ದಾವಣಗೆರೆ:
ಸ್ಮಾರ್ಟ್ ಸಿಟಿ ಯೋಜನೆಯಡಿ ಸರ್ಕಾರದಿಂದ 400 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ, ಯೋಜನೆ ಅನುಷ್ಠಾನಗೊಳಿಸದ ಅಧಿಕಾರಿಗಳನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ತೀವ್ರ ತರಾಟೆಗೆ ತಗೆದುಕೊಂಡ ಘಟನೆ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ‘ದಿಶಾ’ ಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಂಸದರು, ದಾವಣಗೆರೆ ಮೊದಲನೇ ಹಂತದಲ್ಲಿಯೇ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಈ ಯೋಜನೆಯಡಿ ಸುಮಾರು 400 ಕೋಟಿ ರೂ. ಅನುದಾನ ಬಿಡುಗಡೆಯಾಗಿ ವರ್ಷಗಳೇ ಕಳೆದಿವೆ. ಆದರೆ, ಅನುದಾನ ಬಳಕೆಯಾಗುತ್ತಿಲ್ಲ. ಈ ಯೋಜನೆ ಜಾರಿಗೆ ಬಂದು ಮೂರು ವರ್ಷಗಳು ಕಳೆದಿವೆ. ಈಗ ಬಂದಿರುವ ಹಣ ಉಪಯೋಗ ಆಗುತ್ತಿಲ್ಲ. ಕಾಮಗಾರಿ ಮಾಡಲು ಇನ್ನೂ ಎಷ್ಟು ದಿನಬೇಕೆಂದು ಪ್ರಶ್ನಿಸಿದರು.
ಸ್ಮಾರ್ಟ್ ಯೋಜನೆ ನಿಗಮದ ವ್ಯವಸ್ಥಾಪಕ ಮಾತನಾಡಿ, ರಸ್ತೆ ಕಾಮಗಾರಿಗೆ ಮುನ್ನ ರಸ್ತೆಯ ಎರಡು ಬದಿಗಳಲ್ಲಿ ಅಂಡರ್‍ಗ್ರೌಡಿಂಗ್ ಕೆಲಸ ನಡೆಯುತ್ತಿದೆ. ಕೇಬಲ್ ಲೈನ್, ವಾಟ್‍ರ್ ಲೈನ್, ಗ್ಯಾಸ್ ಲೈನ್ ಯುಜಿಡಿ ಲೈನ್ ಹೀಗೆ ಕೆಲಸ ಆಗಬೇಕಿದೆ. ಆ ಕೆಲಸ ಮುಗಿದ ತಕ್ಷಣ ಇನ್ನೂ ನಾಲ್ಕು ತಿಂಗಳಿನಲ್ಲಿ ನಾಲ್ಕು ರಸ್ತೆ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ನಾಲ್ಕು ರಸ್ತೆಗಳ ಕಾಮಗಾರಿ ನಾಲ್ಕು ತಿಂಗಳಿನಲ್ಲಿ ಮುಗಿಯುತ್ತದೆ ಎಂಬುದಾಗಿ ಹೇಳಿದ್ದಿರಿ, ನಾಲ್ಕು ತಿಂಗಳಿನಲ್ಲಿ ಈ ಕಾಮಗಾರಿ ಮುಗಿಸಿದರೆ ನಿಮಗೆ ಖಂಡಿತ ಅವಾರ್ಡ್ ಕೊಟ್ಟು ಸನ್ಮಾನಿಸುತ್ತೇನೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಶಾಮನೂರಿನಿಂದ ಆನಗೋಡು ವರೆಗೆಗೂ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ನೆಟ್ಟಗಿಲ್ಲ್ಲ. ಇದು ಸ್ವತಃ ನಾನೇ ಅನುಭವಿಸಿದ್ದೇನೆ. ಖಾಸಗಿ ಕಂಪನಿಗಳ ನೆಟ್‍ವರ್ಕ್ ಎಷ್ಟು ಗುಣಮಟ್ಟದಿಂದ ಕೂಡಿರುತ್ತದೆ. ಆದರೆ, ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸರಿ ಇರುವುದಿಲ್ಲ. ಬಿಎಸ್‍ಎನ್‍ಎಲ್‍ನ್ನು ಮುಳುಗಿಸಲು ತೀರ್ಮಾನಿಸಿದ್ದೀರಾ? ಪ್ರತಿಯೊಂದು ಗ್ರಾ.ಪಂ.ನಲ್ಲಿ ನೆಟ್‍ವರ್ಕ್ ಉತ್ತಮವಾಗಿ ನಿರ್ವಹಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