ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕ : ಜ್ಯೋತಿ ಗಣೇಶ್

ತುಮಕೂರು
     ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆಯುತ್ತಿವೆ. ಇದರಲ್ಲಿ ಎಂಜಿನಿಯರ್‍ಗಳು ವಿಫಲರಾಗಿದ್ದಾರೆ. ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ. ಇದರಿಂದ ನಾಗರಿಕರು ತೀವ್ರತರವಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದು ತುಮಕೂರು ನಗರ ವಿಧಾನಸಭಾ ಸದಸ್ಯ ಜಿ.ಬಿ.ಜ್ಯೋತಿಗಣೇಶ್ ಆರೋಪಿಸಿದರು.
      ನಗರದ ಟೌನ್‍ಹಾಲ್‍ನಲ್ಲಿರುವ ನಗರ ಶಾಸಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಯಿಂದ ಮಾಡುತ್ತಿರುವ ರಸ್ತೆ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಅವುಗಳನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ಈಗಾಗಲೇ ಸ್ಮಾರ್ಟ್ ಸಿಟಿಯವರೊಂದಿಗೆ 10 ರಿಂದ 12 ಸಭೆಗಳನ್ನು ಮಾಡಿ ಇದ್ದಂತಹ ಸಮಸ್ಯೆಗಳನ್ನು ತೋರಿಸಲಾಗಿದೆ. 2018ರಲ್ಲಿ ಚುನಾವಣೆ ನಂತರ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಮೊದಲ ಸಭೆಯಲ್ಲಿ ಕಾರಿಯಪ್ಪ ರಸ್ತೆಯನ್ನು ಆಯ್ಕೆ ಮಾಡಿಕೊಂಡು ಮೊದಲು ಅದರ ಕಾಮಗಾರಿ ಮುಗಿಸಿ, ಅಲ್ಲಿ ಎದುರಾಗುವ ಸಮಸ್ಯೆಗಳನ್ನು ತಿಳಿದುಕೊಂಡು ಇತರೆ ರಸ್ತೆಗಳಲ್ಲಿ ಕಾಮಗಾರಿ ಮಾಡಿ ಎಂದು ಸೂಚನೆ ನೀಡಲಾಗಿತ್ತು ಎಂದು ತಿಳಿಸಿದರು. 
      ಎಲ್ಲಾ ತೆರಿಗೆಗಳನ್ನು ಹೊರತು ಪಡಿಸಿ ಸ್ಮಾರ್ಟ್ ಸಿಟಿಗೆ 930 ಕೋಟಿ ರೂಗಳು ಬಂದಿದ್ದು, ಎಲ್ಲಾ ಕಾಮಗಾರಿಗಳಿಗೆ ಟೆಂಡರ್ ಮಾಡಲಾಗಿದೆ. ಆದರೆ ಕೊಟ್ಟ ಸೂಚನೆಯನ್ನು ಪಾಲಿಸದೆ ಗಾಂಧಿನಗರ, ಸಿಎಸ್‍ಐ ಲೇಔಟ್, ಚಿಕ್ಕಪೇಟೆಗಳಲ್ಲಿ ಅಗೆಯಲಾಯಿತು. 
ಸ್ಮಾರ್ಟ್ ರೋಡ್ ಯೋಜನೆಗೆ 18 ರಸ್ತೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಶೋಲ್ಡರ್ ಡೆವಲಪ್‍ಮೆಂಟ್ ಕಾರ್ಯಕ್ಕಾಗಿ 83 ರಸ್ತೆಗಳನ್ನು ತೆಗೆದುಕೊಳ್ಳಲಾಗಿದೆ. ರಿಂಗ್‍ರಸ್ತೆಗೆ 80 ಕೋಟಿಯಷ್ಟು ಹಣ ವ್ಯಯಮಾಡಲಾಗಿದೆ. ಇದೆಲ್ಲದಕ್ಕೂ ಒಂದೇ ಬಾರಿ ಕಾಮಗಾರಿ ಪ್ರಾರಂಭ ಮಾಡಿದ್ದಕ್ಕಾಗಿ ಹೆಚ್ಚಿನ ಸಮಸ್ಯೆ ಎದುರಿಸುವಂತಾಯಿತು ಎಂದರು
