ಬೆಂಗಳೂರು
ವಾರಗಳ ಹಿಂದೆಯಷ್ಟೇ ಹ್ಯಾನಿಕೋಮ್ ಸಮಸ್ಯೆ ಎದುರಿಸಿದ್ದ ನಮ್ಮ ಮೆಟ್ರೋ, ಸೋಮವಾರ ವಿದ್ಯುತ್ ಸರಬರಾಜಿನಲ್ಲಿ ಉಂಟಾದ ಸಮಸ್ಯೆಯಿಂದ 1 ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದು ಪ್ರಯಾಣಿಕರು ಪರದಾಡುವಂತಾಯಿತು.
ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಗೆ ಹೋಗುವ ಮಾರ್ಗದಲ್ಲಿ 1 ಗಂಟೆ ಕಾಲ ಸಮಸ್ಯೆ ಎದುರಾಗಿ ಪ್ರಯಾಣಿಕರು ನಿಗದಿತ ಸಮಯಕ್ಕೆ ತೆರಳದೆ ತೊಂದರೆ ಅನುಭವಿಸಿದರು.
ಈ ಸಂಬಂಧ ಮಾಹಿತಿ ನೀಡಿರುವ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಅಜಯ್ ಸೇಠ್ ಅವರು ವಿದ್ಯುತ್ ಸರಬರಾಜಿನಲ್ಲಿ ಉಂಟಾಗಿರುವ ಸಮಸ್ಯೆ ಇದಾಗಿದ್ದು ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ. ಎಂದಿನಂತೆ ಮೆಟ್ರೋ ಸಂಚಾರ ಮುಂದುವರೆದಿದೆ ಎಂದು ಹೇಳಿದ್ದಾರೆ.
ನೇರಳೆ ಮಾರ್ಗದಲ್ಲಿ ಕೇವಲ 20 ರಿಂದ 25 ಕಿಲೋ ಮೀಟರ್ ವೇಗದಲ್ಲಿ ಸಂಚಾರ ನಡೆಸುತ್ತಿದ್ದು, ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ನಾಯಂಡಹಳ್ಳಿ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಇಂದಿರಾ ನಗರ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ತೊಂದರೆ ಹಿನ್ನೆಲೆ ರೈಲುಗಳ ಸಂಚಾರ ವಿಳಂಬವಾಗುತ್ತಿದೆ.
ನೇರಳೆ ಮಾರ್ಗದಲ್ಲಿ ಓಡಾಟ ನಡೆಸುವ ಎಲ್ಲಾ ರೈಲುಗಳ ಸಂಚಾರ ವಿಳಂಬವಾಗುತ್ತಿದ್ದು, ತಾಂತ್ರಿಕ ಸಮಸ್ಯೆ ಸರಿಪಡಿಸುವ ಕಾರ್ಯ ನಡೆಸುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಬಿಎಮ್‍ಆರ್‍ಸಿಎಲ್‍ನ ಸಂಚಾರ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
