ಕುಣಿಗಲ್
ಐತಿಹಾಸಿಕ ಮಾರ್ಕೋನಹಳ್ಳಿ ಜಲಾಶಯದ ಎಡ ಮತ್ತು ಬಲದಂಡೆಯ ನಾಲಾ ಕಾಮಗಾರಿಯನ್ನು ವಿನೂತನ ಯಂತ್ರೋಪಕರಣಗಳ ಮೂಲಕ ಉತ್ತಮವಾಗಿ ಆಧುನಿಕರಣಗೊಳಿಸುವ ಕಾರ್ಯ ಭರದಿಂದ ಸಾಗಿರುವುದು ಅಚ್ಚುಕಟ್ಟುದಾರರ ಮೊಗದಲ್ಲಿ ಹರ್ಷತಂದಿದೆ ಎಂದು ರೈತಾಪಿಜನರು ತಿಳಿಸಿದ್ದಾರೆ.
ತಾಲ್ಲೂಕಿನ ಅಮೃತೂರು, ಹುಲಿಯೂರುದುರ್ಗ ಹೋಬಳಿಯ ರೈತರ ಅನುಕೂಲಕ್ಕಾಗಿ ಮಾರ್ಕೋನಹಳ್ಳಿ ಜಲಾಶಯವನ್ನು 1930ರಲ್ಲಿಯೇ ನಿರ್ಮಾಣ ಮಾಡಲಾಗಿತ್ತು. ಇತ್ತೀಚೆಗೆ ಜಲಾಶಯದ ಎಡ ಮತ್ತು ಬಲ ಭಾಗದ ಕಾಲುವೆಗಳು ಶಿಥಿಲಗೊಂಡು ನೀರಿನ ಹರಿವು ಇಲ್ಲದ ಕಾರಣದಿಂದ ಹೊಸದಾಗಿ ನಿರ್ಮಿಸಲು ಕ್ರಮ ಕೈಗೊಂಡಿರುವುದರಿಂದ ಈಗ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹರಿಯಲು ಎಡ ಮತ್ತು ಬಲದಂಡೆ ನಾಲೆ ಆಧುನಿಕರಣಗೊಳಿಸುವ 49ಕಿ.ಮೀ. ನಾಲಾ ಕಾಮಗಾರಿಯು ಸುಮಾರು 64 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಇದೀಗ ಶೇ.70 ಕಾಮಗಾರಿ ಮುಗಿದಿದ್ದು.
ಅಲ್ಲದೆ ಇತ್ತೀಚೆಗೆ ನೀರಾವರಿ ಸಚಿವರು ಚಾಲನೆ ನೀಡಿದ್ದು ವಿಶೇಷವಾಗಿದೆ. ಮಳೆಗಾಲದೊಳಗೆ ಕಾಮಗಾರಿಯನ್ನ ಮುಗಿಸಬೇಕೆಂದು ಗುತ್ತಿಗೆ ದಾರರು ಹೊಸ ತಂತ್ರಜ್ಞಾನ ಯಂತ್ರಗಳಿಂದ ಆಧುನಿಕರಣಗೊಳಿಸುತ್ತಿದ್ದು, ಇದರಿಂದ ಎಡದಂಡೆ ನಾಲೆಯಲ್ಲಿ ಅಮೃತೂರು ದೊಡ್ಡಕೆರೆ, ಚಿಕ್ಕಕೆರೆ ಜಿನ್ನಾಗರ, ಕುಪ್ಪೆಕೆರೆ ಕೀಲಾರ, ಅಮೃತೂರು ಹೋಬಳಿಯ 5942 ಹೆ. ಅಚ್ಚುಕಟ್ಟು ಪ್ರದೇಶಕ್ಕೆ ಅನುಕೂಲವಾಗಲಿದೆ ಹಾಗೂ ಬಲದಂಡೆ ನಾಲೆಯಿಂದ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ, ಬೀಚನೆಲೆ, ನಾಗಮಂಗಲ ತಾಲ್ಲೂಕಿನ 1300ಹೆ.ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ.
ಅಲ್ಲದೆ ದೊಡ್ಡಪ್ಪಳಕೆರೆ ತುಂಬಿ ಕೋಡಿಹರಿದ ನೀರು ಮತ್ತು ವ್ಯವಸಾಯ ಮಾಡಿ ಉಳಿದ ನೀರು ಹುಲಿಯೂರುದುರ್ಗದ ಜನರಿಗೆ ಕುಡಿಯಲು ಬಳಸಿ ಉಳಿದ ಹೆಚ್ಚುವರಿ ನೀರನ್ನು ಶಿಂಷಾ ನದಿಗೆ ಬಂಡಿಹಳ್ಳಿ ಏತನೀರಾವರಿ ಮೂಲಕ ಅಲ್ಲಿನ ವ್ಯಾಪ್ತಿಯ ಕೆರೆಗಳನ್ನ ತುಂಬಿಸಿದರೆ ಸುಮಾರು 10ಸಾವಿರ ರೈತರಿಗೆ ಅನುಕೂಲ ಗೊಂಡು ರೈತರು ನೆಮ್ಮದಿ ಬಧುಕು ಸಾಗಿಸಬಹುದೆಂದು ಆ ಭಾಗದ ರೈತಾಪಿ ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.