      ಬಟವಾಡಿಯಿಂದ ಪ್ರಾರಂಭವಾಗುವ ಬಿಎಚ್ ರಸ್ತೆ 0 ಯಿಂದ 6 ಕಿಮೀ ವರೆಗೆ ಕಾಮಗಾರಿ ಚಾಲನೆಯಲ್ಲಿದೆ. ಆದರೆ ಕಾಮಗಾರಿಯ ಸ್ಥಿತಿಗತಿ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಇದರಲ್ಲಿ ಸರ್ವೀಸ್ ಚೇಂಬರ್ ಎಂದು ಮಾಡಲಾಗಿರುವುದು ವ್ಯರ್ಥವೇ ಸರಿ. ಮುಂದಾಲೋಚನೆ ಯಿಂದ ಮಾಡಿರುವುದು ಸರಿ ಇದೆ. ಆದರೆ ಮಾಡಲಾದ ರೀತಿ ಸರಿಯಿಲ್ಲ. ಈ ಬಗ್ಗೆ ಬಡಾವಣೆಗಳಲ್ಲಿ ಚೇಂಬರ್ ಮಾಡುವುದು ಬೇಡ ಎಂದು ಹೇಳಲಾಗಿತ್ತು. ಆದರೂ ಬಡಾವಣೆಗಳಲ್ಲಿ ಚೇಂಬರ್‍ಗಳನ್ನು ಕೊರೆದಿರುವುದು ಸಮಸ್ಯೆಯಾಗಿದೆ. ಕೆಲವು ಸ್ಥಳಗಳಲ್ಲಿ ಬೆಸ್ಕಾಂ ಕೇಬಲ್ ಎಳೆಯಲು ಆಗುತ್ತಿಲ್ಲ ಎಂಬುದು ಒಂದು ಆರೋಪವಾದರೆ ಇನ್ನೊಂದಡೆ ಕೇಬಲ್ ಎಳೆಯಲು ಹಿರಿಯ ಅಧಿಕಾರಿಗಳು ಸಹಿ ಹಾಕಿ ಕೊಟ್ಟಿದ್ದಾರೆ. ಅದಕ್ಕಾಗಿ ಉಳಿದ ಕೇಬಲ್ ಅನ್ನು ಟ್ರಯಲ್ ಆಗಿ ಎಳೆದು ತೋರಿಸಿದರು. ಆದರೆ ಅದು ವೈಜ್ಞಾನಿಕವಾಗಿ ಎಳೆಯಲು ಆಗುವುದಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಹಾಗಾಗಿ ಈಗಾಗಲೇ ಮಾಡಿರುವ ಚೇಂಬರ್‍ಗಳನ್ನು ಮಾತ್ರ ಪೂರ್ಣಗೊಳಿಸಿ. ಮುಂದೆ ಯಾವುದೇ ಕಾರಣಕ್ಕೂ ಚೇಂಬರ್‍ಗಳನ್ನು ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ ಎಂದರು.
      ಈಗ ಮೊದಲು ಕಾರಿಯಪ್ಪ ರಸ್ತೆ, ಅಶೋಕ ರಸ್ತೆಯನ್ನು ಪೂರ್ಣವಾಗಿ ಕಾಮಗಾರಿ ಮುಗಿಸಿ ನಂತರ ಇತರೆ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಈಗಾಗಲೇ ಶೇ.5% ರಷ್ಟು ಹಣ ಹಾಳಾಗಿದ್ದು, ಇದಕ್ಕೆಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೇರಿದಂತೆ ಸ್ಮಾರ್ಟ್ ಸಿಟಿಯ ಸರ್ವ ಸದಸ್ಯರೇ ಹೊಣೆಗಾರಿಕೆ ವಹಿಸಿಕೊಳ್ಳಲಾಗಿದೆ. ಇದನ್ನು ಹೊರತು ಪಡಿಸಿ ಗುಣಮಟ್ಟದಲ್ಲಿ ಲೋಪದೋಷಗಳನ್ನು ಕಂಡು ಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದರು.
ಶಾಸಕರ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ
      ಸರ್ಕಾರದಿಂದ ಪಿಡಬ್ಲೂಡಿ ಇಲಾಖೆಯ ಮೂಲಕ ಶಾಸಕರ ಅನುದಾನದಲ್ಲಿ 20 ಕೋಟಿ ರೂ ಹಣವನ್ನು ನೀಡಿದ್ದು, ಈ ಹಣದಲ್ಲಿ ಪ್ರಮುಖವಾಗಿ ಮುಖ್ಯರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಹಲವು ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪೂರ್ಣಗೊಳಿಸಿದ್ದು, ಒಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಈಗಾಗಲೇ ಕೆಲವು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇನ್ನೂ ಕೆಲವು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ತಿಳಿಸಿದರು.
 
      ಬಂಡೆಪಾಳ್ಯದಿಂದ ದೇವರಾಯಪಟ್ಟಣದವರೆಗೆ ಮುಖ್ಯ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂಗಳ ವೆಚ್ಚ, ದಾನಃಪ್ಯಾಲೆಸ್‍ನಿಂದ ಗಂಗಸಂದ್ರದವರೆಗಿನ ಮುಖ್ಯರಸ್ತೆ ಅಭಿವೃದ್ಧಿಗೆ 5 ಕೋಟಿ ರೂಗಳು, ಶೆಟ್ಟಿಹಳ್ಳಿಯಿಂದ ವಿನಾಯಕನಗರ – ಪಾಲಸಂದ್ರದ ಕಡೆಗೆ ಮುಖ್ಯರಸ್ತೆಯ ಅಭಿವೃದ್ಧಿಗೆ 2.25 ಕೋಟಿ ರೂಗಳು, ಮೆಳೆಕೋಟೆಯಲ್ಲಿನ ಮುಖ್ಯರಸ್ತೆ ಅಭಿವೃದ್ಧಿ, 5 ಕೋಟಿ ವೆಚ್ಚದಲ್ಲಿ ಅಗ್ನಿಶಾಮಕದಳದ ಕಚೇರಿ ಪಕ್ಕದಲ್ಲಿನ ಮುಖ್ಯರಸ್ತೆ ಅಭಿವೃದ್ಧಿ, ರೈಲ್ವೇ ಗೇಟ್‍ನಿಂದ ರಿಂಗ್‍ರಸ್ತೆಯ ವರೆಗೆ ಅಭಿವೃದ್ಧಿ ಪಡಿಸಲಾಗುವುದು. ಅದೇ ರೀತಿ ಬಟವಾಡಿ ಬಳಿಯ ಪೆಟ್ರೋಲ್ ಬಂಕ್ ಪಕ್ಕದ ರಸ್ತೆಯನ್ನು ರಿಂಗ್ ರಸ್ತೆಯವರೆಗೆ ಅಭಿವೃದ್ಧಿ ಪಡಿಸಲಾಗುವುದು. ಅವಶ್ಯಕತೆ ಇರುವ ಕಡೆಗಳಲ್ಲಿ ಮಧ್ಯದಲ್ಲಿ ಮೀಡಿಯನ್ ಹಾಕಲಾಗುವುದು. ಇದಲ್ಲದೆ ಬಡಾವಣೆಗಳಲ್ಲಿನ ರಸ್ತೆಗಳ ಅಭಿವೃದ್ಧಿಗೆಂದು 15 ಕೋಟಿ ರೂಗಳ ಅನುದಾನವಿದ್ದು, ಇದರಿಂದ ಅವಶ್ಯಕವಿರುವ ಬಡಾವಣೆಗಳಲ್ಲಿ ರಸ್ತೆಯ ಕಾಮಗಾರಿ ಮಾಡಿಸಲಾಗುವುದು ಎಂದು ತಿಳಿಸಿದರು.
        ಇದಲ್ಲದೆ ಮಹಾನಗರ ಪಾಲಿಕೆಗಳಿಗೆಂದು 125 ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, ಅದನ್ನು ಪಾಲಿಕೆ ಸದಸ್ಯರು ತಮ್ಮ ವಾರ್ಡುಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಕೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಮೊದಲು ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಬೇಕಿದೆ. ಅದಾದ ನಂತರ ಸಣ್ಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ತಿಳಿಸಿದರು.
       ಪಾರದರ್ಶಕ ಕಾಯ್ದೆಯಡಿಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಕಾಮಗಾರಿ ಪೋರ್ಟಲ್ ಮೂಲಕವೇ ನಡೆಯಬೇಕಾಗಿದೆ. ಮೂರು ತಿಂಗಳಿಂದ ಪೋರ್ಟಲ್ ಸಮಸ್ಯೆಯಾಗಿದ್ದು, ಟೆಂಡರ್‍ಗಳ ಪ್ರಕ್ರಿಯೆ ನಿಧಾನವಾಗುತ್ತಿದೆ. ಈ ಸಮಸ್ಯೆ ಪರಿಹಾರ ಆಗಲಿದೆ. ಈ ನಿಟ್ಟಿನಲ್ಲಿ ಒಂದೆರಡು ತಿಂಗಳಲ್ಲಿ ಶಾಸಕರ ಅನುದಾನದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದರು.
ಯುಜಿಡಿ ಕಾಮಗಾರಿಗಳ ಅವಶ್ಯ
       ಈ ಹಿಂದೆ ಮಾಡಲಾದ ಯುಜಿಡಿ ಕಾಮಗಾರಿಯಲ್ಲಿನ ತೊಡಕುಗಳಿಂದ ಇಂದು ಅನೇಕ ಕಡೆ ಯುಜಿಡಿ ರಸ್ತೆ ಮೇಲೆ ಉಕ್ಕಿ ಹರಿಯುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಯಾವ ಸ್ಥಳದಲ್ಲಿ ಚರಂಡಿ ಇಲ್ಲವೋ ಅಂತಹ ಕಡೆಗಳಲ್ಲಿ ಮೊದಲು ಚರಂಡಿ ಮಾಡುತ್ತಿದ್ದಾರೆ. ಅದೇ ರೀತಿ ಸಣ್ಣ ನೀರಾವರಿ ಇಲಾಖೆಗೆ 2 ಕೋಟಿ ರೂಗಳ ಕಾಮಗಾರಿಯ ಯೋಜನೆಯನ್ನು ಕಳುಹಿಸಲಾಗಿದ್ದು, ಅದಕ್ಕೆ ಅನುಮತಿ ಸಿಕ್ಕರೆ ಸಂಕ್ರಾಂತಿ ಸ್ಟೋರ್ ಬಳಿಯಲ್ಲಿದ್ದ ಚರಂಡಿ ಸಮಸ್ಯೆ ಇತ್ಯರ್ಥವಾಗುವುದು. ಜೊತೆಗೆ ಅಲ್ಲಿರುವ ರಾಜಗಾಲುವೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap