ರಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನ : ಸಂಸ್ಥೆಗಳ ಸಮನ್ವಯತೆ ಕೊರತೆ

ತುಮಕೂರು

ವಿಶೇಷ ವರದಿ :ರಾಕೇಶ್.ವಿ.

      ಸ್ಮಾರ್ಟ್ ಸಿಟಿಯ ಕಾಮಗಾರಿಗಳಲ್ಲಿ ದೊಡ್ಡ ಮೊತ್ತದ ಕಾಮಗಾರಿಗಳಲ್ಲಿ ರಿಂಗ್ ರಸ್ತೆಯ ಅಭಿವೃದ್ಧಿಯೂ ಒಂದು. ಸುಮಾರು 52.47 ಲಕ್ಷ ರೂ ವೆಚ್ಚದಲ್ಲಿ ಮಾಡಲಾಗುತ್ತಿರುವ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಜನರಿಂದ ಅಸಮಾಧಾನ ವ್ಯಕ್ತ ಪಡಿಸಿದರೂ ಇದರಲ್ಲಿ ಸಾಕಷ್ಟು ತೊಡಕುಗಳು ಕಂಡು ಬರುತ್ತಿವೆ.
     10.524 ಕಿಮೀ ಉದ್ದದ ರಿಂಗ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಕಳೆದ 2018ರ ಡಿಸೆಂಬರ್ ತಿಂಗಳಿನಲ್ಲಿ ಆರಂಭಗೊಂಡಿತು. ಈ ಕಾಮಗಾರಿಯು ಎರಡು ಹಂತದಲ್ಲಿ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಕುಣಿಗಲ್ ವೃತ್ತದಿಂದ ಕ್ಯಾತ್ಸಂದ್ರದವರೆಗೆ ಒಂದು ಕಡೆ ಮುಖ್ಯ ರಸ್ತೆಯ ಅಭಿವೃದ್ಧಿ ಹಾಗೂ ಎರಡನೆ ಹಂತದಲ್ಲಿ ಗುಬ್ಬಿ ಗೇಟ್‍ನಿಂದ ಕುಣಿಗಲ್ ವೃತ್ತದವರೆಗೆ ಎರಡು ಮುಖ್ಯರಸ್ತೆಗಳು ಹಾಗೂ ಕುಣಿಗಲ್ ವೃತ್ತದಿಂದ ಕ್ಯಾತ್ಸಂದ್ರದವರೆಗೆ ಒಂದು ಕಡೆಯ ಮುಖ್ಯ ರಸ್ತೆ ಸೇರಿಕೊಂಡಿದೆ. 
ಸಂಚಾರ ದಟ್ಟಣೆ ನಿವಾರಣೆ ಉದ್ದೇಶ
     ಬೆಂಗಳೂರಿಗೆ ಪರ್ಯಾಯ ನಗರವಾಗಿ ಅಭಿವೃದ್ಧಿಯಾಗುತ್ತಿರುವ ತುಮಕೂರಿನಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಇದರಿಂದ ನಗರದಲ್ಲಿ ಹೆಚ್ಚಿರುವ ಟ್ರಾಫಿಕ್ ಸಮಸ್ಯೆಯನ್ನು, ಸಂಚಾರ ದಟ್ಟಣೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ರಿಂಗ್ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. 
ಗುಣಮಟ್ಟಕ್ಕೆ ಆದ್ಯತೆ
    ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಪ್ರತಿದಿನವು ರಸ್ತೆಯ ಗುಣಮಟ್ಟ ಪರೀಕ್ಷೆ  ಮಾಡಲಾಗುತ್ತಿದೆ. ರಸ್ತೆಗೆ ಹಾಕುವ ಜೆಲ್ಲಿ, ಜೆಲ್ಲಿ ಮಿಶ್ರಿತ ಮಣ್ಣು ಹಾಗೂ ರಸ್ತೆಗೆ ಹಾಕುವ ಟಾರ್ ಅನ್ನು ಇಲಾಖೆಯ ಸೂಚನೆಗಳ ಪ್ರಕಾರವೆ ಮಾಡಲಾಗುತ್ತಿದೆ. ಈ ಪರೀಕ್ಷೆಗಳನ್ನು ಮಾಡುವುದಕ್ಕಾಗಿಯೇ ಒಂದು ತಂಡ ಇದ್ದು, ನಿತ್ಯ ಅವರು ಪರೀಕ್ಷೆ ಮಾಡಿ ವರದಿ ಸಲ್ಲಿಸುವುದು ಬಿಟ್ಟರೆ ಇತರೆ ಯಾವುದೇ ಕೆಲಸ ಮಾಡುವುದಿಲ್ಲ.
ಅವಶ್ಯ ಮಣ್ಣಿನ ಖರೀದಿ
    ರಸ್ತೆ ಅಭಿವೃದ್ಧಿ ಮಾಡುವ ಮುಂಚೆ ಮೊದಲು ರಸ್ತೆಯನ್ನು ಅಗೆಯಲಾಗುತ್ತದೆ. ರಸ್ತೆ ಕೆಳಭಾಗದಲ್ಲಿನ ಮಣ್ಣಿನ ಪರೀಕ್ಷೆ ಮಾಡಿ ರಸ್ತೆಗೆ ಬೇಕಾಗುವ ಮಣ್ಣನ್ನು ಖರೀದಿ ಮಾಡಿ ತಂದು ಹಾಕಲಾಗುತ್ತಿದೆ. ಹಾಲಿ ರಸ್ತೆ ಕೆಳಗೆ ಇರುವ ಮಣ್ಣನ್ನು ಪರೀಕ್ಷೆ ಮಾಡಿ ಅದು ರಸ್ತೆಗೆ ಸರಿಹೊಂದುವುದಾದರೆ ಅದನ್ನೆ ಬಳಕೆ ಮಾಡಲಾಗುತ್ತದೆ. ಇಲ್ಲವಾದಲ್ಲಿ ರಸ್ತೆಗೆ ಅವಶ್ಯಕವಿರುವ ಮಣ್ಣನ್ನು ಖರೀದಿ ಮಾಡಿ ತಂದು ಹಾಕಲಾಗುತ್ತದೆ. ಕನಿಷ್ಠ ಅರ್ಧ ಮೀಟರ್‍ನಷ್ಟು ಮಣ್ಣನ್ನು ರಸ್ತೆಯ ಕೆಳಭಾಗದಲ್ಲಿ ಹಾಕಲಾಗುತ್ತದೆ.
ವಿವಿಧ ದರ್ಜೆಯ ಜೆಲ್ಲಿ ಬಳಕೆ
   ರಸ್ತೆ ನಿರ್ಮಾಣ ಮಾಡಲು ವಿವಿಧ ದರ್ಜೆಯ ಜೆಲ್ಲಿ ಕಲ್ಲುಗಳನ್ನು ಬಳಕೆ ಮಾಡಲಾಗುತ್ತದೆ. ಪ್ರಾರಂಭದಲ್ಲಿ ಮಣ್ಣಿನ ಮೇಲೆ ಜಿಎಸ್‍ಬಿ ( ಗ್ರ್ಯಾನುಲರ್ ಸಬ್ ಬೇಸ್ ) ಎಂದರೆ ಅಳತೆಯ ಮಾದರಿಯಲ್ಲಿ ಕಲ್ಲುಗಳನ್ನು ಹಾಕಲಾಗುತ್ತದೆ. ಅದು 20 ಸೆಂ.ಮೀ ಎತ್ತರ ಬರುತ್ತದೆ. ಅದರ ಮೇಲ್ಬಾಗದಲ್ಲಿ ಡಬ್ಲ್ಯುಎಂಎಂ ( ವೆಟ್ ಮಿಕ್ಸ್ ಮೆಕಾಡಮ್ ) ನೀರು, ಸಿಮೆಂಟ್ ಮಿಶ್ರಿತ ಕಲ್ಲುಗಳನ್ನು 2 ಪದರಗಳಲ್ಲಿ 250 ಸೆಂ.ಮೀ ಎತ್ತರ ಹಾಕಲಾಗುತ್ತದೆ. ಅದನ್ನು ಕಾಂಪ್ಯಾಕ್ಷನ್ ಮಾಡಲಾಗುತ್ತದೆ. ಕಲ್ಲುಗಳ ಸಾಂಧ್ರತೆ ಗಟ್ಟಿಯಾಗಲು ಜಿಎಸ್‍ಬಿ, ವೆಟ್‍ಮಿಕ್ಸ್ ಮೇಲೆ ರೋಡ್ ರೋಲರ್‍ನಿಂದ ನೀರು ಬಿಟ್ಟು ಹದ ಮಾಡಲಾಗುತ್ತದೆ. 
ಎರಡು ವಿಧದಲ್ಲಿ ಡಾಂಬರೀಕರಣ
    ರಸ್ತೆಯ ಕೆಳಭಾಗದಲ್ಲಿ ಜೆಲ್ಲಿ ಕಲ್ಲು ಸರಿಯಾಗಿ ಕುಳಿತುಕೊಂಡ ನಂತರ ಅದರ ಮೇಲ್ಭಾಗದಲ್ಲಿ ನುಣುಪಿಲ್ಲದ ಅಥವಾ ಒರಟಾದ ಕಲ್ಲುಗಳಿಂದ ಕೂಡಿದ ಡಾಂಬರೀಕರಣ ಮಾಡಲಾಗುತ್ತದೆ. ಅದನ್ನು ಎರಡು ಪದರಗಳಲ್ಲಿ 6.5 ಸೆಂ.ಮೀ ಮತ್ತು 6 ಸೆಂ.ಮೀ ಅಳತೆಯಲ್ಲಿ ಹಾಕಲಾಗುತ್ತದೆ. ಅದರ ಮೇಲ್ಭಾಗದಲ್ಲಿ 5 ಸೆ.ಮೀ ಅಳತೆಯಲ್ಲಿ ಸಣ್ಣ ಜೆಲ್ಲಿಯ ಡಾಂಬರೀಕರಣ ಮಾಡಲಾಗುವುದು. 
ಅಗೆದಂತೆಲ್ಲಾ ಪ್ರತ್ಯಕ್ಷವಾಗುತ್ತಿರುವ ಕಸ 
   ರಸ್ತೆಯ ಅಭಿವೃದ್ಧಿಗೆ ಖಾಲಿ ಜಾಗದಲ್ಲಿ ಅಗೆತದ ಕೆಲಸ ಮಾಡುವಾಗ ಬರೀ ಕಸದಿಂದ ತುಂಬಿದ ಮಣ್ಣು ಹೊರ ಬರುತ್ತಿದೆ. ಈ ಹಿಂದೆ ಹಲವಾರು ವರ್ಷಗಳಿಂದ ಹಾಕಲಾದ ಕಸವು ಮಣ್ಣಿನೊಳಗೆ ಸೇರಿಕೊಂಡು ಮಣ್ಣಿನ ಗುಣಮಟ್ಟ ಹಾಳಾಗಿದೆ. ಇದರ ಜೊತೆಯಲ್ಲಿ ಜಿಡ್ಡಿನಿಂದ ಕೂಡಿದ ಕಪ್ಪು ಮಣ್ಣು ಬರುವುದರಿಂದ ರಸ್ತೆ ಕಾಮಗಾರಿ ಮಾಡುವುದು ಅಷ್ಟು ಸುಲಭವಲ್ಲ ಎಂಬುದು ಕಾರ್ಮಿಕರ ಮಾತಾಗಿದೆ.
ಕಸದ ಸಮಸ್ಯೆಯಿಂದ ಕಾಮಗಾರಿ ನಿಧಾನ
   ಗುಬ್ಬಿ ಗೇಟ್ ಕಡೆಯಿಂದ ಕುಣಿಲ್ ವೃತ್ತದವರೆಗೆ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿಯೆ ಕಸದ ರಾಶಿಗಳನ್ನು ಹಾಕಲಾಗುತ್ತಿತ್ತು. ಕೆಲ ಭಾಗಗಳಲ್ಲಿ ಪ್ಲಾಸ್ಟಿಕ್‍ನಿಂದ ಕೂಡಿದ ಕಸ ಹಾಕಿದರೆ ಇನ್ನೊಂದು ಕಡೆ ಕೋಳಿ ತ್ಯಾಜ್ಯ, ಮಾಂಸದ ತ್ಯಾಜ್ಯ ಹಾಕಲಾಗುತ್ತಿತ್ತು. ಇದನ್ನು ಪಾಲಿಕೆಗೆ ತಿಳಿಸಿ ಸ್ವಚ್ಛ ಮಾಡಿಸಿದರೂ ಕೆಳ ಭಾಗದಲ್ಲಿ ಅವಿತುಕೊಳ್ಳಲಾದ ಕಸವನ್ನು ಸ್ವಚ್ಛ ಮಾಡಲಾಗುವುದಿಲ್ಲ. ಕೇವಲ ಅದನ್ನು ಅಗೆದು ಕೊಳೆತ ಮಣ್ಣನ್ನು ಬೇರೆಡೆಗೆ ಸಾಗಿಸಿ ಅಲ್ಲಿಗೆ ಸೂಕ್ತವಾದ ಮಣ್ಣನ್ನು ತಂದು ಹಾಕಲಾಗುತ್ತಿದೆ.
ವಿವಿಧ ಸಂಸ್ಥೆಗಳ ಸಮನ್ವಯತೆ ಕೊರತೆ
 
     ಈಗಾಗಲೆ ಭೂಮಿಯಲ್ಲಿ ಹಳ್ಳಗಳನ್ನು ಕೊರೆದು ಹಾಕಲಾದ ವಿವಿಧ ಕೇಬಲ್‍ಗಳು, ನೀರಿನ ಪೈಪುಗಳು, ಗ್ಯಾಸ್ ಲೈನ್ ಸೇರಿದಂತೆ ಇನ್ನಿತರ ಪೈಪ್‍ಗಳನ್ನು ನೋಡಿಕೊಂಡು ಕಾಮಗಾರಿ ಮಾಡಬೇಕಿದೆ. ಕೊಂಚ ಯಾಮಾರಿದರೂ ಪೈಪ್‍ಲೈನ್‍ಗಳು ಹೊಡೆದು ಹೋಗುತ್ತವೆ. ಇದರಿಂದ ಜನರಿಗೂ ತೊಂದರೆ, ಕಾಮಗಾರಿಯೂ ವಿಳಂಭವಾಗುತ್ತದೆ. ಇದಕ್ಕಾಗಿ ಸಂಬಂಧಿತ ಇಲಾಖೆ ಹಾಗೂ ಸಂಸ್ಥೆಗಳ ನೌಕರರು ಯಾರಾದರೂ ಒಬ್ಬರು ಬಂದು ನಿಂತು ಇಂತಹ ಕಡೆ ಪೈಪ್‍ಲೈನ್ ಇದೆ ಎಂದು ಹೇಳಿದರೆ ಜಾಗರೂಕತೆಯಿಂದ ಕಾಮಗಾರಿ ಮಾಡಬಹುದು ಎಂಬುದಾಗಿ ರಿಂಗ್ ರಸ್ತೆಯ ಉಸ್ತುವಾರಿ ಹೇಳುತ್ತಾರೆ. 
ವಾಟ್ಸಪ್ ಗ್ರೂಪ್‍ಗಳಲ್ಲಿ ಮಾಹಿತಿ ರವಾನೆ
     ಸ್ಮಾರ್ಟ್ ಸಿಟಿ ಎಂಡಿ ಸೇರಿದಂತೆ ಆಯಾ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ಪ್ರತಿನಿಧಿಗಳನ್ನೊಳಗೊಂಡ ವಾಟ್ಸಾಪ್ ಗ್ರೂಪ್‍ನ್ನು ಮಾಡಿಕೊಂಡಿದ್ದು, ಅಂದಿನ ದಿನ ನಡೆಯುವ ಕಾಮಗಾರಿ ಬಗ್ಗೆ ಆ ಗ್ರೂಪ್‍ನಲ್ಲಿ ಮಾಹಿತಿ ಹಂಚಿಕೆ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ ನೌಕರರು ಒಬ್ಬರು ಬಂದರೆ ಅನುಕೂಲವಾಗುತ್ತದೆ. ಆದರೆ ಅಲ್ಲಿಗೆ ಬಾರದೆ ಹೋದರೂ ಬಂದಿದ್ದೇವೆ ಎಂಬುದಾಗಿ ಮಾಹಿತಿಯನ್ನು ಗ್ರೂಪ್‍ನಲ್ಲಿ ಹಾಕಲಾಗುತ್ತಿದೆ ಹೊರತು ನಿಜಕ್ಕೂ ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾರೂ ಇರುತ್ತಿಲ್ಲ. ಇದು ಕೂಡ ಕಾಮಗಾರಿ ವಿಳಂಭವಾಗಲು ಕಾರಣವಾಗುತ್ತಿದೆ.
