ಹರಪನಹಳ್ಳಿ:
ವಿಶೇಷ ವರದಿ: ಸುರೇಶ್ ಮಂಡಕ್ಕಿ
ತಾಲ್ಲೂಕಿನ ನದಿ ತೀರದ ಹಳ್ಳಿಗಳು ಬಿಟ್ಟರೆ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ನಿತ್ಯದ ಕಾಯಕ ಬಿಟ್ಟು ಹನಿ ನೀರಿಗಾಗಿ ಹರಸಾಹಸ ಮಾಡಬೇಕಾಗಿದೆ. ಎರಡ್ಮೂರು ದಿನಕ್ಕೆ ಸರಬರಾಜಾಗುವ ನೀರಿಗಾಗಿ ಬಕ ಪಕ್ಷಿಯಂತೆ ಕಾಯುವ ಸ್ಥಿತಿ ಉದ್ಭವಿಸಿದೆ.
ಹರಪನಹಳ್ಳಿ ತಾಲ್ಲೂಕಿನಲ್ಲಿ ನಾಲ್ಕು ಹೋಬಳಿಗಳು, 37 ಗ್ರಾಮ ಪಂಚಾಯಿತಿ, 236 ಹಳ್ಳಿಗಳಿವೆ. ಹರಪನಹಳ್ಳಿ ವಿಧಾನಸಭಾ ವ್ಯಾಪ್ತಿಗೆ 30 ಗ್ರಾಮ ಪಂಚಾಯಿತಿ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ 7 ಗ್ರಾಮ ಪಂಚಾಯಿತಿ ಒಳಪಡುತ್ತವೆ. 47 ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಉದ್ಬವಿಸಿದೆ. 37 ಹಳ್ಳಿಗಳಿಗೆ 57 ಖಾಸಗಿ ಬೋರ್ ವೆಲ್ ಗಳಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. 10 ಗ್ರಾಮಗಳಿಗೆ ಬಾಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದು, ದಿನವೊಂದಕ್ಕೆ 73 ಟ್ರಿಪ್ ವಿತರಣೆ ಮಾಡಲಾಗುತ್ತಿದೆ.
ಟ್ಯಾಂಕರ್ ಮೂಲಕ ನೀರು: ತಾಳೇದಹಳ್ಳಿ, ಪಾವನಪುರ, ಕಸವನಹಳ್ಳಿ, ಜೋಶಿಲಿಂಗಾಪುರ, ಕೊಂಗನಹೊಸೂರು, ಕಂಚಿಕೆರೆ, ಅಣಜಿಗೆರೆ, ಅರಸೀಕೆರೆ, ಕಮ್ಮತ್ತಹಳ್ಳಿ ಕ್ಯಾಂಪ್, ತೌಡೂರು ತಾಂಡ/ಪುಣಬಗಟ್ಟಿ ತಾಂಡ ಒಟ್ಟು 10 ಗ್ರಾಮಗಳಿಗೆ ಬಾಡಿಗೆ ಟ್ರ್ಯಾಕ್ಟರ್ ಪಡೆದು ನೀರು ಪೂರೈಸಲಾಗುತ್ತಿದೆ.
ಖಾಸಗಿ ಕೊಳವೆಬಾವಿ:
ಹನುಮನಹಳ್ಳಿ, ಜಂಗಮತುಂಬಿಗೇರಿ, ಮಾದಿಹಳ್ಳಿ, ಗಡಿಗುಡಾಳು, ಎನ್.ಶೀರನಹಳ್ಳಿ, ಯಲ್ಲಾಪುರ, ಬಾಪೂಜಿನಗರ, ಉದ್ಗಟ್ಟಿ, ನಾರಾಯಣಪುರ, ನೀಲಗುಂದ, ಚನ್ನಹಳ್ಳಿ, ಮೈದೂರು, ಹಾರಕನಾಳು, ಹಾರಕನಾಳು ತಾಂಡಾ, ಹುಲಿಕಟ್ಟೆ, ಕಂಚಿಕೇರಿ, ಚನ್ನಾಪುರತಾಂಡ, ಅಳಗಂಚಿಕೇರೆ, ಹೊಂಬಳಗಟ್ಟಿ, ನಾಗರಕೊಂಡ, ಕಡಬಗೆರೆ, ಬಾಗಳಿ, ಕೂಲಹಳ್ಳಿ, ಕ್ಯಾರಕಟ್ಟೆ, ಚಿಗಟೇರಿ, ರಾಗಿಮಸಲವಾಡ ಸೇರಿದಂತೆ 37 ಗ್ರಾಮಗಳಿಗೆ ನೀರು ಪೂರೈಸಲು ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟಾಸ್ಕಪೊರ್ಸ್ ಸಮಿತಿಯಿಂದ ಹಾಗೂ ಇತರೆ ಸೇರಿ ಈವರೆಗೂ 1.50 ಕೋಟಿ ರೂ.ಬಿಡುಗಡೆಯಾಗಿದೆ. ಅನೇಕ ಭಾಗಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಕೆಲವಷ್ಟು ವಿಫಲಗೊಂಡಿದ್ದರೆ, ಇನ್ನು ಕೆಲವು ಕಡೆ ಅಲ್ಪಪ್ರಮಾಣದಲ್ಲಿ ನೀರು ಸಿಕ್ಕಿದೆ. ಇನ್ನೂ 50 ಲಕ್ಷ ರೂ.ಗಳ ಕ್ರಿಯಾಯೋಜನೆ ಆಗಬೇಕಿದೆ.
ಜನ-ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸಲು ಮಾರ್ಚ್ ಮತ್ತು ಏಪ್ರಿಲ್ನಲ್ಲಿ 39 ಹೊಸ ಕೊಳವೆಬಾವಿ ಕೊರೆಯಿಸಲಾಗಿದೆ. ಹಳ್ಳಿಯಲ್ಲಿ ನೀರಿನ ಗಂಭೀರ ಪರಿಸ್ಥಿತಿ ನಿರ್ಮಾಣವಾದರೆ, ತಕ್ಷಣ ಸ್ಪಂದಿಸಲು ಇಲಾಖೆ ಸಹಾಯವಾಣಿ ಆರಂಭಿಸಿದೆ. 08398-280145 ಸಂಖ್ಯೆಗೆ ಕರೆಮಾಡಿ ಗ್ರಾಮದ ಹೆಸರು, ಸಮಸ್ಯೆ ಬಗ್ಗೆ ಹೇಳಿದರೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಾರೆ’ ಎಂದು ಎಇಇ ಜಯಪ್ಪ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
