ಶಿರಾ ತಾ.ಪಂ. ಸಾಮಾನ್ಯ ಸಭೆಯಲ್ಲಿ ರೈತರ ಅಳಲು

ಶಿರಾ

          ವಿವಿಧ ಇಲಾಖೆಗಳಿಗೆ ವಿವಿಧ ಯೋಜನೆಗಳಡಿಯಲ್ಲಿ ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಹಣದ ಜೊತೆ ಸಾಲ ಮಂಜೂರಾತಿ ಪತ್ರ ನೀಡಿದರೂ ಆಯಾ ಬ್ಯಾಂಕುಗಳ ವ್ಯವಸ್ಥಾಪಕರು ಮಾತ್ರ್ರ ಸಾಲವನ್ನೇ ಮಂಜೂರು ಮಾಡುವುದಿಲ್ಲ ಎಂದು ರೈತರ ಹಾಗೂ ಅರ್ಹ ಫಲಾನುಭವಿಗಳ ಸಮಸ್ಯೆಗಳನ್ನು ತಾ.ಪಂ. ಸದಸ್ಯರು ಸಾಮಾನ್ಯ ಸಭೆಯಲ್ಲಿ ತೋಡಿಕೊಂಡ ಪ್ರಸಂಗ ಬುಧವಾರ ನಡೆಯಿತು.

          ಬುಧವಾರದಂದು ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಕೈಗೊಳ್ಳಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅರ್ಹ ಫಲಾನುಭವಿಗಳ ಸಾಲ ಮಂಜೂರಾತಿ ಕುರಿತ ಚರ್ಚೆ ಸಭೆಯಲ್ಲಿ ನಡೆಯುತ್ತಿರುವಾಗ ಫಲಾನುಭವಿಗಳ ಸಂಕಷ್ಟದ ಬಗ್ಗೆ ಸದಸ್ಯ ಪುಟ್ಟರಾಜು ಸಭೆಯ ಗಮನ ಸೆಳೆದರು.

           ಸರ್ಕಾರಿ ಇಲಾಖೆಗಳಿಗೆ ವಿವಿಧ ಯೋಜನೆಗಳಡಿಯಲ್ಲಿ ಸರ್ಕಾರ ಮಂಜೂರು ಮಾಡಿ ಸಬ್ಸಿಡಿ ಹಣವನ್ನು ಬ್ಯಾಂಕಿಗೆ ತುಂಬಿದರೂ, ಅನೇಕ ಬ್ಯಾಂಕುಗಳ ವ್ಯವಸ್ಥಾಪಕರು ಫಲಾನುಭವಿಗಳಿಗೆ ಸಾಲವನ್ನೇ ನೀಡುತ್ತಿಲ್ಲ. ಮಳೆ-ಬೆಳೆ ಇಲ್ಲದೆ ರೈತರು ಪರಿತಪಿಸುತ್ತಿರುವ ಸಂದರ್ಭದಲ್ಲಿ ಬ್ಯಾಂಕುಗಳು ಕೂಡ ಫಲಾನುಭವಿಗಳನ್ನು ಅಲೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪುಟ್ಟರಾಜು ಸಮಸ್ಯೆಯನ್ನು ಮುಂದಿಟ್ಟರು.

        ಬ್ಯಾಂಕುಗಳಿಗೆ ಸಬ್ಸಿಡಿ ಹಣ ಪಾವತಿಸಿದ ನಂತರ ಅರ್ಹರನ್ನು ಗುರ್ತಿಸಿ ಸಾಲ ಮಂಜೂರು ಮಾಡುವಂತೆ ಬ್ಯಾಂಕುಗಳಿಗೆ ಸಲಹೆ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಈ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರ ಸಭೆ ಕರೆದು ಚರ್ಚಿಸಲಾಗುವುದು ಎಂದು ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷ ರಂಗನಾಥಗೌಡ ಭರವಸೆ ನೀಡಿದರು.

          ಮಳೆ-ಬೆಳೆ ಇಲ್ಲದೆ ರೈತರು ಸಂದಿಗ್ದ ಸ್ಥಿತಿಯಲ್ಲಿದ್ದ ಬೆಳೆಹಾನಿಯ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬೆಳೆ ವಿಮಾ ಹಣ ರೈತರಿಗೆ ಅತಿ ಜರೂರಾಗಿ ಲಭ್ಯವಾದಲ್ಲಿ ಅತಿ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಬರದ ತೀವ್ರತೆಯನ್ನು ಮನಗಂಡು ಕೃಷಿ ಇಲಾಖೆಯು ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್ ತಿಳಿಸಿದರು.

