ಸ್ಮಾರ್ಟ್‍ಸಿಟಿ ಕಂಪನಿ ಎಂಬ ಕಾಮಧೇನು….!

ತುಮಕೂರು
    ತುಮಕೂರು ಸ್ಮಾರ್ಟ್‍ಸಿಟಿ ಕಂಪನಿ ಲಿಮಿಟೆಡ್ ಎಂಬ ಸಂಸ್ಥೆ ಪ್ರಾರಂಭವಾದಾಗ ಬಹುತೇಕ ಜನರಿಗೆ ಇದೇನೆಂಬ ಸ್ಪಷ್ಟ ಪರಿಕಲ್ಪನೆಯೇ ಮೂಡಿರಲಿಲ್ಲ. ಇದೂ ಸಹ ಯಾವುದೋ ಒಂದು ಇಲಾಖೆ ಇರಬಹುದೆಂದೇ ಭಾವಿಸಿದ್ದರು! ದುರಂತವೆಂದರೆ ಒಂದು ಸ್ವಾಯತ್ತ ಕಂಪನಿ ಇದೀಗ ಜನರು ಏನು ಭಾವಿಸಿದ್ದರೋ ಅದೇ ರೀತಿ ಆಗಿ ಹೋಗುತ್ತಿದೆ.. ಅಂದರೆ “ರಾಯರ ಕುದುರೆ ಬರುಬರುತ್ತಾ ಕತ್ತೆ ಆಯಿತಂತೆ” ಎಂಬ ಗಾದೆ ಮಾತನ್ನು ನೆನಪಿಸುತ್ತದೆ.
     ಕೇಂದ್ರ ಸರ್ಕಾರದ ಕಂಪನಿ ಕಾಯ್ದೆ ಅನ್ವಯ ಇದು ಸಂರಚಿತವಾದ ಕಂಪನಿ. ಖಾಸಗಿ ಕಂಪನಿಯೊಂದಕ್ಕೆ ಅನ್ವಯವಾಗುವ ಎಲ್ಲ ನಿಯಮಾವಳಿಗಳೂ ಇಲ್ಲೂ ಅನ್ವಯಗೊಳ್ಳುತ್ತದೆ. ಆಡಳಿತ ನಿರ್ವಹಣೆಗೆ ಆಡಳಿತ ಮಂಡಲಿ ಇರುತ್ತದೆ. ಅದರಲ್ಲಿ ಛೇರ್ಮನ್, ವ್ಯವಸ್ಥಾಪಕ ನಿರ್ದೇಶಕರು, ಆಡಳಿತ ಮಂಡಲಿ ನಿರ್ದೇಶಕರುಗಳು ಇರುತ್ತಾರೆ. ಇನ್ನು ಕಂಪನಿಗೆ ಮ್ಯಾನೇಜರ್ ಹಾಗೂ ಇತರ ಅಧಿಕಾರಿ/ಸಿಬ್ಬಂದಿಗಳು ಇರುತ್ತಾರೆ. ಈ ಆಡಳಿತ ಮಂಡಲಿಯು ಸಭೆ ನಡೆಸಿ, ಕಂಪನಿಯ ಕಾರ್ಯಕ್ರಮಗಳ ಬಗ್ಗೆ ನಿರ್ಣಯ ಅಂಗೀಕರಿಸುತ್ತದೆ. ಅದರನ್ವಯ ಎಲ್ಲ ಕಾರ್ಯಕ್ರಮಗಳೂ ಅನುಷ್ಠಾನವಾಗುತ್ತದೆ.
