ತುಮಕೂರು:

531 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿರುವ (ಈಗಾಗಲೇ ಕೆಲವು ಮುಗಿದು ಹೋಗಿವೆ) ತುಮಕೂರು ಸ್ಮಾರ್ಟ್ ಸಿಟಿಗೆ ಧಾತರೇ ಇಲ್ಲ. ತುಮಕೂರು ಮಹಾನಗರ ಪಾಲಿಕೆಗೆ ಪೂರ್ಣಾವಧಿ ಆಯುಕ್ತರಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದೊದಗಿದ್ದು, ಸ್ಮಾರ್ಟ್ಸಿಟಿಯಾಗುತ್ತಿರುವ ತುಮಕೂರಿನಲ್ಲಿ ಈಗ ಎಲ್ಲವೂ ಅಯೋಮಯ ಎನ್ನುವಂತಾಗಿದೆ.
22.9.2019 ರಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದ ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಅವರನ್ನು ವರ್ಗಾವಣೆಗೊಳಿಸಿ ದಿಢೀರ್ ಆದೇಶ ಹೊರಬಿತ್ತು. ಈ ಆದೇಶ ಹೊರಬಿದ್ದ ಕೂಡಲೇ ಅದೇ ದಿನ ಭೂಬಾಲನ್ ಇಲ್ಲಿಂದ ಘಟಪ್ರಭಾ- ಮಲಪ್ರಭಾ ಯೋಜನೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆ ವಹಿಸಿಕೊಳ್ಳಲು ದೌಡಾಯಿಸಿದರು. ಅಂದಿನಿAದ ತುಮಕೂರು ನಗರದಲ್ಲಿ 2 ಪ್ರಮುಖ ಹುದ್ದೆಗಳು ಖಾಲಿ ಇವೆ.
ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ನಗರ ಪಾಲಿಕೆ ಈ ಎರಡೂ ಆಡಳಿತಗಳು ಬೇರೆ ಬೇರೆಯೇ ಆಗಿರಬಹುದು. ಅನುದಾನವೂ ಪ್ರತ್ಯೇಕವಾಗಿರಬಹುದು. ಸ್ಮಾರ್ಟ್ ಸಿಟಿಗೆ ಅದರದ್ದೇ ಆದ ಒಂದು ಕಂಪನಿ ಆಧಾರಿತ ಆಡಳಿತಾತ್ಮಕ ವ್ಯವಸ್ಥೆ ಅನುಷ್ಠಾನದಲ್ಲಿರಬಹುದು. ಆದರೆ ಕಾಮಗಾರಿಗಳನ್ನು ಜಾರಿಗೆ ತರಬೇಕಾದರೆ ನಗರ ಪಾಲಿಕೆ ಹಾಗೂ ಸ್ಮಾರ್ಟ್ಸಿಟಿ ಈ ಎರಡರ ನಡುವೆ ಪರಸ್ಪರ ಸಮಾಲೋಚನೆ, ಚರ್ಚೆಯ ಅಗತ್ಯವಂತೂ ಇದ್ದೇ ಇದೆ. ಈವರೆಗೆ ತುಮಕೂರಿನಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಕಾಮಗಾರಿಗಳನ್ನು ಗಮನಿಸಿದರೆ ಇಲ್ಲಿ ಸಮಾಲೋಚನೆ ಮತ್ತು ಹೊಂದಾಣಿಕೆಯ ವಾತಾವರಣವೇ ಕಂಡುಬರುತ್ತಿಲ್ಲ. ಎರಡೂ ಪ್ರತ್ಯೇಕ ಇಲಾಖೆಗಳಂತೆಯೇ ಕಾರ್ಯ ನಿರ್ವಹಿಸುತ್ತಿರುವುದು ಭಾಸವಾಗುತ್ತಿದೆ.
