ತುಮಕೂರು
ತುಮಕೂರು ನಗರದಲ್ಲಿ ಅತ್ಯಾಧುನಿಕವಾದ ಕಸಾಯಿಖಾನೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆಯು ಪ್ರಾಥಮಿಕ ಹಂತದ ಪ್ರಕ್ರಿಯೆಯನ್ನು ಆರಂಭಿಸಿದೆ.
ಈ ನಿಟ್ಟಿನಲ್ಲಿ ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಅವರು ಹೈದರಾಬಾದ್ನ ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರದ ನಿರ್ದೇಶಕರಿಗೆ ಇದೇ ಸೆ.12 ರಂದು ಪತ್ರ ಬರೆದು, ತಾಂತ್ರಿಕ ವರದಿಯನ್ನು ನೀಡುವಂತೆ ಕೋರಿದ್ದಾರೆ.
ದೈನಿಕ ಸುಮಾರು 500 ರಿಂದ 600 ಕುರಿ, ಮೇಕೆಗಳು ಮತ್ತು ಸುಮಾರು 25000 ದಷ್ಟು ಕೋಳಿಗಳ ಮಾಂಸವನ್ನು ಪಡೆಯುವ ಸಾಮಥ್ರ್ಯದ ಅತ್ಯಾಧುನಿಕ ಕಸಾಯಿ ಖಾನೆಯನ್ನು ನಿರ್ಮಿಸಲು ತುಮಕೂರು ಮಹಾನಗರ ಪಾಲಿಕೆಯು ಯೋಜಿಸಿದೆ. ಈ ನಿಟ್ಟಿನಲ್ಲಿ ಸ್ಥಳಾವಕಾಶಕ್ಕಾಗಿ ಜಿಲ್ಲಾಡಳಿತಕ್ಕೆ ಮತ್ತು ಅಗತ್ಯ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಗ್ರವಾದ ಯೋಜನಾ ವರದಿಯ ಅಗತ್ಯವಿದೆ ಎಂದು ವಿವರಿಸಿರುವ ಆಯುಕ್ತರು, ಈ ಹಿನ್ನೆಲೆಯಲ್ಲಿ ವಿವರವಾದ ತಾಂತ್ರಿಕ ವರದಿಯನ್ನು ಒದಗಿಸಬೇಕೆಂಬ ಕೋರಿಕೆಯನ್ನು ಮುಂದಿಟ್ಟಿದ್ದಾರೆ.
ದೀರ್ಘ ಕಾಲದ ಬೇಡಿಕೆ
ಬೆಳೆಯುತ್ತಿರುವ ತುಮಕೂರು ನಗರದಲ್ಲಿ ಆಧುನಿಕ ಕಸಾಯಿಖಾನೆಯ ಅಗತ್ಯತೆ ಅತಿ ಹೆಚ್ಚಾಗಿದೆ. ನಗರದಲ್ಲಿ ಮಾಂಸ ಮತ್ತು ಕೋಳಿ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮಾಂಸಕ್ಕಾಗಿ ಬೇಡಿಕೆಯೂ ದೊಡ್ಡ ಪ್ರಮಾಣದಲ್ಲೇ ಇದೆ. ನಗರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಮಾಂಸಾಹಾರಿಗಳಿಗೆ ಶುದ್ಧವಾದ ಮಾಂಸ ಸಿಗಬೇಕಾದರೆ, ಅತ್ಯಾಧುನಿಕ ಕಸಾಯಿ ಖಾನೆ ಇರಲೇಬೇಕೆಂಬ ಬೇಡಿಕೆ ದೀರ್ಘಕಾಲದಿಂದ ಕೇಳಿಬರುತ್ತಿದೆ.
ಇದರ ಜೊತೆಜೊತೆಗೆ ನಗರದಲ್ಲೊಂದು ಸುಸಜ್ಜಿತ ಕಸಾಯಿಖಾನೆ ಇದ್ದರೆ, ಸಹಜವಾಗಿಯೇ ತುಮಕೂರು ನಗರದ ಸ್ವಚ್ಛತಾ ಕಾರ್ಯ ಶೇ.50 ರಷ್ಟು ತಾನಾಗಿಯೇ ಸಮರ್ಪಕವಾಗುತ್ತದೆಂಬ ಅಭಿಪ್ರಾಯವೂ ಇದೆ. ಪ್ರಸ್ತುತ ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯ ವಿಲೇವಾರಿಯು ಸಮಸ್ಯೆಯಾಗಿ ಕಾಡುತ್ತಿದ್ದು, ಕಸಾಯಿಖಾನೆ ಇದ್ದರೆ, ಈ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತದೆಂದು ಲೆಕ್ಕಾಚಾರ ಮಾಡಲಾಗುತ್ತಿದೆ. ಇವೆಲ್ಲದರ ಕಾರಣಗಳಿಂದ ಮಹಾನಗರ ಪಾಲಿಕೆಯು ಈ ನಿಟ್ಟಿನಲ್ಲಿ ಪ್ರಸ್ತುತ ಮೊದಲ ಹೆಜ್ಜೆ ಇರಿಸಿದೆ.
ಮಾಂಸದ ಮಾರುಕಟ್ಟೆ ಬೇಕು
ತುಮಕೂರು ನಗರದಲ್ಲಿ ಮಾಂಸಾಹಾರಿಗಳಿಗೆ ಅನುಕೂಲವಾಗುವಂತೆ ಒಂದು ಪ್ರತ್ಯೇಕ ಮಾಂಸದ ಮಾರುಕಟ್ಟೆಯನ್ನು ನಿರ್ಮಿಸಬೇಕೆಂದು ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಬಹು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದಾರೆ.
“ಈಗ ನಗರದ ಎಲ್ಲೆಡೆ ಮಾಂಸದ/ಕೋಳಿ ಅಂಗಡಿಗಳಿವೆ. ಇದರಿಂದ ಸಸ್ಯಾಹಾರಿಗಳಿಗೆ ಮುಜುಗರ ಆಗುತ್ತಿದೆ. ಇದರ ಬದಲಾಗಿ ನಗರದಲ್ಲಿ ಮಾಂಸಾಹಾರಿಗಳೇ ಅಧಿಕ ಸಂಖ್ಯೆಯಲ್ಲಿರುವ ಬಡಾವಣೆಯಲ್ಲಿ ಒಂದು ಮಾಂಸದ ಮಾರುಕಟ್ಟೆಯನ್ನು ನಿರ್ಮಿಸಿದರೆ, ಊರೊಳಗಿನ ಎಲ್ಲ ಅಂಗಡಿಗಳನ್ನೂ ಒಂದೇ ಸ್ಥಳಕ್ಕೆ ಸ್ಥಳಾಂತರಿಸಬಹುದು. ಇದರಿಂದ ಜನತೆಗೂ, ಊರಿಗೂ ಒಳ್ಳೆಯದಾಗುತ್ತದೆ” ಎಂಬುದು ಸೈಯದ್ ನಯಾಜ್ ಅವರ ಸ್ಪಷ್ಟ ಅನಿಸಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