     ಸ್ಮಾರ್ಟ್‍ಸಿಟಿ ಅರ್ಥಾತ್ ಸಮಗ್ರ ಮೂಲ ಸೌಕರ್ಯ ಇರುವ ನಗರವು ಅತ್ಯಂತ ಕ್ಷಿಪ್ರಗತಿಯಲ್ಲಿ ಸಿದ್ಧಗೊಳ್ಳಬೇಕೆಂಬ ದೂರದೃಷ್ಟಿಯಿಂದಲೇ ಕೇಂದ್ರ ಸರ್ಕಾರ ಇಂತಹುದೊಂದು ಸ್ವಾಯತ್ತ ಕಂಪನಿಯನ್ನು ರಚಿಸಿತು. ಅಂದರೆ ಇತರೆ ಸರ್ಕಾರಿ ಕಚೇರಿಗಳಲ್ಲಿರುವ ರೆಡ್ ಟೇಪಿಸಂ/ಮಂದಗತಿಯ ಕಾರ್ಯನಿರ್ವಹಣೆ ಇಲ್ಲದೆ ಅಭಿವೃದ್ಧಿ ಯೋಜನೆಗಳು ತ್ವರಿತವಾಗಿ ಸಾಕಾರವಾಗಬೇಕೆಂಬುದು ಇದರ ಆಶಯ.
       ಅದೂ ಸಹ ಕೇವಲ ಐದು ವರ್ಷಗಳಲ್ಲಿ ಎಲ್ಲವನ್ನೂ ಅನುಷ್ಠಾನಗೊಳಿಸಬೇಕೆಂಬ ಕಾಲಮಿತಿಯ ಗುರಿ ಇದೆಯೆಂಬುದು ಗಮನಾರ್ಹ. ಅಂದರೆ ಇಲ್ಲಿ ಯಾವುದೂ ಸಹ ಸ್ಮಾರ್ಟ್‍ಸಿಟಿ ಕಂಪನಿಯ ಸ್ವಂತ ಆಸ್ತಿ ಇರುವುದಿಲ್ಲ. ಯಾವ ಇಲಾಖೆಗೆ ಸೇರಿದ ಸ್ಥಳ/ಸ್ವತ್ತನ್ನು ಅಭಿವೃದ್ಧಿಗೊಳಿಸುವ ಯೋಜನೆ ಇರುತ್ತದೋ, ಆ ಯೋಜನೆಯನ್ನು ಅತ್ಯಾಧುನಿಕ ತಾಂತ್ರಿಕತೆ ಮೂಲಕ ಅನುಷ್ಠಾನಗೊಳಿಸಲು ಏನೆಲ್ಲ ಕ್ರಮಗಳು ಬೇಕಾಗಿವೆಯೋ, ಅವನ್ನೆಲ್ಲ ಕೈಗೊಂಡು, ಟೆಂಡರ್ ಕರೆದು ಅನುಷ್ಠಾನಗೊಳಿಸಬೇಕು. ಆ ಯೋಜನೆ ಸಿದ್ಧಗೊಂಡ ಬಳಿಕ ಅದನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಬೇಕು. ಅದನ್ನು ಸುಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕಾದ ಮುಂದಿನ ನಿರ್ವಹಣಾ ಜವಾಬ್ದಾರಿ ಸಂಬಂಧಿಸಿದ ಇಲಾಖೆಗೆ ಸೇರಿದ್ದು. ಇದಲ್ಲದೆ ಖಾಸಗಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿಶಿಷ್ಟ ಯೋಜನೆಗಳನ್ನು ಜಾರಿಗೊಳಿಸಬಹುದು. ಹೀಗೆ ಈ ಕಂಪನಿ ಅನುಷ್ಠಾನಗೊಳಿಸುವ ಏಜೆನ್ಸಿಯಂತೆ ಮಾತ್ರ ಕಾರ್ಯನಿರ್ವಹಿಸುತ್ತದೆ. 
    ಇದಕ್ಕೆ ಪೂರಕವಾಗಿಯೇ ಉನ್ನತ ಶಿಕ್ಷಣವಿರುವ ಅನುಭವಿ ತಾಂತ್ರಿಕ ಸಿಬ್ಬಂದಿಗಳನ್ನು ಮತ್ತು ಕಂಪನಿ ಕಾರ್ಯನಿರ್ವಹಣೆಗೆ ಅನುಗುಣವಾಗಿ ಇತರೆ ಸಿಬ್ಬಂದಿಗಳನ್ನೂ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಕೆಲವು ನಿರ್ದಿಷ್ಟ ಹುದ್ದೆಗಳಿಗೆ ಮಾತ್ರ ಸರ್ಕಾರಿ ಇಲಾಖಾ ಅಧಿಕಾರಿಗಳು ಇರುತ್ತಾರೆ. 