ನಗರದ 6 ವಾರ್ಡ್ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಈ ಭಾಗದ ಕಾರ್ಪೋರೇಟರ್‌ಗಳಿಗೆ ಸ್ಮಾರ್ಟ್ ಸಿಟಿಯ ಸಂಪೂರ್ಣ ಚಿತ್ರಣ ಇರಬೇಕು. ಆದರೆ ಸದಸ್ಯರಿಗೆ ಈವರೆಗೂ ಮಾಹಿತಿ ಲಭಿಸಿಲ್ಲ. ಸಾರ್ವಜನಿಕರು ಕಾಮಗಾರಿಗಳ ಬಗ್ಗೆ ಪ್ರಶ್ನಿಸಿದರೆ ಸ್ಮಾರ್ಟ್ಸಿಟಿಯವರನ್ನು ಕೇಳಿ ಎನ್ನುವಂತಹ ಪರಿಸ್ಥಿತಿ ಇದೆ. ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ವಿನಿಮಯದ ಕೊರತೆ ಎದ್ದು ಕಾಣುತ್ತಿದೆ. ಯಾವುದೇ ರಸ್ತೆ ಕಾಮಗಾರಿಯಾದರೂ ಅದು ಸ್ಮಾರ್ಟ್ಸಿಟಿಯಿಂದ ನಡೆದರೂ ಮಹಾನಗರ ಪಾಲಿಕೆಯ ಗಮನಕ್ಕೆ ಬರಲೇಬೇಕು. ಕೆಲವೊಂದು ವಿಷಯಗಳಲ್ಲಿ ಪಾಲಿಕೆಯ ಅನುಮತಿಯೂ ಬೇಕು.
ಸ್ಮಾರ್ಟ್ಸಿಟಿ ಕಾಮಗಾರಿಗಳು ಪಾಲಿಕೆಯಿಂದ ಮುಕ್ತ ಹಾಗೂ ಪ್ರತ್ಯೇಕ ಎಂಬುದನ್ನು ಆಡಳಿತಾತ್ಮಕ ದೃಷ್ಟಿಯಿಂದ ಒಪ್ಪಬಹುದಾದರೂ ಮಾಹಿತಿ ವಿನಿಮಯ ಹಾಗೂ ಸಮಾಲೋಚನೆ ಇರಲೇಬೇಕಲ್ಲವೆ?ಭೂಬಾಲನ್ ಅವರಿದ್ದಾಗ ಆಗಾಗ್ಗೆ ಸಭೆಗಳು ನಡೆಯುತ್ತಿದ್ದವು. ಸಾರ್ವಜನಿಕವಾಗಿ ಬರುವ ದೂರುಗಳನ್ನು ಪರಮಾರ್ಷಿಸುತ್ತಿದ್ದರು. ಸಭೆಗಳಲ್ಲಿಯೂ ಈ ವಿಷಯ ಚರ್ಚಿತವಾಗುತ್ತಿತ್ತು. ಈಗ ಸಭೆಗಳೂ ನಡೆಯುತ್ತಿಲ್ಲ, ಸ್ಮಾರ್ಟ್ಸಿಟಿ ಕಾಮಗಾರಿಗಳ ಅವ್ಯವಸ್ಥೆಯನ್ನು ಪ್ರಶ್ನಿಸುವವರೂ ಇಲ್ಲ. ಹೀಗಾಗಿ ಹೇಳುವವರು, ಕೇಳುವವರು ಯಾರೂ ಇಲ್ಲದ ಪರಿಸ್ಥಿತಿಯಿಂದಾಗಿ ಸ್ಮಾರ್ಟ್ಸಿಟಿ ಕಾಮಗಾರಿಗಳು ಅನಾಥ ಪ್ರಜ್ಞೆಗೆ ಒಳಗಾಗಿವೆ. ಅಸ್ಪಷ್ಟ ಮತ್ತು ಅವೈಜ್ಞಾನಿಕ ಕಾಮಗಾರಿಗಳನ್ನು ಪ್ರಶ್ನಿಸುವವರಿಲ್ಲದೆ ಬೇಕಾಬಿಟ್ಟಿ ಕಾಮಗಾರಿಗಳು ಮುಂದುವರೆಯುತ್ತಿವೆ.
