ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿರುದ್ಧ ಮಾಜಿ ಶಾಸಕರ ಆಕ್ರೋಶ 

ತುಮಕೂರು
    ಕಳೆದ ಫೆಬ್ರುವರಿ ತಿಂಗಳಿನಿಂದ ಪ್ರಾರಂಭವಾದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದರಿಂದ ಜನರು ಅಸ್ತವ್ಯಸ್ಥರಾಗುತ್ತಿದ್ದಾರೆ ಎಂದು ತುಮಕೂರು ನಗರ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮ್ಮದ್ ಆರೋಪಿಸಿದ್ದಾರೆ.
    ನಗರದ ಖಾಸಗಿ ಹೋಟೆಲ್‍ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 8-9ತಿಂಗಳಿಂದ ನಡೆಯುತ್ತಿರು ಸ್ಮಾರ್ಟ್ ಸಿಟಿ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಯಾವ ರಸ್ತೆಯಲ್ಲಿ ಯಾವ ಕಾಮಗಾರಿಗಾಗಿ ಅಗೆಯುತ್ತಿದ್ದಾರೆ ಎಂದರೆ ಸೂಕ್ತ ಮಾಹಿತಿಯಿಲ್ಲ. ಯಾವುದೇ ರಸ್ತೆಯ ಅಭಿವೃದ್ಧಿ ಕಾಮಗಾರಿ ಮಾಡಬೇಕಾದರೆ ಮೊದಲು ಪರ್ಯಾಯ ರಸ್ತೆಯಲ್ಲಿ ಓಡಾಡಲು ಅನುವು ಮಾಡಬೇಕು. ಇದೇನು ಇಲ್ಲದೆ ರಸ್ತೆಯಲ್ಲಿ ಗುಂಡಿ ಅಗೆದು ಸಾರ್ವಜನಿಕರಿಗೆ ಓಡಾಡಲು ಆಗದಂತೆ ಮಾಡುತ್ತಿದ್ದಾರೆ ಎಂದರು.
     ಈ ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ಎಲ್ಲ ರಸ್ತೆಗಳಿಗೆ ಟಾರ್ ಹಾಕಿಸಲು ಆಗದೇ ಇದ್ದರೂ ಸಮಸ್ಯೆ ಇದ್ದಂತಹ ರಸ್ತೆಗಳಿಗೆ ಜಲ್ಲಿ ಹಾಕಿಸಿ ಮಣ್ಣನ್ನು ಹಾಕಿ ಸಮ ಮಾಡಿ ಓಡಾಡಲು ಅನುಕೂಲವಾಗುವಂತೆ ಮಾಡಿದ್ದೆ. ಅದಾದ ಬಳಿಕ ಚುನಾವಣೆಯಲ್ಲಿ ಸೋತರು ನಮ್ಮಿಂದ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂಬ ನೆಮ್ಮದಿ ಇತ್ತು. ಆದರೆ ಈಗ ನಡೆಯುತ್ತಿರುವ ಸ್ಮಾರ್ಟ್ ಸಿಟಿಯ ಕಾಮಗಾರಿಗಳನ್ನು ನೋಡಿದರೆ ಬೇಸರವಾಗುತ್ತಿದೆ ಎಂದರು.
    ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಮೈತ್ರಿ ಸರ್ಕಾರದಲ್ಲಿ ಬಿಡುಗಡೆಯಾದ ಅನುದಾನಗಳಿಂದಲೇ ಇಂದು ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ. ಇಂದಿನ ಬಿಜೆಪಿ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲವೆಂಬಂತೆ ಕಾಣುತ್ತಿದೆ. ನನ್ನ ಆಯಾಮದಲ್ಲಿ ಬಿಡುಗಡೆಯಾಗಿದ್ದ ಹಣದಿಂದ ವಿವಿಧ ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.
    2013ರ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದನಂತರ ತುಮಕೂರುನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಅಂದಿನಿಂದ ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬರುತ್ತಿದೆ. ಪಾಲಿಕೆ ಸದಸ್ಯರನ್ನು ಜನಪ್ರತಿನಿಧಿಗಳು ವಿಶ್ವಾಸದಿಂದ ನೋಡಿಕೊಂಡು ಬಂದ ಹಣವನ್ನು ಸಮಾನವಾಗಿ ಹಂಚುವ ಮೂಲಕ ನಗರದ ವಿವಿಧ ವಾರ್ಡ್‍ಗಳ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ. ಆದರೆ ಒಂದೊಂದು ವಾರ್ಡ್‍ಗೆ ಒಂದೊಂದು ರೀತಿಯಲ್ಲಿ ಅನುದಾನ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಜನಪ್ರತಿನಿಧಿಗಳಿಗೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ
     ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಇರುವುದರಿಂದ ಯಾವ ಕಾಮಗಾರಿಯೂ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ, ಸಂಸದರು ನನ್ನ ರಾಜಕೀಯ ಗುರುಗಳಾಗಿದ್ದು ಅವರು ಶಾಸಕ ಜಿ.ಬಿ.ಜ್ಯೋತಿಗಣೇಶ್‍ರಿಗೆ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಉತ್ತಮ ಆಡಳಿತ ನಡೆಸಲು ಸಹಕರಿಸಬೇಕು ಎಂದರು.
ರಿಂಗ್ ರಸ್ತೆ ಸ್ಮಾರ್ಟ್ ರಸ್ತೆಯಾಗಬೇಕು.
   ರಿಂಗ್ ರಸ್ತೆಯನ್ನು ಅಭಿವೃದ್ಧಿ ಹೆಸರಲ್ಲಿ ಕೇವಲ ಅಗಲೀಕರಣ ಮಾಡುತ್ತಿದ್ದಾರೆ. ಸ್ಮಾರ್ಟ್‍ಸಿಟಿ ಕಾಮಗಾರಿಗಳು ಪ್ರಾರಂಭ ಮಾಡುವ ಮುನ್ನ ರಿಂಗ್ ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಶಾಲಿನಿ ರಜನೀಶ್‍ರವರನ್ನು ಒತ್ತಾಯಿಸಿದ್ದೆ. ಅದಕ್ಕಾಗಿ ಈ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಈ ರಸ್ತೆಯು ಮಳೆ ಬರುವ ಸಮಯದಲ್ಲಿ ಟಾರ್ ಹಾಕಿರುವುದನ್ನು ಗಮನಿಸಿದ್ದೇನೆ. ಹಾಗಾಗಿ ಈ ರಸ್ತೆ ಎಷ್ಟು ದಿನಗಳ ಕಾಲ ಇರುತ್ತೋ ಎಂಬುದು ತಿಳಿಯದಾಗಿದೆ. ಈ ರಸ್ತೆಗಳು ಕೇವಲ ರಸ್ತೆಯಾಗಿ ಉಳಿಯದೆ ಸ್ಮಾರ್ಟ್ ರಸ್ತೆಗಳಾಗಬೇಕು ಎಂದು ಒತ್ತಾಯಿಸಿದರು.
ಕೂಡಿ ಬಾರದ ಗುಂಡಿ ಮುಚ್ಚುವ ಭಾಗ್ಯ
    ನಗರದ ರಸ್ತೆಗಳು ಹಾಳಾಗಿದ್ದು ಮಳೆ ಬಂದಾಗ ಆ ರಸ್ತೆಗಳ ನೈಜ ಸ್ಥಿತಿ ಏನೆಂಬುದು ಗೊತ್ತಾಗುತ್ತದೆ. ಈ ರಸ್ತೆಗಳನ್ನು ಮುಚ್ಚುವ ಕೆಲಸ ಇಲ್ಲಿಯವರೆಗೆ ಮಾಡಿಲ್ಲ. ಕನಿಷ್ಟ ಪಕ್ಷ ಸ್ಥಳೀಯ ಜನಪ್ರತಿನಿಧಿಗಳು ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಪ್ಯಾಚ್ ವರ್ಕ್ ಕೆಲಸ ಮಾಡಿಸಿದರೂ ಅದೆಷ್ಟೊ ಅಪಘಾತಗಳನ್ನು ನಿಲ್ಲಿಸಬಹುದು ಎಂದರಲ್ಲದೆ, ನಮ್ಮ ನಗರದಲ್ಲಿ ದಿನೆ ದಿನೆ ಟ್ರಾಫಿಕ್ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಕಂಟ್ರೋಲ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ಆದರೆ ಪೋಲೀಸ್ ಸಿಬ್ಬಂದಿ ಕಡಿಮೆಯಿದ್ದಾಗ ಏನೂ ಮಾಡಲು ಆಗುವುದಿಲ್ಲ. 
ಜನಪ್ರತಿನಿಧಿಗಳ ಓಲೈಕೆ
     ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಫೀಕ್ ಅಹಮ್ಮದ್ ಭ್ರಷ್ಟರು. ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಕೇವಲ ನನ್ನ ಮೇಲೆಯೇ ಆರೋಪಗಳನ್ನು ಹೊರಿಸುತ್ತಿದ್ದ ಮಾಜಿ ಸಚಿವರೊಬ್ಬರು ಇದೀಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿರುದ್ಧ ಕೇವಲ ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅವರಿಗೆ ಜನಪ್ರತಿನಿಧಿಗಳು ಕಣ್ಣಿಗೆ ಕಾಣುವುದಿಲ್ಲವೇ. ಕೇವಲ ಜನಪ್ರತಿನಿಧಿಗಳ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾಸ್ಪತ್ರೆಯ ನಿರ್ವಹಣೆಗೆ ಅನುದಾನದ ಕೊರತೆ
     ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‍ಐ ಸ್ಕ್ಯಾನಿಂಗ್ ಸೆಂಟರ್‍ಗಳನ್ನು ಪ್ರಾರಂಭ ಮಾಡಲಾಯಿತು. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಅನುದಾನದ ಕೊರತೆ ಇರುವುದಾಗಿ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಗೆ ಬೇಕಾದ ಅನುದಾನವನ್ನು ತಂದು ಅದರ ನಿರ್ವಹಣೆ ಮಾಡಿದರೆ ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಿರಂಜನ್, ಮೆಹಬೂಬ್‍ಪಾಷಾ, ಮಾಜಿ ಪಾಲಿಕೆ ಸದಸ್ಯ ರುದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೋರಾಜು, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸೈಯದ್‍ರಫೀಕ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link