ಶಿರಾ
ಮಹಾಮಾರಿ ಕೊರೋನಾ ಸೋಂಕಿನಿಂದ ಇಡೀ ದೇಶವೇ ತತ್ತರಿಸಿದೆ. ವೈದ್ಯರು, ದಾದಿಯರು, ಆರಕ್ಷಕರು ಒಂದು ರೀತಿಯಲ್ಲಿ ಸೈನಿಕರಂತೆ ಕೊರೋನಾ ವಿರುದ್ಧ ಪ್ರಬಲ ಹೋರಾಟ ನಡೆಸಿರುವಂತಹ ಸಂದರ್ಭದಲ್ಲಿ ಇಲ್ಲೊಬ್ಬ ಮಹಿಳಾ ತಹಸೀಲ್ದಾರ್ ಐದು ತಿಂಗಳ ಗರ್ಭಿಣಿಯಾಗಿದ್ದರೂ ರಜೆಯ ಮೇಲೆ ಮನೆಗೂ ತೆರಳದೆ ಕಳೆದ ಒಂದೂವರೆ ತಿಂಗಳಿಂದಲೂ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವುದು ಜನತೆಯ ಪ್ರಶಂಸೆಗೆ ಕಾರಣವಾಗಿದೆ.
ಶಿರಾ ತಾಲ್ಲೂಕಿನ ಮಹಿಳಾ ತಹಸೀಲ್ದಾರ್ ನಾಹಿದಾ ಜಮ್ ಜಮ್ ಐದು ತಿಂಗಳ ಗರ್ಭಿಣಿ. ಕೊರೋನಾ ಸೋಂಕಿನ ಹರಡುವಿಕೆಯನ್ನು ಕಂಡು ಜನತೆ ಲಕ್ಷ್ಮಣ ರೇಖೆ ಹಾಕಿಕೊಂಡು ಮನೆಯಲ್ಲಿರುವಂತಹ ಸಂದರ್ಭದಲ್ಲಿ ಈ ಮಹಿಳಾ ತಹಸೀಲ್ದಾರ್ ತಮ್ಮ ಕುಟುಂಬವನ್ನು ಸೇರದೆ ಶಿರಾ ತಾಲ್ಲೂಕಿನಲ್ಲಿಯೇ ಕಳೆದ ಒಂದೂವರೆ ತಿಂಗಳಿಂದಲೂ ಬೀಡು ಬಿಟ್ಟು ತಾಲ್ಲೂಕು ಆಡಳಿತಕ್ಕೆ ಕೊರೋನಾ ಹೋರಾಟದ ಕಿಚ್ಚು ತುಂಬುತ್ತಿದ್ದಾರೆ.
ಮಾರ್ಚ್.27ರಂದು ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕೊರೋನಾ ಸೋಂಕಿನ ವ್ಯಕ್ತಿ ಪತ್ತೆಯಾಗಿ ಮೃತಪಟ್ಟಿದ್ದು ಶಿರಾ ನಗರದಲ್ಲಿ. ರಾಜ್ಯದಲ್ಲಿಯೇ ಶಿರಾ ಎಂದಾಕ್ಷಣ ಜನತೆಯಲ್ಲಿ ಭೀತಿಯುಂಟಾಗಿದ್ದರೂ ಅಂತಹ ಭೀತಿಯಲ್ಲೂ ತಾಲ್ಲೂಕು ಆಡಳಿತವನ್ನು ತೆಕ್ಕೆಗೆ ಹಾಕಿಕೊಂಡು ಕೊರೋನಾ ಹೋರಾಟಕ್ಕೆ ಈ ಮಹಿಳಾ ತಹಸೀಲ್ದಾರ್ ಅಣಿಯಾಗಿದ್ದು ನಿಜಕ್ಕೂ ಪ್ರಶಂಸೆಯ ಮಾತೂ ಕೂಡ ಹೌದು.
ಆಹಾರವಿಲ್ಲದೆ ಪರಿತಪಿಸುತ್ತಿರುವ ಬಡ ಕುಟುಂಬಗಳ ಸನಿಹಕ್ಕೆ ಹೋಗಿ ಸಮಸ್ಯೆ ಆಲಿಸುವಂತಹ, ಅಂತಹವರಿಗೆ ಪರಿಹಾರ ದೊರಕಿಸುವಂತಹ ಕೆಲಸಕ್ಕೂ ಈಕೆ ಮುಂದಾಗಿದ್ದಾರೆ.
ಲಾಕ್‍ಡೌನ್ ಆದಾಗಿನಿಂದಲೂ ಇಡೀ ತಾಲ್ಲೂಕಿನ ತುಂಬಾ ಓಡಾಡುತ್ತಾ ಬೀಡಿ, ಸಿಗರೇಟ್ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿರುವಂತೆ ತಾಲ್ಲೂಕಿನ ಜನತೆಯನ್ನು ಕೈ ಮುಗಿದು ಕೇಳಿಕೊಂಡಿದ್ದಾರೆ. ಮಂಗಳಮುಖಿಯರ ನಿವಾಸಗಳಿಗೂ ತೆರಳಿ ಅವರ ಆಹಾರದ ಕೊರತೆಯನ್ನು ನೀಗಿಸಿದ್ದಾರೆ.ಕೊರೋನಾ ಶಂಕೆಯಿಂದ ಕ್ವಾರೆಂಟೇನ್ ಆಗಿರುವವವರ ನಿವಾಸಗಳಿಗೂ ತೆರಳಿ ಅವರ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಗಮನ ಹರಿಸಿರುವುದಲ್ಲದೆ, ಮೃತ ವ್ಯಕ್ತಿಯ ಮನೆಯ ಸುತ್ತಲೂ ಮೇಲಧಿಕಾರಿಗಳ ಸೂಚನೆಯ ಮೇರೆಗೆ, ಸೀಲ್‍ಡೌನ್ ಮಾಡಿಸಿ ಕ್ಷಣ ಕ್ಷಣಕ್ಕೂ ಮಾಹಿತಿ ಪಡೆದು ಮೇಲಧಿಕಾರಿಗಳಿಗೆ ಒಪ್ಪಿಸುತ್ತಿದ್ದಾರೆ.
ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ್ ಅವರ ಸಹಕಾರ, ಜಿಲ್ಲೆಯ ಅಧಿಕಾರಿಗಳು, ಸ್ಥಳೀಯ ಆರಕ್ಷಕ ಅಧಿಕಾರಿಗಳ ಹಾಗೂ ಆಸ್ಪತ್ರೆಯ ಸಿಬ್ಬಂದಿಯ ಬೆಂಬಲವನ್ನು ಸ್ಮರಿಸುವ ಈ ಮಹಿಳಾ ತಹಸೀಲ್ದಾರ್ ಹಸಿದವರಿಗೆ ಅನ್ನ ನೀಡಲು ಮುಂದಾಗುತ್ತಿರುವ ಸಮಾಜ ಸೇವಕರ ಸೇವೆಗೆ ನಿಜಕ್ಕೂ ತಲೆ ಬಾಗಿದ್ದಾರೆ.
ಇದೆಲ್ಲಕ್ಕೂ ಮಿಗಿಲಾಗಿ ಆಕೆಯ ಪತಿ ಮೊಹತುರ್ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರ್ತವ್ಯಕ್ಕೆ ರಜೆ ಹಾಕಿ ತನ್ನ ಪತ್ನಿಯೊಂದಿಗೆ ಶಿರಾದಲ್ಲಿಯೇ ಉಳಿದು ಮಡದಿಯ ಕೊರೋನಾ ವಿರುದ್ಧದದ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