ಎಸ್.ಐ.ಟಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಸಿ ಎಂ …!!!!

ಬೆಂಗಳೂರು

     ರಾಜ್ಯಾದ್ಯಂತ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಕೈ ಬಿಡುವುದಾಗಿ ಬಿಜೆಪಿಯ ಹಿರಿಯ ನಾಯಕರು ಸಿಎಂ ಕುಮಾರಸ್ವಾಮಿ ಅವರಿಗೆ ರಹಸ್ಯ ಸಂದೇಶ ರವಾನಿಸಿದ್ದು ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತಿತರರ ವಿರುದ್ಧ ನಡೆಯಬೇಕಿದ್ದ ಎಸ್.ಐ.ಟಿ ತನಿಖೆ ಸಧ್ಯಕೆ ಸ್ಥಗಿತವಾಗಿದೆ.

     ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಕೈ ಬಿಡುತ್ತೇವೆ.ನೀವು ಎಸ್.ಐ.ಟಿ ತನಿಖೆ ನಡೆಸುವ ವಿಷಯದಲ್ಲಿ ಹಠ ಹಿಡಿಯಬೇಡಿ ಎಂಬ ಸಂದೇಶ ಬಿಜೆಪಿ ನಾಯಕರಿಂದ ಸಿಎಂ ಕುಮಾರಸ್ವಾಮಿ ಅವರಿಗೆ ರವಾನೆಯಾಗಿದೆ.

     ಯಡಿಯೂರಪ್ಪ ಅವರ ಆಡಿಯೋ ಪ್ರಕರಣದಿಂದ ಅಸಮಾಧಾನಗೊಂಡ ಬಿಜೆಪಿ ಹೈಕಮಾಂಡ್ ವರಿಷ್ಟರು,ಏನಾದರೂ ಮಾಡಿ ಪ್ರಕರಣಕ್ಕೆ ಜೀವ ಬರದಂತೆ ನೋಡಿಕೊಳ್ಳಿ.ಇಲ್ಲದಿದ್ದರೆ ಕರ್ನಾಟಕದಲ್ಲಿ ಮಾತ್ರವಲ್ಲ,ದೇಶಾದ್ಯಂತ ಲೋಕಸಭಾ ಚುನಾವಣೆಯನ್ನು ಎದುರಿಸಲು ಪಕ್ಷ ಮುಜುಗರ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಘಟಕದ ನಾಯಕರಿಗೆ ವಿವರಿಸಿದ್ದಾರೆ.

     ನಾವು ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಮುಖ್ಯವಲ್ಲ.ಲೋಕಸಭಾ ಚುನಾವಣೆಯ ನಂತರ ಯಾವ್ಯಾವ ಸನ್ನಿವೇಶಗಳು ಎದುರಾಗುತ್ತವೋ ನೋಡೋಣ.ಅಲ್ಲಿಯವರೆಗೆ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿಬಿಡಿ ಎಂದು ವರಿಷ್ಟರು ರಾಜ್ಯಘಟಕದ ನಾಯಕರಿಗೆ ಹೇಳಿದ್ದಾರೆ.

      ಈ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಹಲವು ನಾಯಕರು ಸಿಎಂ ಕುಮಾರಸ್ವಾಮಿ ಅವರೊಂದಿಗೆ ರಹಸ್ಯ ಚರ್ಚೆ ನಡೆಸಿದ್ದು,ಎಸ್.ಐ.ಟಿ ತನಿಖೆಗೆ ತರಾತುರಿ ಮಾಡಬೇಡಿ.ಮುಂದಿನ ದಿನಗಳಲ್ಲಿ ನಡೆಸಿದರೂ ಅದೊಂದು ಶಾಸ್ತ್ರದಂತೆ ಮುಗಿದು ಹೋಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

     ನಾವು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುವುದಿಲ್ಲ.ಹೀಗಾಗಿ ನೀವೂ ಎಸ್.ಐ.ಟಿ ತನಿಖೆಯ ವಿಷಯದಲ್ಲಿ ಪ್ರತಿಷ್ಟೆಗಿಳಿಯುವುದು ಬೇಡ ಎಂದು ಬಿಜೆಪಿಯ ರಾಜ್ಯ ನಾಯಕರು ಸಿಎಂ ಕುಮಾರಸ್ವಾಮಿ ಅವರಿಗೆ ವಿವರಿಸಿದ್ದಾರೆ.