ಸ್ಮಾರ್ಟ್ಸಿಟಿಗೆ ಸಂಬಧಿಸಿದ ಯಾವುದೇ ಕಾಮಗಾರಿ ಇರಲಿ ಪ್ರತಿಯೊಂದಕ್ಕೂ ಒಂದು ಮಾಡೆಲ್ ಎಂಬುದಿರುತ್ತದೆ. ಅದಕ್ಕೆ ಸಂಬAಧಿಸಿದ ಸಂಪೂರ್ಣ ಮಾಹಿತಿ ಅಡಕವಾಗಿರುತ್ತದೆ. ಈ ಕಾಮಗಾರಿಯ ಆರಂಭ ಹಾಗೂ ಅಂತ್ಯ, ಗುತ್ತಿಗೆದಾರರು, ಅದರ ನಿರ್ವಹಣೆ ಎಷ್ಟು ದಿನಗಳಲ್ಲಿ ಪೂರ್ಣಗೊಳಿಸಬೇಕು? ಉಸ್ತುವಾರಿ ಹೀಗೆ ಹಲವು ಹತ್ತು ಅಂಶಗಳನ್ನು ಈ ಕಾಮಗಾರಿಗಳು ಒಳಗೊಂಡಿರಬೇಕು. ಆದರೆ ಇಲ್ಲಿ ಯಾವ ಮಾಹಿತಿಯೂ ಸಿಗುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಕಾಮಗಾರಿಗಳನ್ನು ಮನಬಂದತೆ ನಿರ್ವಹಿಸುತ್ತಾ ಕೋಟ್ಯಂತರ ರೂ.ಗಳನ್ನು ವ್ಯರ್ಥ ಮಾಡಲಾಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತವೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಆರಂಭವಾದ ದಿನದಿಂದಲೂ ಪತ್ರಿಕೆಯು ಸದರಿ ಕಾಮಗಾರಿಗಳ ಮೇಲೆ ನಿಗಾ ಇರಿಸಿಕೊಂಡೇ ಬಂದಿದೆ. ಪ್ರತಿ ಕಾಮಗಾರಿಗಳನ್ನು ಹತ್ತಿರದಿಂದ ಅವಲೋಕಿಸುತ್ತಾ ಅವೈಜ್ಞಾನಿಕ ಕಾಮಗಾರಿಗಳನ್ನು ಬಟಾಬಯಲು ಮಾಡಿದೆ. ಭೂಬಾಲನ್ ಅವರು ಸ್ಮಾರ್ಟ್ಸಿಟಿಯ ಎಂ.ಡಿ.ಯಾಗಿ ಅಧಿಕಾರ ವಹಿಸಿಕೊಂಡ ನಂತರ ಪತ್ರಿಕಾ ವರದಿಗಳನ್ನು ಗಮನಿಸಿ ಸಂಬಧಿಸಿದವರಿಗೆ ಸೂಕ್ತ ಎಚ್ಚರಿಕೆ ನೀಡುತ್ತಾ ಬಂದರು. ಕಾಮಗಾರಿಗಳ ನಿರ್ವಹಣೆಯ ಬಗ್ಗೆ ಗಮನ ಹರಿಸುತ್ತಲೇ ನಗರದ ಸ್ವಚ್ಛತೆಗೂ ಆದ್ಯತೆ ನೀಡಿದರು.
ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ ನಗರದ 80 ಕಡೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳನ್ನಾಗಿ ಗುರುತಿಸಿ ಅಲ್ಲೆಲ್ಲಾ ಕಣ್ಗಾವಲು ಹಾಕಿದರು. ಪಾಲಿಕೆಯ ನಿಯಮಗಳನ್ನು ಉಲ್ಲಂಘಿಸಿ ಕಸ ಹಾಕುವವರು ಅಥವಾ ಅನೈರ್ಮಲ್ಯ ಉಂಟು ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗಿ 445 ಪ್ರಕರಣಗಳಲ್ಲಿ 9,17,950 ರೂ.ಗಳ ದಂಡ ವಸೂಲಿ ಮಾಡಲಾಯಿತು. 2019ರ ಆಗಸ್ಟ್ ಅಂತ್ಯದ ವೇಳೆಗೆ ಈ ದಂಡ ವಸೂಲಾತಿಯಾಗಿ ನಗರದಲ್ಲಿ ಎಚ್ಚರಿಕೆಯ ಪ್ರಜ್ಞೆ ಉಂಟು ಮಾಡಲು ಕಾರಣವಾಯಿತು.
