಳಗಿನ ದಾಖಲೆಗಳು ಕೂಡಾ ವಿನಾಶದ ಅಂಚು ತಲುಪುತ್ತಿವೆ. ಮಕ್ಕಳು ಕೂರುವ ಪ್ರತಿಯೊಂದು ಕೊಠಡಿಗಳೂ ಸೋರುತ್ತಿದ್ದು ಮೇಲ್ಚಾವಣಿಯ ಗೋಡೆಗಳ ಮಣ್ಣು ಕುಸಿದು ಬೀಳುತ್ತಲೇ ಇದೆ. ಮಕ್ಕಳು ಇದೇ ಕೊಠಡಿಯಲ್ಲಿ ಕೂತು ಪಾಠ ಕೇಳಬೇಕಿದ್ದು ಶಾಲೆ ಆರಂಭವಾದ ಕೂಡಲೇ ಮಕ್ಕಳು ಎಲ್ಲಿ ಕೂತು ಪಾಠ ಕೇಳುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿದೆ.
ಈ ನಡುವೆ ಸದರಿ ಶಾಲೆಗೆ ವರ್ಗವಾಗಿ ಬಂದ ಉಪ ಪ್ರಾಂಶುಪಾಲರುಗಳು ನೂತನ ಕೊಠಡಿಗಳ ಮಂಜೂರಾತಿಗೆ ಕಂಡ ಕಂಡ ಜನಪ್ರತಿನಿಧಿಗಳ ಬೆನ್ನುಹತ್ತಿದ್ದಾರೆ. ಕೊಠಡಿಗಳನ್ನು ಮಂಜೂರು ಮಾಡಿಸುವಂತೆ ಶಿಕ್ಷಣ ಇಲಾಖೆಗೂ ಸರ್ಕಾರಕ್ಕೂ ಪತ್ರ ಬರೆದಿದ್ದಾರೆಯೇ ಹೊರತು ಈವರೆಗೂ ಒಂದೇ ಒಂದು ನೂತನ ಕೊಠಡಿ ನಿರ್ಮಿಸಿಕೊಡುವ ವ್ಯವದಾನವೂ ಈ ಭಾಗದ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ. ಬೀದಿಯಲ್ಲಿ ನಿಂತುಕೊಂಡು ಮಕ್ಕಳು ಮಧ್ಯಾನ್ಹದ ಊಟ ಮಾಡುವುದನ್ನು ಕಂಡ ಸಮಾಜ ಸೇವಕ ಡಾ.ಸಿ.ಎಂ.ರಾಜೇಶ್‍ಗೌಡ ನೂತನ ಅನ್ನಪೂರ್ಣ ಊಟದ ಪ್ರಾಂಗಣವನ್ನು ತಮ್ಮದೇ ಸ್ವತಂ ಖರ್ಚಿನಲ್ಲಿ ನಿರ್ಮಿಸಿಕೊಟ್ಟಿದ್ದಾರೆ.
ಸದ್ಯಕ್ಕೆ ಕೋವಿಡ್‍ನಿಂದ ಶಾಲೆ ಆರಂಭಗೊಂಡಿಲ್ಲವಾದ್ದರಿಂದ ಪ್ರಾಂಶುಪಾಲರು ಹಾಗೂ ಸಿಬ್ಬಂಧಿ ಪ್ರಾಂಶುಪಾಲರ ಕೊಠಡಿಯಲ್ಲಿ ಕೂರುತ್ತಿದ್ದು ದಿನ ದಿನಕ್ಕೂ ಉದುರುತ್ತಿರುವ ಮೇಲ್ಚಾವಣಿಯ ಮಣ್ಣು ಅವರಿಗೂ ಜೀವ ಭಯವನ್ನುಂಟು ಮಾಡುತ್ತಿದೆ. ನೂತನವಾಗಿ ವರ್ಗವಾಗಿ ಬಂದ ಪ್ರಾಂಶುಪಾಲರಿಗೂ ಶಾಲೆಯ ಅಭಿವೃದ್ಧಿ ಕುರಿತ ಇಚ್ಚಾಶಕ್ತಿ ಇದ್ದು ಅದಕ್ಕೆ ಇಲ್ಲಿನ ಎಸ್.ಡಿ.ಎಂ.ಸಿ. ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸದಸ್ಯರ ಸಹಕಾರವೂ ಇದೆ. ಇನ್ನಾದರೂ ಸರ್ಕಾರ 65 ವರ್ಷ ಹಳೆಯದಾದಾದ ಮೈಸೂರು ರಾಜರ ಕಾಲದ ಈ ಹೈಸ್ಕೂಲಿಗೆ ನೂತನ ಕೊಠಡಿಗಳನ್ನು ಮಂಜೂರು ಮಾಡುವುದೇನೋ ಕಾದು ನೋಡಬೇಕಿದೆ.
ಇದೆಲ್ಲದಕ್ಕೂ ಭಿನ್ನವಾಗಿ ಇದೇ ಶಾಲೆಯಲ್ಲಿ ಓದಿ ಬೆಳೆದು ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಗಣ್ಯ ಮಾನ್ಯರಾದರೂ ಮಕ್ಕಳು ಕೂರಲು ಸೂರು ನಿರ್ಮಿಸಿಕೊಡುವ ಉದಾರತನ ತೋರುವರೇನೋ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








