ಹೊನ್ನಾಳಿ:
ತಾಲೂಕಿನ ಹಿರೇಗೋಣಿಗೆರೆ ಗ್ರಾಪಂ ವ್ಯಾಪ್ತಿಯ, ತಾಲೂಕಿನ ಕೊನೇ ಭಾಗದ ಹಳ್ಳಿ ಹೊನ್ನೂರು ವಡ್ಡರಹಟ್ಟಿಯ ಜನತೆ ಹಾಗೂ ಜಾನುವಾರುಗಳು ಕುಡಿಯುವ ನೀರು ಇಲ್ಲದೇ ತತ್ತರಿಸಿಹೋಗಿವೆ. ತಾಲೂಕಿನ ಕೊನೇ ಭಾಗದ ಹಳ್ಳಿ ಹೊನ್ನೂರು ವಡ್ಡರಹಟ್ಟಿಯಲ್ಲಿನ 4 ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದ ಪರಿಣಾಮ ನೀರು ಇಲ್ಲದೇ ಜನರಿಗೆ ತೀವ್ರ ತೊಂದರೆಯಾಗಿದೆ.
ಇದನ್ನು ಮನಗಂಡ ಹಿರೇಗೋಣಿಗೆರೆ ಗ್ರಾಪಂ ಅಧ್ಯಕ್ಷ ಮಹೇಶ್, ಸದಸ್ಯರಾದ ರವಿಕುಮಾರ್, ಪ್ರೇಮ ನಾಗಪ್ಪ ಅವರು ಎಲ್ಲಾ ಸದಸ್ಯರ ಸಹಕಾರ ಪಡೆದು ಗ್ರಾಪಂ ವತಿಯಿಂದ ಟ್ರ್ಯಾಕ್ಟರ್ ಟ್ಯಾಂಕ್‍ರ್ ಮೂಲಕ ನೀರು ಪೂರೈಸಲು ಮುಂದಾಗಿದ್ದಾರೆ. ಪ್ರತಿ ನಿತ್ಯ ಚಿಕ್ಕಗೋಣಿಗೆರೆ ಹಾಗೂ ಹಿರೇಗೋಣಿಗೆರೆ ಗ್ರಾಮಗಳ ರೈತರ ಜಮೀನುಗಳ ಕೊಳವೆ ಬಾವಿಗಳಿಂದ ನೀರು ಪಡೆದು ಟ್ಯಾಂಕರ್ ಮೂಲಕ ಹೊನ್ನೂರು ವಡ್ಡರಹಟ್ಟಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷ ಮಹೇಶ್ ತಿಳಿಸಿದರು.
ಹೊನ್ನೂರು ವಡ್ಡರಹಟ್ಟಿಯಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಲಭಿಸಿಲ್ಲ. ಈ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರು ಪೂರೈಸಲು ಶಾಸಕರು ಗಮನಹರಿಸಬೇಕು. ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಪೂರೈಸಲು ತಾಪಂ ಇಒ ಹೆಚ್ಚು ಗಮನಹರಿಸಬೇಕು ಎಂದು ಮಹೇಶ್ ಹೇಳಿದರು.ಬೇಲಿಮಲ್ಲೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯರೂ ಆಗಿರುವ ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ ಈ ಕ್ಷೇತ್ರದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಮುಂದಾಗಬೇಕು ಎಂದು ಹೊನ್ನೂರು ವಡ್ಡರಹಟ್ಟಿ ಜನತೆ ಒತ್ತಾಯಿಸಿದ್ದಾರೆ.