ತುಮಕೂರು

ವಿಶೇಷ ವರದಿ:ರಾಕೇಶ್.ವಿ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಲಕ್ಷಾಂತರ ರೂ.ಗಳನ್ನು ವ್ಯಯ ಮಾಡಿ ಬಿಎಚ್ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಸ್ಕೈವಾಕರ್ಗಳನ್ನು ನಿರ್ಮಾಣ ಮಾಡಲಾಯಿತು. 2016-17ನೆ ಸಾಲಿನಲ್ಲಿಯೇ ಎರಡೂ ಸ್ಕೈವಾಕರ್ಗಳನ್ನು ಸಿದ್ಧಪಡಿಸಿ ಸಾರ್ವಜನಿಕ ಬಳಕೆಗೆ ಬಿಡಲಾಯಿತು. ಅಂದಿನಿಂದ ಇಂದಿನವರೆಗೂ ಸರಿಯಾದ ರೀತಿಯಲ್ಲಿ ಬಳಕೆಯಾಗದೆ, ಸೊರಗಿ ಹೋಗುತ್ತಿದೆ. ಸ್ಕೈವಾಕರ್ನಲ್ಲಿ ಅಳವಡಿಸಲಾದ ಲಿಫ್ಟ್ಗಳು ಹಾನಿಯಾಗಿದ್ದು ಅದಕ್ಕೆ ಖರ್ಚು ಮಾಡಿದ ಹಣ ವ್ಯರ್ಥವಾಗಿದೆ.
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಪಾದಾಚಾರಿಗಳು ರಸ್ತೆ ದಾಟಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಟೌನ್ಹಾಲ್ ವೃತ್ತದಲ್ಲಿ ವಾಹನಗಳ ಓಡಾಟ ಸಾಕಷ್ಟಿದ್ದು, ರಸ್ತೆ ದಾಟಲು ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಇಲ್ಲಿ ಸ್ಕೈವಾಕರ್ ಮಾಡಿದರೆ ಅನುಕೂಲವಾಗುವುದು ಎಂಬ ದೃಷ್ಟಿಯಿಂದ ಸ್ಕೈವಾಕರ್ ಮಾಡಿದರು. ಆದರೆ ಅದು ಬಳಕೆಯಾಗದೆ ವ್ಯರ್ಥವಾಗಿ ನಿಂತಿದೆ.
ಲಿಫ್ಟ್ಗಳಿಗೆ ಹಾನಿ
ಸ್ಕೈವಾಕರ್ನ ಎರಡೂ ಕಡೆಗಳಲ್ಲಿ ಲಿಫ್ಟ್ಗಳನ್ನು ಅಳವಡಿಸಲಾಗಿದೆ. ಮಕ್ಕಳು ಹಾಗೂ ವಯಸ್ಕರು ಸ್ಕೈವಾಕರ್ನ ಮೆಟ್ಟಿಲುಗಳನ್ನು ಹತ್ತಿ ಹೋಗಬಹುದು. ಆದರೆ ಹಿರಿಯರಿಗೆ ಮೆಟ್ಟಿಲುಗಳನ್ನು ಹತ್ತಲಾಗುವುದಿಲ್ಲ. ಈ ನಿಟ್ಟಿನಲ್ಲಿ ಹಿರಿಯರಿಗೆಂದು ಎರಡು ಕಡೆಗಳಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಈ ಲಿಫ್ಟ್ಗಳು ಒಂದು ದಿನವಾದರೂ ಆರಂಭವಾಗಿದ್ದು ಯಾರೂ ಕಂಡಿಲ್ಲ. ಬದಲಿಗೆ ಲಿಫ್ಟ್ಗಳಿಗೆ ಹಾನಿ ಆಗಿದ್ದು, ಮತ್ತೊಮ್ಮೆ ಅದನ್ನು ಸರಿಪಡಿಸಲು ಹಣ ಖರ್ಚು ಮಾಡಬೇಕಾಗಿದೆ.