ಇದಷ್ಟೆ ಅಲ್ಲ, ಪತ್ರಿಕಾ ವರದಿಯನ್ನು ಗಮನಿಸಿ ಎಲ್ಲೆಂದರಲ್ಲಿ ರಸ್ತೆ ಅಗೆದು ಹಾಗೆಯೇ ಬಿಟ್ಟು ಹೋಗುವ, ಅವೈಜ್ಞಾನಿಕವಾಗಿ ಮಣ್ಣು ಮುಚ್ಚಿ ಹೋಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದರು. ಕಾಮಗಾರಿಗಳ ವಿಳಂಬಕ್ಕೆ ಮತ್ತು ಅವೈಜ್ಞಾನಿಕ ನಿರ್ವಹಣೆಗೆ ದಂಡ ಹಾಕಲು ಮುಂದಾದರು. ಕಳೆದ ಆಗಸ್ಟ್ ತಿಂಗಳಿನಲ್ಲಿ ವಿವಿಧ 7 ಗುತ್ತಿಗೆದಾರರಿಗೆ 65 ಲಕ್ಷ ದಂಡ ವಿಧಿಸಿದರು. ರಸ್ತೆ ಬದಿಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಬೀದಿಬದಿ ವ್ಯಾಪಾರಿಗಳಿಗೆ ಸೂಚನೆ ನೀಡಿ ಜುಲೈ ತಿಂಗಳಿನಲ್ಲಿ ಅವರಿಗಾಗಿ ಒಂದು ತರಬೇತಿ ಕಾರ್ಯಾಗಾರವನ್ನು ನಡೆಸಿದರು. ಒಂದು ಸ್ಮಾರ್ಟ್ ಸಿಟಿಯಾಗಲು ಕೇವಲ ಕಾಮಗಾರಿಯಷ್ಟೆ ಮುಖ್ಯವಲ್ಲ, ಸ್ವಚ್ಛತೆ, ನೈರ್ಮಲ್ಯ ಇತ್ಯಾದಿಗೂ ಅಷ್ಟೆ ಮುಖ್ಯ ಎಂದು ಪರಿಗಣಿಸಿ ಸ್ಮಾರ್ಟ್ಸಿಟಿಗೆ ಪೂರಕವಾದ ಇತರೆ ವಲಯಗಳನ್ನು ಅದರ ತೆಕ್ಕೆಗೆ ತರಲು ಪ್ರಯತ್ನಿಸುತ್ತಾ ಹೋಗಿದ್ದುಂಟು. ಇದರ ಪರಿಣಾಮವಾಗಿ ಎಲ್ಲೆಂದರಲ್ಲಿ ಕಸ ಹಾಕುವುದು ನಿಯಂತ್ರಣಕ್ಕೆ ಬಂದಿತ್ತು.
ಯಾವ ಸ್ಥಳಗಳನ್ನು ಗುರುತಿಸಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿತ್ತೋ ಅಂತಹ ಸ್ಥಳಗಳು ಈಗ ಯಥಾಸ್ಥಿತಿಗೆ ಮರಳುತ್ತಿವೆ. ನಿಗಾವಹಿಸುವ ಓರ್ವ ಧಾತರು ಇಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಭೂಬಾಲನ್ ಅವರು ಇದ್ದಾಗ ಎಲ್ಲವೂ ಸರಿಯಾಗಿತ್ತು ಎಂದು ಅರ್ಥವಲ್ಲ. ಕಾಮಗಾರಿಗಳು ಆಗಲೂ ಅವೈಜ್ಞಾನಿಕವಾಗಿಯೇ ನಡೆಯುತ್ತಿದ್ದವು. ಆದರೆ ಒಂದಿಷ್ಟು ಉಸ್ತುವಾರಿಯ ಜವಾಬ್ದಾರಿ ಹೊತ್ತಿದ್ದರಿಂದ ಸಂಪೂರ್ಣ ಹದಗೆಡುವುದನ್ನು ತಪ್ಪಿಸಲು ಕಾರಣವಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