      ಪಕ್ಷದಲ್ಲಿನ ಈ ವಿದ್ಯಮಾನಗಳನ್ನು ಕಂಡ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‍ನ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ,ನಾಗೇಂದ್ರ ಅವರಿಬ್ಬರೂ ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ವೈಯಕ್ತಿಕ ನೋವನ್ನು ತೋಡಿಕೊಂಡಿದ್ದಲ್ಲದೆ,ಯಾವ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದರು.

     ಅದರ ಮುಂದುವರಿದ ಭಾಗವಾಗಿ ಇಂದು ಕೂಡಾ ಶಾಸಕ ನಾಗೇಂದ್ರ ಅವರು ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ,ಇನ್ನು ಯಾವ ಕಾರಣಕ್ಕೂ ಬಿಜೆಪಿ ಕ್ಯಾಂಪಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ಹೀಗೆ ಆಪರೇಷನ್ ಕಮಲ ಕಾರ್ಯಾಚರಣೆಯಿಂದ ಹಿಂದೆ ಸರಿಯುವುದಾಗಿ ಬಿಜೆಪಿಯ ನಾಯಕರು ಹೇಳಿರುವುದರಿಂದ ಮತ್ತು ಬಾಂಬೆಯಲ್ಲಿ ವಾಸ್ತವ್ಯ ಹೂಡಿದ್ದ ಭಿನ್ನಮತೀಯ ಶಾಸಕರು ರಾಜ್ಯಕ್ಕೆ ಮರಳಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡಾ ಎಸ್.ಐ.ಟಿ ತನಿಖೆ ಬಗ್ಗೆ ನಿರಾಸಕ್ತಿ ತಾಳಿದ್ದಾರೆ.

     ಆಡಿಯೋ ಪ್ರಕರಣದ ಬಗ್ಗೆ ಎಸ್.ಐ.ಟಿ ತನಿಖೆ ನಡೆಸುವುದಾಗಿ ವಿಧಾನಸಭೆಯಲ್ಲಿ ಘೋಷಿಸಿ ಒಂದು ವಾರ ಕಾಲವಾದರೂ ತನಿಖೆಗೆ ಎಸ್.ಐ.ಟಿ ತಂಡ ರಚನೆಯಾಗಿಲ್ಲ.ಹಾಗೆಯೇ ಅದರ ನೇತೃತ್ವ ಯಾರಿಗೆ?ಅನ್ನುವುದೂ ನಿರ್ಧಾರವಾಗಿಲ್ಲ.

     ಇದೇ ಮೂಲಗಳ ಪ್ರಕಾರ,ಸರ್ಕಾರಕ್ಕೆ ಕಿರಿ ಕಿರಿಯಾದರೆ ಎಸ್.ಐ.ಟಿ ತನಿಖೆಗೆ ಸರ್ಕಾರ ಮುಂದಾಗಬಹುದು.ಇಲ್ಲದಿದ್ದರೆ  ಎಸ್.ಐ.ಟಿ ತನಿಖೆ ನಡೆಯವುದು ಅನುಮಾನ.ಅಕಸ್ಮಾತ್ ಹೇಳಿದ್ದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಎಸ್.ಐ.ಟಿ ರಚಿಸಿದರೂ ಅದು ಬಿಜೆಪಿಯ ಪಾಲಿಗೆ ತಲೆ ನೋವಾಗಿ ಪರಿಣಮಿಸುವುದಿಲ್ಲ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap