ಸ್ಲಂ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ

ದಾವಣಗೆರೆ :

     ಸ್ವಚ್ಛ ಭಾರತದ ಹೆಸರಿನಲ್ಲಿ ಮಾಸಿಕ ತಲಾ ಶೇ.1 ರಷ್ಟು ಸೆಸ್ ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರವು, ಕೊಳಗೇರಿ ನಿವಾಸಿಗಳ ಸಂಕಷ್ಟಕ್ಕೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಹರಿಹರದ ಎಸ್‍ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಆರೋಪಿಸಿದರು.

      ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಇವುಗಳ ಸಂಯುಕ್ರಾಶ್ರಯದಲ್ಲಿ ಏರ್ಪಡಿಸಿದ್ದ ಸ್ಲಂ ಜನರ ವಿರೋಧಿ ನೀತಿ, ಅಭಿವೃದ್ಧಿಯಲ್ಲಿ ತಾರತಮ್ಯ, ಪ್ರಚಲಿತ ವಿಷಯಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಕೇಂದ್ರ ಸರ್ಕಾರವು ಸ್ವಚ್ಛಭಾರತದ ಹೆಸರಿನಲ್ಲಿ ಪ್ರತಿಯೊಬ್ಬರಿಂದ ತಿಂಗಳಿಗೆ ಶೇ.1ರಷ್ಟು ಸೆಸ್ ಸಂಗ್ರಹಿಸುತ್ತಿದೆ. ಆದರೆ, ಕೊಳಗೇರಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅಲ್ಲದೇ, ದೇಶ ಸ್ವಚ್ಛ ಮಾಡುವ ಕಾರ್ಮಿಕರ ಅಭಿವೃದ್ಧಿ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಕೊಳಗೇರಿಗಳಲ್ಲಿ ಇಂದಿಗೂ ಯುಜಿಡಿ ಇಲ್ಲ, ಇಕ್ಕಟ್ಟಿನಲ್ಲಿ ಮನೆ ಕಟ್ಟಿ ಕೊಳ್ಳಲಾಗಿದೆ, ಜಾತಿ, ಅಸ್ಪೃಶ್ಯತೆ, ಶ್ರೀಮಂತರ ದಬ್ಬಾಳಿಕೆಯಿಂದ ಕೊಳಗೇರಿ ನಿವಾಸಿಗಳಿಗೆ ಮನೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಸ್ಲಂ ನಿವಾಸಿಗಳು ಮನೆ ಕೇಳಿದರೆ ಜಮೀನು ಇಲ್ಲ ಎನ್ನುತ್ತಾರೆ. ಆದರೆ ಉದ್ಯಮಿಗಳು, ಶ್ರೀಮಂತರು ಜಮೀನು ಕೇಳಿದರೆ ಆದಷ್ಟು ಬೇಗವೇ ಜಾಗ ಕೊಡುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಕಳೆದ ಶತಮಾನದನಿಂದಲೂ ಶೋಷಿತರು, ದಮನಿತರನ್ನು ತುಳಿಯಲಾಗುತ್ತಿದ್ದು, ಇದು ಸ್ವಾತಂತ್ರ್ಯ ಸಿಕ್ಕ ನಂತರವೂ ಮುಂದುವರಿಯುತ್ತಿದೆ ಎಂದು ಕಿಡಿಕಾರಿದರು.

       ಸಮ ಸಮಾಜದ ಬಗ್ಗೆ ಮಾತನಾಡುವವರನ್ನು, ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕೆಂಬುವವರಿಗೆ ಇಂದಿನ ಭಾರತ ಸರ್ಕಾರವು ದೇಶದ್ರೋಹಿಗಳ ಪಟ್ಟ ಕಟ್ಟುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಿ ಮೋದಿ ದೇಶ ಸ್ವಚ್ಛವಾಗಿರಬೇಕೆಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರೆ ಶ್ರೀಮಂತರು, ರಾಜಕಾರಣಿಗಳು, ಉದ್ಯಮಿಗಳು ಇಸ್ತ್ರೀ ಮಾಸದ ಬಟ್ಟೆ ಉಟ್ಟು, ಕಣ್ಣಿಗೊಂದು ಕಪ್ಪು ಕನ್ನಡಕ ಹಾಕಿಕೊಂಡು, ಕೈಗವಸು ಧರಿಸಿ ಪೊರಕೆ ಹಿಡಿದು ಕ್ಯಾಮೆರಾ ಮುಂದೆ ಪೋಸ್ ಕೊಡುತ್ತಿದ್ದಾರೆ. ಇದೇ ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಸಾಧನೆ ಎಂದು ಮಾರ್ಮಿಕವಾಗಿ ನುಡಿದರು.

      ಪ್ರಸ್ತುತ ಶಿಕ್ಷಣ ವ್ಯಾಪಾರೀಕರಣಗೊಂಡಿದೆ. ಹೀಗಾಗಿ ಉನ್ನತ ಶಿಕ್ಷಣ ಬಡ ಮತ್ತು ಮಧ್ಯಮ ವರ್ಗದವರಿಗೆ ಗಗನಕುಸುಮವಾಗಿದೆ. ಕೊಳಗೇರಿ ನಿವಾಸಿಗಳು ತಾವು ದುಡಿಯುವ ಹಣದಲ್ಲಿ ಅಲ್ಪ ಹಣ ಕೂಡಿಟ್ಟು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ತಮ್ಮ ಮಕ್ಕಳನ್ನು ಅಧಿಕಾರಿಗಳನ್ನಾಗಿ ಮಾಡಿದರೆ ಮುಂದೊಂದು ದಿನ ಅವರು ಅಲಕ್ಷಿತ, ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು.

       ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣಕುಮಾರ್ ಮಾತನಾಡಿ, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುವುದರಿಂದ, ಇಂದು ಸಾರ್ವಜನಿಕವಾಗಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುವವರ ಸಂಖ್ಯೆ ವಿರಳವಾಗುತ್ತಿದೆ. ಈ ಹಿಂದೆ ಸಾಮಾಜಿಕ, ರಾಜಕೀಯ, ಆರ್ಥಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಯುತ್ತಿದ್ದವು, ಆದರೆ, ಈಗ ಆ ಹೋರಾಟಗಳು ಸಹ ಮಾಯವಾಗಿದ್ದು, ಜನಪರ ಚಳವಳಿ ಸತ್ತುಹೋಗಿದ್ದು, ಹಿಂಸೆ ಹಾಗೂ ಕ್ರೌರ್ಯದ ವಾತಾವರಣ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

        ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ದೇಶದ ಪ್ರತಿಯೊಬ್ಬ ನಾಗರೀಕರಿಗೂ ಸಮಾನವಾಗಿವೆ. ಆದರೆ, ಕಟ್ಟಕಡೆ ವ್ಯಕ್ತಿಗಳು ದಮನೀಯ ಸ್ಥಿತಿಯಲ್ಲಿ ಬದುಕುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲನ ಮಹಿಳಾ ಅಧ್ಯಕ್ಷೆ ಸಾವಿತ್ರಮ್ಮ, ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಲ್.ಆನಂದಪ್ಪ, ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷ ಸಿ.ಬಸವರಾಜ್, ದಲಿತ ಮುಖಂಡ ಹೆಗ್ಗೆರೆ ರಂಗಪ್ಪ, ರಾಹತ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link