ಬೆಂಗಳೂರು
ಸಿಎಎ, ಎನ್‌ಆರ್‌ಸಿ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಕ್‌ಸ್ತಾನ್ ಜಿಂದಾಬಾದ್ ಘೋಷಣೆ ಕೂಗಿ ಜೈಲು ಸೇರಿರುವ ಆರೋಪಿ ಅಮೂಲ್ಯ ಲಿಯೊನಳನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಸೋಮವಾರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಬೇರೆ ಕಡೆ ಆಕ್ರೋಶ ಭರಿತವಾದ ಭಾಷಣಗಳು ಮಾಡಿರುವ ಬಗ್ಗೆ ವಿಡಿಯೋಗಳನ್ನು ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಚಾರಗಳ ಮಾಹಿತಿ ಪಡೆದಿರುವ ಅಧಿಕಾರಿಗಳು ಅವುಗಳನ್ನಿಟ್ಟುಕೊಂಡು ಆರೋಪಿ ಅಮೂಲ್ಯ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ
ಆರೋಪಿ ಅಮೂಲ್ಯ ಬಂಧನವಾದ ಬಳಿಕ ಆಕೆಯ ಆಪ್ತ ಗೆಳೆಯರನ್ನು ವಿಶೇಷ ತನಿಖಾ ತಂಡ ಭಾನುವಾರ ವಿಚಾರಣೆ ಮಾಡಿದೆ ಆರೋಪಿ ಅಮೂಲ್ಯ ಲಿಯೊನ ತನ್ನ ಸ್ನೇಹಿತೆಯರ ಬಳಿ, ತಾನು ಪತ್ರಕರ್ತೆ ಗೌರಿ ಲಂಕೇಶ್ ರೀತಿ ಆಗುತ್ತೇನೆ ಎಂದು ಹೇಳಿಕೊಂಡಿದ್ದಳು ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಗೌರಿ ಲಂಕೇಶ್ ಸಾವಿನ ಬಳಿಕ ಹಲವು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಮೂಲ್ಯ ‘ನಾನು ಗೌರಿ’ ಕಾರ್ಯಕ್ರಮದಿಂದ ಪ್ರಭಾವಿತಳಾಗಿದ್ದು ನಾನು ಗೌರಿ ಲಂಕೇಶ್ ರೀತಿ ಆಗಬೇಕೆಂದು ನಿರ್ಧರಿಸಿದ್ದಾಳೆ ಸ್ನೇಹಿತೆಯರ ಬಳಿ ಹೇಳಿಕೊಂಡಿದ್ದಳು.
ಪತ್ರಕರ್ತೆ ಆಗಬೇಕೆಂದುಕೊಂಡು ಕನಸು ಕಂಡಿದ್ದ ಅಮೂಲ್ಯ ಪದವಿ ಅರ್ಧಕ್ಕೆ ಮೊಟುಕುಗೊಂಡ ಹಿನ್ನೆಲೆಯಲ್ಲಿ ಒಂದು ವರ್ಷದ ಪತ್ರಿಕೋದ್ಯಮ ಕೋರ್ಸ್ ಸೇರಿದ್ದಳು. ಕೋರ್ಸ್ ಮುಗಿದ ಬಳಿಕ ಪತ್ರಿಕೋದ್ಯಮ ಉದ್ಯೋಗ ಪಡೆಯಲು ಪ್ರಯತ್ನಿಸಿದ್ದಳು.
ನಾನು ಗೌರಿ’ ಕಾರ್ಯಕ್ರಮದ ಭಾಷಣಗಳಿಗೆ ಪ್ರಭಾವಿತಗೊಂಡಿದ್ದ ಅಮೂಲ್ಯ ಒಲವು ಪ್ರತಿಭಟನೆಯತ್ತ ಜಾರಿತ್ತು. ಪ್ರತಿಭಟನೆ ಬಳಿಕ ಪತ್ರಿಕೋದ್ಯಮದಲ್ಲಿ ಸೇರಿಕೊಳ್ಳಬೇಕಂದು ನಿರ್ಧರಿಸಿದ್ದಳು. ಎಡಪಂಥೀಯ ಧೋರಣೆ ಹೊಂದಿದ್ದ ಅಮೂಲ್ಯ ಸಾಕಷ್ಟು ಬಾರಿ ಗೌರಿಯ ಭಾಷಣಗಳನ್ನು ಕೇಳುತ್ತಿದ್ದಳು ಎಂದು ಆಕೆಯ ಸ್ನೇಹಿತೆಯರು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.