ಜನರ ಸಹಕಾರ ಮುಖ್ಯ
     ಒಂದು ಕಡೆ ಕಾಮಗಾರಿ ನಡೆಯುತ್ತಿರುತ್ತದೆ. ಪ್ರಾರಂಭದಲ್ಲಿ ಕಾಮಗಾರಿ ನಡೆಯುತ್ತಿರುವುದರ ಬಗ್ಗೆ ಮಾಹಿತಿಯ ಫಲಕ ಇಡಲಾಗಿರುತ್ತದೆ. ಆದರೂ ಸಾರ್ವಜನಿಕರು ಕಾಮಗಾರಿ ನಡೆಯುವ ಜಾಗದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವುದು ಮತ್ತು ಕಾಮಗಾರಿಗೆ ನಡೆಯುವಲ್ಲಿ ಓಡಾಡುತ್ತಾರೆ. ಕೆಲ ಪ್ರದೇಶದಲ್ಲಿ ಕೆಟ್ಟಿರುವ ವಾಹನಗಳನ್ನು ತಂದು ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿಯೆ ನಿಲ್ಲಿಸಲಾಗಿದೆ. ಇದರಿಂದ ಸೋರುವ ಕೆಟ್ಟ ತೈಲದಿಂದ ರಸ್ತೆಯ ಗುಣಮಟ್ಟ ಹಾಳಾಗುತ್ತದೆ ಎಂಬುದು ಸ್ಮಾರ್ಟ್ ಸಿಟಿ ಎಂಜಿನಿಯರ್‍ಗಳ ಆರೋಪವಾಗಿದೆ.
18 ಮೀಟರ್ ಅಗಲದ ರಸ್ತೆ
     ಗುಬ್ಬಿ ಗೇಟ್‍ನಿಂದ ಕ್ಯಾತ್ಸಂದ್ರವರೆಗಿನ 10.534 ಕಿಮೀ ಉದ್ದದ ರಿಂಗ್ ರಸ್ತೆಯು ಎರಡೂ ಕಡೆಗಳಲ್ಲಿ 9 ಮೀಟರ್ ಅಗಲದ ರಸ್ತೆ ಮಧ್ಯದಲ್ಲಿ 2.5 ಮೀಟರ್ ವಿಭಜಕ, ರಸ್ತೆಯ ಇಕ್ಕೆಲಗಳಲ್ಲಿ 5 ಮೀಟರ್ ಸರ್ವೀಸ್ ರಸ್ತೆ, ಅದರ ಪಕ್ಕದಲ್ಲಿ 1.2 ಮೀಟರ್‍ನಿಂದ 2 ಮೀಟರ್‍ವರೆಗೆ ವಿದ್ಯುತ್ ಕಂಬಗಳನ್ನು ಅಳವಡಿಕೆ ಮಾಡಲಿದ್ದಾರೆ. ಎರಡೂ ಭಾಗಗಳಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗುತ್ತಿದೆ. 
    ಸ್ಮಾರ್ಟ್ ಸಿಟಿ ಕಂಪನಿ ಹಾಗೂ ಇಲಾಖೆಯ ಸೂಚನೆಗಳ ಮೇರೆಗೆ ಕಾಮಗಾರಿ ನಡೆಸಲಾಗುತ್ತಿದ್ದು, ರಸ್ತೆ ಕಾಮಗಾರಿ ವೇಳೆ ಎದುರಾಗುತ್ತಿರುವ ಸಮಸ್ಯೆಗಳಿಂದ ಕಾಮಗಾರಿ ವಿಳಂಭವಾಗುತ್ತಿದೆ. ಇದರ ನಡುವೆ ಜನರು ಸಹಕಾರ ನೀಡುತ್ತಿಲ್ಲ. ಪ್ರಮುಖವಾಗಿ ಜನರು ಹಾಗೂ ಕೇಬಲ್, ಗ್ಯಾಸ್, ಕುಡಿಯುವ ನೀರು ಇನ್ನಿತರ ಕೇಬಲ್‍ಗಳ ಸಂಸ್ಥೆಯವರು ಸಹಕಾರ ನೀಡಿದರೆ ಕಾಮಗಾರಿ ಸುಲಭವಾಗಿ ಶೀಘ್ರವಾಗಿ ಮುಗಿಯಲಿದೆ.
ವರಪ್ರಸಾದ್, ರಿಂಗ್ ರಸ್ತೆಯ ಉಸ್ತುವಾರಿ
     ರಿಂಗ್ ರಸ್ತೆ ಕಾಮಗಾರಿಯನ್ನು ಎರಡು ಹಂತದಲ್ಲಿ ಕಾಮಗಾರಿ ಮಾಡಲಾಗುತ್ತಿದ್ದು, ರಿಂಗ್ ರಸ್ತೆ ಪೂರ್ಣಗೊಂಡ ನಂತರ ಶೇ.40 ರಿಂದ 50ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಫೆಬ್ರುವರಿ ತಿಂಗಳಾಂತ್ಯದೊಳಗೆ ಮುಖ್ಯ ರಸ್ತೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಟಿ.ಭೂಬಾಲನ್, ವ್ಯವಸ್ಥಾಪಕ ನಿರ್ದೇಶಕರು ಟಿ ಎಸ್ ಸಿ ಎಲ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap