ಬೆಂಗಳೂರು
ಮಾಜಿ ಸಚಿವ ಹಾಗೂ ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ಮಂಗಳವಾರ ಮಧ್ಯಾಹ್ನ ವಿಧಾನಸೌಧಕ್ಕೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಐಎಂಎ ಸಮೂಹ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ವಿಶೇಷ ತನಿಖಾ ದಳ(ಎಸ್‍ಐಟಿ)ದ ಅಧಿಕಾರಿಗಳು ನೋಟೀಸ್ ಜಾರಿಗೊಳಿಸಿದ್ದಾರೆ.
ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಅಧಿಕಾರಿಗಳು ಗುರುವಾರ(ಜು.11)ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಗೊಳಿಸಿದ್ದು ರೋಷನ್‍ಬೇಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನೋಟೀಸ್ ಜಾರಿಗೊಳಿಸಿರುವುದು ಸರ್ಕಾರ ಐಎಂಎ ಅಸ್ತ್ರ ಪ್ರಯೋಗಿಸಿತೇ ಎಂಬ ಪ್ರಶ್ನೆಯೊಂದು ರಾಜಕೀಯ ಅಂಗಳದಲ್ಲಿ ಹುಟ್ಟಿಕೊಂಡಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ಈ ಹಿಂದೆ ಸಚಿವ ಜಮೀರ್ ಅಹ್ಮದ್ ಅವರಿಗೂ ಎಸ್‍ಐಟಿ ನೋಟಿಸ್ ನೀಡಿದ್ದು ನೋಟಿಸ್ ಪಡೆದ ಜಮೀರ್ ಅಹ್ಮದ್ ವಿಚಾರಣೆಗೆ ಹಾಜರಾಗಿದ್ದರು.ಐಎಂಎ ಸಮೂಹ ಸಂಸ್ಥೆಯ ಮುಖ್ಯಸ್ಥ ಮನ್ಸೂರ್‍ಖಾನ್ ಪರಾರಿಯಾಗುವ ಮುನ್ನ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ರೋಷನ್‍ಬೇಗ್ ಅವರಿಂದ ಅನ್ಯಾಯವಾಗಿರುವುದಾಗಿ ತಿಳಿಸಿದ್ದ ನನ್ನಿಂದ ಕೋಟಿಗಟ್ಟಲೆ ಹಣ ಪಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದನು
ಈ ಸಂಬಂಧ ತನಿಖೆ ನಡೆಸುತ್ತಿರುವ ಎಸ್‍ಐಟಿ ಅಧಿಕಾರಿಗಳು ಮನ್ಸೂರ್‍ಖಾನ್ ವಿಡಿಯೋದಲ್ಲಿ ಹೇಳಿಕೆ ಆಧರಿಸಿ ಉಪ ವಿಭಾಗಾಧಿಕಾರಿ ಎಲ್‍ಸಿ ನಾಗರಾಜ್ ಹಾಗೂ ನಿನ್ನೆಯಷ್ಟೇ ನಗರ ಜಿಲ್ಲಾಧಿಕಾರಿ ವಿಜಯ್‍ಶಂಕರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ಬೆನ್ನಲ್ಲೇ ರೋಷನ್ ಬೇಗ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಗೊಳಿಸಿದ್ದಾರೆ.