ತುಮಕೂರು:
ಮಹಾನಗರಪಾಲಿಕೆ ವ್ಯಾಪ್ತಿಯ 15ನೇ ವಾರ್ಡಿನಲ್ಲಿನ ಯುಜಿಡಿ ಅವಾಂತರದ ಬಗ್ಗೆ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಆ.28ರಂದು ಪ್ರಕಟವಾದ ವರದಿ ಬೆನ್ನಲ್ಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕಾಮಗಾರಿ ದುರಸ್ತಿಗೆ ಮುಂದಾಗಿದ್ದುದು ಶುಕ್ರವಾರ ಕಂಡು ಬಂತು.
ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ ಹಾಗೂ ಪಾರ್ಕ್ ರಸ್ತೆಯಲ್ಲಿ ಯುಜಿಡಿ ಮ್ಯಾನ್‍ಹೋಲ್ ತುಂಬಿ ರಸ್ತೆಗೆ ಹರಿಯುತ್ತಿದ್ದು, ನಾಗರಿಕರಿಗೆ ಆಗುತ್ತಿದ್ದ ತೊಂದರೆ ಬಗ್ಗೆ ಸ್ಥಳೀಯ ಕಾರ್ಪೋರೇಟರ್, ಮೇಯರ್ ಆದಿಯಾಗಿ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ “ರಸ್ತೆಗೆ ಯುಜಿಡಿ ನೀರು ಇದೆಂಥಾ ಸ್ಮಾರ್ಟ್ ಸಿಟಿ’ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ಪ್ರಕಟಿಸಿದ ವರದಿ ಆಧರಿಸಿ ಸ್ಮಾರ್ಟ್ ಸಿಟಿ, ಪಾಲಿಕೆ ಎಂಜಿನಿಯರ್ಸ್‍ಗಳ ತಂಡ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಬ್ಲಾಕ್ ಆಗಿದ್ದ ಯುಜಿಡಿ ಪೈಪ್‍ಲೈನ್ ದುರಸ್ತಿಗೆ ಕ್ರಮ ವಹಿಸಿದ್ದರು.
ಕಾರ್ಪೋರೇಟರ್, ಪಾಲಿಕೆ ಗಮನಕ್ಕೆ ತಾರದೆ ಕಾಮಗಾರಿ ಮಾಡಬೇಡಿ: ರೈಲ್ವೇ ನಿಲ್ದಾಣದ ರಸ್ತೆ ಬಳಿ ಮ್ಯಾನ್‍ಹೋಲ್ ದುರಸ್ತಿ ಕಾಮಗಾರಿ ಸ್ಥಳಕ್ಕಾಗಮಿಸಿದ ಪಾಲಿಕೆ ಮೇಯರ್ ಫರೀದಾಬೇಗಂ, 15ನೇ ವಾರ್ಡ್ ಸದಸ್ಯೆ ಗಿರಿಜಾ ಧನಿಯಾಕುಮಾರ್, ಕಾಮಗಾರಿ ಮಾಡುವಾಗಲೇ ಇದನ್ನು ಗಮನಿಸಬೇಕಲ್ಲವೇ? ರಸ್ತೆ ನಿರ್ಮಿಸಿ ಪದೇ ಪದೇ ಅಗೆಯುವುದರಲ್ಲಿ ಅರ್ಥವಿದೆಯೇ? ನಿಮ್ಮ ತಪ್ಪಿಗೆ ಪಾಲಿಕೆಯವರನ್ನು ಜನ ದೂಷಿಸುವಂತಾಗಿದೆ.
ಇನ್ನೂ ಮುಂದೆ ಇಂತಹ ಪ್ರಮಾದಗಳಿಗೆ ಆಸ್ಪದವಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ 7 ವಾರ್ಡ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನಾ ಆ ಭಾಗದ ಕಾರ್ಪೋರೇಟರ್, ಪಾಲಿಕೆ ಸಿಬ್ಬಂದಿ ಗಮನಕ್ಕೆ ಇರಬೇಕು. ಯಾವ್ಯಾವ ಪೈಪ್‍ಲೈನ್ ಭೂಮಿಯ ಒಳಗಡೆ ಇದೆ ಎಂಬುದುನ್ನು ಗಮನಿಸಿ ಕಾಮಗಾರಿ ಮಾಡಬೇಕು. ಏಕಾಏಕಿ ಜೆಸಿಬಿ ತಂದು ಅಗೆದು ಪೈಪ್‍ಲೈನ್ ಹಾಳು ಮಾಡಿ, ಮಣ್ಣು, ಜಲ್ಲಿ ಹಾಕಿ ಮುಚ್ಚುವುದರಲ್ಲಿ ಏನರ್ಥವಿದೆ ಎಂದು ಸ್ಮಾರ್ಟ್ ಸಿಟಿ ಎಂಜಿನಿಯರ್ಸ್‍ಗಳಾದ ಶಿವಕುಮಾರ್, ರಮೇಶ್, ಮಂಜು ಅವರನ್ನು ಪ್ರಶ್ನಿಸಿ ತ್ವರಿತ ದುರಸ್ತಿಕಾರ್ಯ ಮುಗಿಸುವಂತೆ ಸೂಚಿಸಿದರು.
ಸೆ.3 ಗುರುವಾರ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಭೆ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಅವಲೋಕನದ ಬಗ್ಗೆ ಸಮಗ್ರವಾಗಿ ಚರ್ಚಿಸಲು ಸೆ.3ರಂದು ಗುರುವಾರ ಪಾಲಿಕೆ ಸಭಾಂಗಣದಲ್ಲಿ ಎಲ್ಲಾ ಕಾರ್ಪೋರೇಟರ್ಸ್‍ಗಳನ್ನು ಆಹ್ವಾನಿಸಿ, ಸ್ಮಾರ್ಟ್ ಸಿಟಿ ಅಧಿಕಾರಿಗಳ ಸಭೆ ನಡೆಸಲಾಗುವುದು. ಈ ಸಭೆಗೆ ಸ್ಮಾರ್ಟ್ ಸಿಟಿ ಎಚಿಡಿ, ಜಿಲ್ಲಾದಿಕಾರಿಗಳನ್ನು ಆಹ್ವಾನಿಸಲಾಗುವುದು ಎಂದು ಇದೇ ವೇಳೆ ಮೇಯರ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