ಕಳ್ಳರ ಕೈಚಳಕ ಇರಬಹುದೇ..?
ಸ್ಕೈವಾಕರ್ನಲ್ಲಿ ಕಳ್ಳತನ ಮಾಡಬಹುದಾದ ವಸ್ತುಗಳು ಏನೂ ಇಲ್ಲ. ಕಬ್ಬಿಣದ ರಾಡುಗಳನ್ನು ಕಿತ್ತು ತೆಗೆದುಕೊಳ್ಳಬೇಕು. ಅಷ್ಟು ಬಿಟ್ಟರೆ ಮತ್ತೇನೆ ತೆಗದುಕೊಂಡು ಹೋಗಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಲಿಫ್ಟ್ಗೆ ಅಳವಡಿಸಲಾಗಿರುವ ಯಂತ್ರಗಳನ್ನು ಕಳವು ಮಾಡುವ ನಿಟ್ಟಿನಲ್ಲಿ ಲಿಫ್ಟ್ ಅನ್ನು ಮೀಟಿರುವ ಅನುಮಾನಗಳು ಕಾಡತೊಡಗಿವೆ.
ಲಕ್ಷಾಂತರ ರೂಗಳು ವ್ಯರ್ಥವೇ ಸರಿ..!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಗರದ ಎರಡು ಕಡೆ ಸ್ಕೈವಾಕರ್ಗಳನ್ನು ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳ್ಳಿಗಳ ಬಳಿ ನಿರ್ಮಾಣ ಮಾಡಿದಂತೆ ನಗರದಲಿ ನಿರ್ಮಿಸಿದ್ದಾರೆ. ಆದರೆ ನಿರ್ವಹಣೆಯ ಗೊಂದಲಗಳಿಂದ ಬಳಕೆಯಾಗದಂತೆ ಧೂಳು ಹಿಡಿದು, ಸ್ವಚ್ಛತೆ ಇಲ್ಲದೆ ಯಾರೂ ಅತ್ತ ಸುಳಿಯದಂತಾಗಿದೆ.
ನಾಯಿಗಳ ಆವಾಸ ಸ್ಥಾನ
ಸ್ಕೈವಾಕರ್ ಅನ್ನು ಜನರು ಓಡಾಡಲೆಂದು ನಿರ್ಮಾಣ ಮಾಡಲಾಯಿತು. ಆದರೆ ಇಲ್ಲಿ ಮನುಷ್ಯರ ಬದಲಾಗಿ ನಾಯಿಗಳು ಮಲಗುತ್ತಿವೆ. ರಾತ್ರಿಯಾಗುತ್ತಲೇ ಸಾಕಷ್ಟು ನಾಯಿಗಳು ಸ್ಕೈವಾಕರ್ನಲ್ಲಿ ಮಲಗಿರುತ್ತವೆ. ಯಾರಾದರೂ ಸ್ಕೈವಾಕರ್ನಲ್ಲಿ ಹತ್ತಿದರೆ ಅವರ ಮೇಲೆ ಎರಗುತ್ತವೆ. ಇದರಿಂದ ರಾತ್ರಿ ವೇಳೆಯಲ್ಲಿ ಸ್ಕೈವಾಕರ್ ಬಳಸಲು ಹೆದರುತ್ತಿದ್ದಾರೆ.