      ಪ್ರಾರಂಭಿಕ ದಿನಗಳಲ್ಲಿ ಯಾವ-ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂಬುದೇ ಒಂದು ಸವಾಲಾಗಿತ್ತು. ಕೈಗೊಳ್ಳಲು ತೀರ್ಮಾನಿಸಿದ ಯೋಜನೆಗಳ ಬಗ್ಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವುದೂ ತ್ರಾಸದಾಯಕ ಕೆಲಸವಾಗುತ್ತಿತ್ತು. ಏಕೆಂದರೆ ಎಲ್ಲವೂ, ಎಲ್ಲರಿಗೂ ಹೊಸತು. ಅನೇಕ ಸಿಬ್ಬಂದಿ ವರ್ಗದವರು ಹೊತ್ತು-ಗೊತ್ತು ಇಲ್ಲದೆ ಬೆಳಗಿನಿಂದ ರಾತ್ರಿಯವರೆಗೂ ಕಾರ್ಯನಿರ್ವಹಿಸುತ್ತಿದ್ದ ದಿನಗಳೂ ಹೇರಳವಾಗಿವೆ.
       ಆಗ ಸ್ಮಾರ್ಟ್‍ಸಿಟಿ ಕಂಪನಿ ಅಂದರೆ, ಕೆಲಸ… ಕೆಲಸ… ಮತ್ತು ಕೆಲಸ ಅಷ್ಟೇ ಅನ್ನಿಸಿಕೊಂಡಿತ್ತು. ಪೇಪರ್ ವರ್ಕ್ ಅಧಿಕವಾಗಿತ್ತು. ಸ್ಥಳ ಪರಿಶೀಲನೆ, ಕನ್ಸಲ್ಟಿಂಗ್ ಏಜೆನ್ಸಿ ಜೊತೆ ಚರ್ಚೆ, ಮೀಟಿಂಗ್‍ಗಳಲ್ಲಿ ಪಾಲ್ಗೊಳ್ಳುವುದು, ಯೋಜನಾ ವರದಿ ಸಿದ್ಧಪಡಿಸುವುದು, ಅದಕ್ಕೆ ಸರ್ಕಾರದ ಮಂಜೂರಾತಿಗೆ ಪ್ರಕ್ರಿಯೆ ನಡೆಸುವುದು, ಕಡತಗಳನ್ನು ನಿರ್ವಹಿಸುವುದು, ಟೆಂಡರ್ ಕರೆಯುವುದು, ಬಳಿಕ ಮುಂದಿನ ಪ್ರಕ್ರಿಯೆಗಾಗಿ ಸರ್ಕಾರಕ್ಕೆ ಕಳಿಸುವುದು, ಅಲ್ಲಿನ ಅನುಮತಿ ಬಳಿಕ ಕಾಮಗಾರಿಗೆ ಹಸಿರು ನಿಶಾನೆ ತೋರಿಸುವುದು – ಹೀಗೆ ಒತ್ತಡದ ಕಚೇರಿ ಕೆಲಸಗಳೇ ಅತ್ಯಧಿಕವಾಗಿತ್ತು. 
     ಸ್ಮಾರ್ಟ್‍ಸಿಟಿ ಕಂಪನಿಯ ಈ ಸಿಬ್ಬಂದಿ ವರ್ಗದವರನ್ನು ನೋಡಿ ತುಮಕೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಅಸೂಯೆ ಪಡುತ್ತಿದ್ದ ದಿನಗಳೂ ಇತ್ತು. ಕಾರಣ ಇವರ ವೇತನ ಅಧಿಕ ಎಂದು! ಅಷ್ಟೇ ಅಲ್ಲದೆ ಸ್ಮಾರ್ಟ್‍ಸಿಟಿ ಸಿಬ್ಬಂದಿಗಳಿಗೆ ಕಡತ ಸಿದ್ಧಪಡಿಸುವ ಸಾಮಾನ್ಯ ಕೆಲಸದ ಅನುಭವವೂ ಇಲ್ಲ ಎಂದು ಅಪಹಾಸ್ಯ ಮಾಡುತ್ತಿದ್ದ ಸಂದರ್ಭಗಳೂ ಇತ್ತು. ಆದರೆ ಈಗ ಅವೆಲ್ಲ ಸಂದರ್ಭಗಳನ್ನು ದಾಟಿ ಮುಂದಕ್ಕೆ ಬರಲಾಗಿದೆ. 
     ಯೋಜನಾ ವರದಿಗಳು ಸಿದ್ಧವಾದವು.. ಟೆಂಡರ್‍ಗಳು ಆದವು… ಗುತ್ತಿಗೆದಾರರು ಕೆಲಸ ಆರಂಭಿಸಿದರು… ಕೆಲವು ಪೂರ್ಣಗೊಂಡವು….ಮೊದಲಿದ್ದ ಆ ಕೆಲಸದ ಒತ್ತಡದ ಸಂಕಷ್ಟಗಳು ಸಾಕಷ್ಟು ನೀಗಿದವು… ಈಗ ಲಕ್ಷಗಳಲ್ಲಿ/ಕೋಟಿಗಳಲ್ಲಿ ಬಿಲ್ ಮಾಡುವ ಕಾಲ ಬಂದಿದೆ. ಅಧಿಕಾರಿಗಳ ಮೇಲೆ ತುರ್ತಾಗಿ ಬಿಲ್ ಮಾಡಿಕೊಡುವ ಒತ್ತಡಗಳು ಹೇರಲ್ಪಡುತ್ತಿದೆ. ಇದೇ ಈಗ ಸ್ಮಾರ್ಟ್‍ಸಿಟಿ ಕಂಪನಿಯು ಕೆಲವರ ಪಾಲಿಗೆ ಕಾಮಧೇನು ಆಗಿ ಕಾಣತೊಡಗಲು ಕಾರಣವಾಗಿದೆ ಎಂಬುದು ಈಗ ಗುಟ್ಟೇನಲ್ಲ!
       ಈಗ ಬೇರೆ ಬೇರೆ ಇಲಾಖೆಯಲ್ಲಿನ ಅಧಿಕಾರಿಗಳು ವಿಶೇಷವಾಗಿ ಇಂಜಿನಿಯರ್‍ಗಳು ಸ್ಮಾರ್ಟ್‍ಸಿಟಿ ಮೇಲೆ ಕಣ್ಣಿಟ್ಟಿದ್ದಾರೆ. ಇಲ್ಲಿನ ಹುದ್ದೆಗಳಿಗೆ ವಿಶೇಷ ಒಲವಿನಿಂದ ವರ್ಗಾವಣೆಯಾಗಿ ಅಥವಾ ಡೆಪ್ಯುಟೇಷನ್ ಮೇಲೆ ಬರಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ರಾಜಕೀಯ ಪ್ರಭಾವವನ್ನೂ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವರು ಯಶಸ್ವಿಗಳೂ ಆಗಿದ್ದಾರೆಂಬುದು ಈಗ ಚರ್ಚೆಗೊಳ್ಳುತ್ತಿರುವ ವಿಚಾರ. ಈಗ ಸೇವೆಯಲ್ಲಿ ಇರುವವರಷ್ಟೇ ಅಲ್ಲದೆ, ನಿವೃತ್ತರೂ ಪೈಪೋಟಿ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನವೆಂದರೆ, ಒಂದು ಇಲಾಖೆಯ ಮುಖ್ಯಸ್ಥರಾಗಿದ್ದವರು ನಿವೃತ್ತರಾದ ಮರುದಿನದಿಂದಲೇ ಸ್ಮಾರ್ಟ್‍ಸಿಟಿ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿಬಿಟ್ಟರು! ಇದು
ಸಾಧ್ಯವಾದದ್ದಾದರೂ ಹೇಗೆಂಬುದು ಯಕ್ಷಪ್ರಶ್ನೆಯಾಗಿದೆ!
      ಪ್ರಸ್ತುತ ತುಮಕೂರು ನಗರದಲ್ಲಿ ಯಾವುದೇ ಸಣ್ಣ ಅಥವಾ ಬೃಹತ್ ಕಾಮಗಾರಿ ನಡೆಯುತ್ತಿದೆಯೆಂದರೆ ಅದು ಸ್ಮಾರ್ಟ್‍ಸಿಟಿ ಕಂಪನಿಯದು ಮಾತ್ರ. ಇದೂ ಸಹ ಅನೇಕ ಜನಪ್ರತಿನಿಧಿಗಳ ಮನಸೂರೆಗೊಂಡಿದೆ! ಜನಪ್ರತಿನಿಧಿಗಳ ಯಾವುದೇ ಲಿಖಿತ, ಅಧಿಕೃತ ದೂರುಗಳಿಲ್ಲದೆ, ಆಕ್ಷೇಪಣೆಗಳಿಲ್ಲದೆ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಮುಂದುವರೆಯುತ್ತಿವೆ! ಕಂಪನಿಯ ಆಡಳತ ಮಂಡಲಿ ನಿರ್ದೇಶಕರಾಗಿರುವ ಜನಪ್ರತಿನಿಧಿಗಳು ಎಲ್ಲಕ್ಕೂ ಸಮ್ಮತಿಸಿರಲೇಬೇಕು.
      ಇಲ್ಲದಿದ್ದರೆ ಸಭಾ ನಡವಳಿಯಲ್ಲಿ ತಮ್ಮ ವಿರೋಧ ದಾಖಲಿಸಿರಬೇಕಿತ್ತು, ಸಭಾ ತ್ಯಾಗ ಮಾಡಬೇಕಿತ್ತು, ಸಭೆ ಬಹಿಷ್ಕರಿಸಬೇಕಿತ್ತು, ನಿರ್ದೇಶಕ ಸ್ಥಾನಕ್ಕೆ ರಾಜಿನಾಮಿ ನೀಡಬೇಕಿತ್ತು, ಸರ್ಕಾರಕ್ಕೆ ಪತ್ರ ಬರೆದು ತಮ್ಮ ಅನಿಸಿಕೆ ದಾಖಲಿಸಬೇಕಿತ್ತು… ಆದರೆ ವಾಸ್ತವವಾಗಿ ಹಾಗೇನೂ ಆಗಿಲ್ಲವಲ್ಲ! ಅಂದರೆ ಕಾನೂನಿನ ಪ್ರಕಾರ ಪ್ರತಿಯೊಂದಕ್ಕೂ ಇವರು ಸಹಮತ ಸೂಚಿಸಿರುವರೆಂದೇ ಅರ್ಥ! ಇದರ ಜೊತೆಗೆ ನಗರದ ಸಂಘಸಂಸ್ಥೆಗಳ ಪ್ರಮುಖರನ್ನೊಳಗೊಂಡ ಸಲಹಾ ಸಮಿತಿಯೊಂದೂ ಇತ್ತು ಅಥವಾ ಈಗಲೂ ಇದೆ. ಈ ಸಮಿತಿ ಮಾಡಿದ್ದೇನೆಂಬುದು ನಿಗೂಢವಾಗಿದೆ!
     ಹೀಗೆ ಕೇಂದ್ರದ 500 ಕೋಟಿ ರೂ. ಹಾಗೂ ರಾಜ್ಯದ 500 ಕೋಟಿ ರೂ. ಸೇರಿ ಒಟ್ಟು  1,000 ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ  ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಸ್ಮಾರ್ಟ್‍ಸಿಟಿ ಕಂಪನಿಯು ಈಗಂತೂ ಎಲ್ಲರ ಪಾಲಿನ ಕಾಮಧೇನುವಾಗಿದೆ ಎಂಬುದನ್ನು ಯಾರು ತಾನೇ ನಿರಾಕರಿಸಲಾದೀತು?!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link