           ಕೃಷಿ ಇಲಾಖೆಯಿಂದ ರೈತರಿಗೆ ಬೆಳೆಗಳನ್ನು ಒಣಗಿಸಿಕೊಳ್ಳಲು ಹಾಗೂ ಮಳೆ ಆಧಾರಿತ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ನೀಡುವ ಟಾರ್ಪಾಲಿನ್‍ಗಳು ಅತ್ಯಂತ ಕಡಿಮೆ ಇದ್ದು ತಾಲ್ಲೂಕಿನ ಅನೇಕ ರೈತರಿಗೆ ಲಭ್ಯವಾಗಿಲ್ಲ. ಮತ್ತಷ್ಟು ಟಾರ್ಪಾಲಿನ್‍ಗಳನ್ನು ನೀಡುವುದು ಅಗತ್ಯವಿದೆ ಎಂದು ಕೆಲ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ವೈದ್ಯರ ನಿರ್ಲಕ್ಷ್ಯ:

        ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಹೆರಿಗೆಯನ್ನು ಮಾಡಲಾಗದೆ ಕೆಲ ವೈದ್ಯರು ಜಿಲ್ಲಾಸ್ಪತ್ರೆಗಳಿಗೆ ಗರ್ಭಿಣಿಯರನ್ನು ಕಳುಹಿಸುತ್ತಿದ್ದು ಬೇರೆ ಕಡೆ ಹೋದ ಅಂತಹ ಗರ್ಭಿಣಿಯರ ಹೆರಿಗೆಗಳು ಕೂಡ ಸಾಮಾನ್ಯ ಹೆರಿಗೆಯಾಗುತ್ತಿವೆ. ಆಸ್ಪತ್ರೆಯ ವೈದ್ಯರ ಇಂತಹ ಬೇಜವಾಬ್ದಾರಿತನಕ್ಕೆ ಮೊದಲು ಕಡಿವಾಣ ಹಾಕಿ ಎಂದು ಸದಸ್ಯ ಸಲಹೆ ನೀಡಿದರು.

         ತಾ.ವೈದ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ, ಇಂತಹ ಪ್ರಕರಣಗಳು ನಮ್ಮ ಗಮನಕ್ಕೆ ಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದಾಗ ತಾಲ್ಲೂಕಿನ ಅನೇಕ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್ ಕೊರತೆ ಇದ್ದು ಸಂಬಂಧಿಸಿದ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲು ತಾ.ಪಂ. ಸದಸ್ಯರು ವೈದ್ಯಾಧಿಕಾರಿಗೆ ಸಲಹೆ ನೀಡಿದರು.

ಕುಡಿಯುವ ನೀರು :

          ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಈ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ ಸಲಹೆ ನೀಡಿದರು. ಈ ಸಂಬಂಧ ಅಂತಹ ಗ್ರಾಮಗಳನ್ನು ಗುರ್ತಿಸಿ ಹೊಸ ಕೊಳವೆ ಬಾವಿ ಕೊರೆಸುವ ಮತ್ತು ಪೈಪ್‍ಲೈನ್ ಅಳವಡಿಸುವ ಕೆಲಸಗಳನ್ನು ಟಾಸ್ಕ್‍ಫೋರ್ಸ್ ಯೋಜನೆಯಡಿ ಕೈಗೊಳ್ಳಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.

ಅಂಗನವಾಡಿ ಕಟ್ಟಡ :

        ತಾಲ್ಲೂಕಿನ ಬಹುತೇಕ ಅಂಗನವಾಡಿ ಕಟ್ಟಡಗಳು ಬೀಳುವ ಹಂತದಲ್ಲಿದ್ದು ಕೆಲ ಅಂಗನವಾಡಿಗಳು ಬಾಡಿಗೆÉ ಕಟ್ಟಡದಲ್ಲಿ ನಡೆಯುತ್ತಿವೆ. ಕೂಡಲೇ ಅಂತಹ ಬಾಡಿಗೆ ಕಟ್ಟಡಗಳನ್ನು ಪಟ್ಟಿ ಮಾಡಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಿ ಎಂದು ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ಉಪಾಧ್ಯಕ್ಷ ರಂಗನಾಥಗೌಡ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ ಸಲಹೆ ನೀಡಿದರು. ತಾ.ಪಂ. ಇ.ಓ. ಮೋಹನ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link