ಜಯನಗರದ ಐಎಂಎ ಮಳಿಗೆ ಮೇಲೆ ಎಸ್ ಐ ಟಿ ದಾಳಿ…!!!

ಬೆಂಗಳೂರು

     ಜಯನಗರದಲ್ಲಿರುವ ಐಎಂಎ ಜ್ಯುವೆಲರ್ಸ್ ಮಳಿಗೆಯ ಮೇಲೆ ದಾಳಿ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ) ಅಧಿಕಾರಿಗಳು 33 ಕೋಟಿ ರೂ. ಮೌಲ್ಯದ ಆಭರಣಗಳನ್ನು ಪತ್ತೆ ಹಚ್ಚಿ ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

     ಮಳಿಗೆ ಮೇಲೆ ಸೋಮವಾರ ದಾಳಿ ನಡೆಸಿದ್ದ ಅಧಿಕಾರಿಗಳು ಅಲ್ಲಿರುವ ಆಭರಣಗಳನ್ನು ವಶಪಡಿಸಿಕೊಂಡು ವಜ್ರ,ಚಿನ್ನ ಬೆಳ್ಳಿ ಬೇರೆ ಬೇರೆ ಮಾಡಿ ಮೌಲ್ಯಮಾಪಕರನ್ನು ಕರೆಸಿ ಲೆಕ್ಕ ಮಾಡಿದಾಗ ದೊರೆತಿರುವ ವಜ್ರ, ಚಿನ್ನ-ಬೆಳ್ಳಿ 33 ಕೋಟಿ ರೂ. ಮೌಲ್ಯದ್ದಾಗಿದೆ.ಮಳಿಗೆಯ ಲಾಕರ್ ಸೇರಿ ಯಾವುದೇ ಕಡೆಗಳಲ್ಲಿ ನಗದು ದೊರೆತಿಲ್ಲ. ಆದರೆ, ಚಿನ್ನ ನೀಡುವುದಾಗಿ ಹೂಡಿಕೆ ಮಾಡಿಕೊಂಡಿದ್ದ ಕಾಗದಪತ್ರಗಳು, ಇನ್ನಿತರ ದಾಖಲಾತಿಗಳು, ಕಂಪ್ಯೂಟರ್, ಲ್ಯಾಪ್‍ಟಾಪ್‍ಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ

    ಮಳಿಗೆಯಲ್ಲಿ ದೊರೆತಿರುವ ವಜ್ರ, ಚಿನ್ನ-ಬೆಳ್ಳಿ ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು ಅದರ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಗುವುದು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಜಯನಗರದ ಮಳಿಗೆಯಲ್ಲಿನ ಶೇ. 75ರಷ್ಟು ವಜ್ರ, ಚಿನ್ನವನ್ನು ಕೆಲ ದಿನಗಳ ಹಿಂದೆಯೇ ಬೇರೆಡೆ ಸಾಗಾಣೆ ಮಾಡಿರುವುದು ಕಂಡು ಬಂದಿದೆ. ಬಹುತೇಕ ಕಬೋರ್ಡ್‍ಗಳು ಖಾಲಿಯಾಗಿದ್ದವು. ಲಾಕರ್‍ಗಳನ್ನು ತೆಗೆಸಿ ಅದರಲ್ಲಿನ ಆಭರಣಗಳನ್ನು ವಶಪಡಿಸಿಕೊಂಡು ಲೆಕ್ಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

41 ಸಾವಿರ ದೂರು

       ಮನ್ಸೂರ್‍ನ ಇಬ್ಬರು ಪತ್ನಿಯರ ಮನೆ ಮೇಲೆ ದಾಳಿ ನಡೆಸಿ ಸುಮಾರು 2 ಕೆಜಿ ಚಿನ್ನ, 3 ಲಕ್ಷ ನಗದು, ಲ್ಯಾಪ್‍ಟಾಪ್ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಂಡು ಅವುಗಳನ್ನು ಪರಿಶೀಲನೆ ನಡೆಸಲಾಗಿದೆ. ಮನ್ಸೂರ್‍ಖಾನ್‍ನ ಬಹುತೇಕ ಸಂಬಂಧಿಕರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.

       ಐಎಂಎ ವಂಚನೆ ಸಂಬಂಧ ಇಲ್ಲಿಯವರೆಗೆ 41ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಅವುಗಳನ್ನು ಪರಿಶೀಲನೆ ನಡೆಸಿದಾಗ ಸುಮಾರು 1547 ಕೋಟಿ ರೂ. ವಂಚನೆಯಾಗಿರುವುದು ಪತ್ತೆಯಾಗಿದೆ. ದೂರಿನೊಂದಿಗೆ ಲಗತ್ತಿಸಿರುವ ದಾಖಲಾತಿಗಳಲ್ಲಿ ಹೂಡಿಕೆದಾರರು ಇಲ್ಲಿಯವರೆಗೆ ಪಡೆದಿರುವ ಬಡ್ಡಿಯ ಮಾಹಿತಿ ನೀಡಿದ್ದು, ಅದನ್ನು ಪರಿಶೀಲನೆ ನಡೆಸಲಾಗುತ್ತಿದೆ.

        ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಹಾಗೂ ವಿದೇಶದಲ್ಲಿರುವವರು ದೂರು ನೀಡುತ್ತಿದ್ದು, ವಂಚನೆಗೊಳಗಾದವರು ಇನ್ನೂ ದೂರು ನೀಡಲು ಬರುತ್ತಿರುವುದರಿಂದ ದೂರು ಸ್ವೀಕರಿಸುವ ಕೌಂಟರ್‍ನ ಇನ್ನು ಕೆಲವು ದಿನ ಮುಂದುವರೆಸಲಾಗುವುದು.

ದೂರುಗಳ ಪರಿಶೀಲನೆ

       ಬಂದ ದೂರುಗಳನ್ನು ಬಂಡಲ್ ಕಟ್ಟಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಎಸ್‍ಐಟಿಗೆ ಸಲ್ಲಿಸುತ್ತಿದ್ದಾರೆ.ಅವುಗಳನ್ನು ಪರಿಶೀಲಿಸಲಾಗುತ್ತಿದೆ. ವಂಚನೆಗೊಳಗಾದವರು ಮಾಹಿತಿ ನೀಡಲು ಎಸ್‍ಐಟಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನಾಗಿ ಇನ್ಸ್‍ಪೆಕ್ಟರ್ ಮೊಹ್ಮದ್ ಅವರನ್ನು ನೇಮಿಸಲಾಗಿದ್ದು, ಅವರನ್ನು ಸಂಪರ್ಕಿಸಬಹುದಾಗಿದೆ.

      ದೂರುಗಳ ಪರಿಶೀಲನೆ ವೇಳೆ ವಂಚನೆಗೊಳಗಾದವರಲ್ಲಿ ಬಹುತೇಕ ಮುಸ್ಲಿಂ ಜನಾಂಗದವರೇ ಆಗಿದ್ದು, ಅವರಲ್ಲಿ 35ರಷ್ಟು ಮಹಿಳೆಯರಿದ್ದಾರೆ. 1 ಲಕ್ಷದಿಂದ 1 ಕೋಟಿಯವರೆಗೆ ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವುದು ಪತ್ತೆಯಾಗಿದೆ.ಕೆಲವು ದೂರುಗಳಲ್ಲಿ 5 ರಿಂದ 6 ವರ್ಷಗಳ ಕಾಲ ಹಣ ತೊಡಗಿಸಿ ಬಡ್ಡಿ ಪಡೆದಿರುವುದು ಕಂಡು ಬಂದರೆ, ಬಹುತೇಕ ದೂರುಗಳು 2 ರಿಂದ 3 ವರ್ಷಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾಗಿರುವುದು ಪತ್ತೆಯಾಗಿದ್ದು, ದೂರುಗಳನ್ನು ವಿವರವಾಗಿ ಪರಿಶೀಲಿಸಿ ನಮೂದು ಮಾಡಿಕೊಳ್ಳಲಾಗುತ್ತಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link