ನಿರ್ವಹಣೆಯ ಬಗ್ಗೆ ಗೊಂದಲ
ರಾಷ್ಟ್ರೀಯ ಹೆದ್ದಾರಿ ಕಚೇರಿ ಮೂಲಗಳ ಪ್ರಕಾರ ಸ್ಕೈವಾಕರ್ ನಿರ್ಮಾಣದ ಪೂರ್ಣ ಜವಾಬ್ದಾರಿ ರಾ.ಹೆ. ಇಲಾಖೆಗೆ ಸೇರ್ಪಟ್ಟಿತ್ತು. ಅದು ಪೂರ್ಣಗೊಂಡ ನಂತರ ಅದರ ನಿರ್ವಹಣೆಯನ್ನು ಪಾಲಿಕೆಯವರು ನಡೆಸಿಕೊಂಡು ಹೋಗಬೇಕಿತ್ತು. ಆದರೆ ಇಲ್ಲಿಯವರೆಗೆ ಅದನ್ನು ಪಾಲಿಕೆ ವ್ಯಾಪ್ತಿಗೆ ಪಡೆದಿಲ್ಲ. ಇನ್ನೊಂದು ಕಡೆ ಪಾಲಿಕೆಯ ಪ್ರಕಾರ ಪಾಲಿಕೆಗೆ ಹಸ್ತಾಂತರಗೊಂಡ ನಂತರವಷ್ಟೇ ಅದರ ನಿರ್ವಹಣೆ ನೋಡಿಕೊಳ್ಳುತ್ತಾರೆ. ಅಲ್ಲಿಯವರೆಗೆ ಈ ಸ್ಕೈವಾಕರ್ಗಳ ನಿರ್ವಹಣೆ ಯಾರು ಮಾಡುತ್ತಾರೆ ಅಥವಾ ಯಾರು ಮಾಡಬೇಕು ಎಂಬ ಗೊಂದಲಗಳು ಏರ್ಪಟ್ಟಿವೆ.
ಧೂಳುಮಯವಾದ ಸ್ಕೈವಾಕರ್
ಸ್ಕೈವಾಕರ್ಗಳನ್ನು ನಿರ್ಮಾಣ ಮಾಡಿದಾಗಿನಿಂದಲೂ ಇಲ್ಲಿಯವರೆಗೆ ಅದನ್ನು ಸ್ವಚ್ಛ ಮಾಡುವ ಹೋಗುವ ಗೋಜಿಗೆ ಹೋಗಿಲ್ಲ. ಮಳೆ ಗಾಳಿಗೆ ಆಗಾಗ್ಗೆ ಸ್ವಚ್ಛಗೊಂಡರೂ ಅದರ ತುಂಬಾ ಧೂಳು ತುಂಬಿಕೊಂಡಿದೆ. ಯಾರಾದರೂ ಗಣ್ಯ ವ್ಯಕ್ತಿಗಳು ತುಮಕೂರಿಗೆ ಆಗಮಿಸುತ್ತರೆ ಎಂದಾಗ ಮಾತ್ರ ಸ್ವಚ್ಛತೆ ಮಾಡುತ್ತಾರೆ ಹೊರತು ಉಳಿದ ಸಮಯದಲ್ಲಿ ಅದಕ್ಕೂ ನಮಗೂ ಸಂಬಂಧವೆ ಇಲ್ಲವೆಂಬಂತಾಗಿದೆ.
ಫ್ಲೆಕ್ಸ್ ಹಾಕಲು ಮಾಡಿದಂತಾಗಿದೆ..
ನಗರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಜಾಹೀರಾತು ಫ್ಲೆಕ್ಸ್ಗಳು ಹಾಕಲು ಪಾಲಿಕೆ ಅನುಮತಿ ಪಡೆಯಬೇಕು. ಅಲ್ಲದೆ ಪ್ಲಾಸ್ಟಿಕ್ ಫ್ಲೆಕ್ಸ್ಗಳು ಬಳಸುವಂತಿಲ್ಲ. ಇಂತೆಲ್ಲಾ ಆದೇಶಗಳು ಇದ್ದರೂ ಅನೇಕ ಬಾರಿ ವಿವಿಧ ಕಾರ್ಯಕ್ರಮಗಳ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಇದನ್ನು ಗಮನಿಸಿದರೆ ಫ್ಲೆಕ್ಸ್ಗಳನ್ನು ಹಾಕಲೆಂದೇ ಈ ಸ್ಕೈವಾಕರ್ ನಿರ್ಮಾಣ ಮಾಡಿದಂತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
