ಸ್ಮಾರ್ಟ್ ಸಿಟಿಯಲ್ಲಿ ಸಿದ್ಧವಾಗುತ್ತಿವೆ ಸ್ಮಾರ್ಟ್ ರಸ್ತೆಗಳು

ತುಮಕೂರು

   ಒಂದು ನಗರದ ರಸ್ತೆಗಳ ಸ್ಥಿತಿಗತಿ ಆ ನಗರದ ಆಡಳಿತ ಮಟ್ಟಕ್ಕೆ ಹಿಡಿದ ಕನ್ನಡಿ. ನಗರದ ಬೆಳವಣಿಗೆ, ಅಭಿವೃದ್ಧಿಗೆ ರಸ್ತೆಗಳಿಗೆ ಮುನ್ನುಡಿ. ರಸ್ತೆಗಳು ಸುಗಮ, ಸುರಕ್ಷವಾಗಿದ್ದರೆ ಅದು ಅಭಿವೃದ್ಧಿಗೆ ಪೂರಕವಾದಂತೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಹಾದಿಯಲ್ಲಿರುವ ತುಮಕೂರು ನಗರದಲ್ಲಿ ಸ್ಮಾಟ್ ರಸ್ತೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ಆರಂಭದಲ್ಲಿ 17 ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳಾಗಿ ರೂಪಾಂತರಿಸಿ ಅಭಿವೃದ್ಧಿಪಡಿಸುತ್ತಿದೆ.

     ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಎಲ್ಲಾ ರೀತಿಯಲ್ಲೂ ಸ್ಮಾರ್ಟ್ ಆಗಲು ಸಜ್ಜಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಸಿಟಿ ಸ್ಮಾರ್ಟ್ ಆಗಲಿದೆ. ಝೀರೋ ಟ್ರಾಫಿಕ್ ಜಾಮ್, ಸುಗಮ, ಸುವ್ಯವಸ್ಥಿತ, ಸುರಕ್ಷಿತ ಸಂಚಾರ, ಸರ್ವ ವ್ಯವಸ್ಥೆ, ಸಮ್ಮಿಳಿತ ರಸ್ತೆಗಾಗಿ ಸ್ಮಾರ್ಟ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪ್ರಾರಂಭಗೊಂಡಿವೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ವಿವಿಧ ಕಡೆ ಕೈಗೆತ್ತಿಕೊಂಡಿರುವ ರೂ.150.69 ಕೋಟಿ ವೆಚ್ಚದ 5 ಪ್ಯಾಕೇಜ್‍ಗಳಲ್ಲಿ 14.742 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳಾಗಿ ರೂಪಿಸಲಾಗುತ್ತಿದೆ.

     ಪಾದಚಾರಿ ಮಾರ್ಗ, ಸೈಕಲ್ ಲೇನ್, ಟೇಬಲ್ ಟಾಪ್ ಕ್ರಾಸಿಂಗ್, ನೀರು ಸರಬರಾಜು ಪೈಪ್‍ಲೈನ್, ಗ್ಯಾಸ್, ವಿದ್ಯುತ್ ತಂತಿ ಹಾಗೂ ಪೈಪ್‍ಗಳು ಇರಲಿವೆ. ಎಲ್‍ಇಡಿ ಸಾಲು ದೀಪಗಳ ಅಳವಡಿಕೆ ಈ ರಸ್ತೆಗಳ ವಿಶೇಷ. ಈ ರಸ್ತೆಗಳು ಸ್ಮಾರ್ಟ್ ರಸ್ತೆಯಾದ ಬಳಿಕ, ಟ್ರಾಫಿಕ್ ಜಾಮ್ ಕಡಿಮೆ ಆಗಲಿದೆ, ಸಂಚಾರ ಸುಗಮವಾಗಲಿದೆ ಎಂಬುದು ಸ್ಮಾರ್ಟ್ ಸಿಟಿಯ ತಾಂತ್ರಿಕ ತಜ್ಞರಾದ ಪಿ. ಕೆ. ಸೈನಿ ಹೇಳುತ್ತಾರೆ.

     ಸದ್ಯ ತುಮಕೂರಿನಲ್ಲಿ ಸುಗಮ ಸಂಚಾರದ ರಸ್ತೆಗಳಾಗಳಿಲ್ಲ, ರಸ್ತೆ ನಿರ್ವಹಣೆಯೂ ಇಲ್ಲ, ಸಂಚಾರಿ ನಿಯಮಗಳೂ ಪಾಲನೆಯಾಗುತ್ತಿಲ್ಲ. ಡಾಂಬರು ಹಾಕಿದ ರಸ್ತೆಯನ್ನು ನೀರು ಸರಬರಾಜು ಕೊಳವೆ, ಟೆಲಿಫೋನ್ ಕಂಪೆನಿಗಳ ಕಂಬ, ತಂತಿ, ಕೇಬಲ್‍ಗಳ ಅಳವಡಿಕೆ, ಮಳೆ ನೀರಿನ ಚರಂಡಿ, ಒಳಚರಂಡಿ ನಿರ್ಮಾಣಕ್ಕೆ, ದುರಸ್ಥಿಗೆ ಪದೇಪದೆ ರಸ್ತೆ ಅಗೆದು ಹಾಳು ಮಾಡಲಾಗುತ್ತದೆ. ಹೀಗಾಗಿ, ಪ್ರಮುಖ ರಸ್ತೆಯಿಂದ ಬಡಾವಣೆಯ ಸಂಪರ್ಕ ರಸ್ತೆಗಳೂ ತೇಪೆಯಿಂದ ಮುಕ್ತವಾಗಿಲ್ಲ. ಇದರಿಂದ ನಗರದ ಸೌಂದರ್ಯ ಹೆಚ್ಚಿಸಬೇಕಾದ ರಸ್ತೆಗಳು ವಿಕಾರಗೊಂಡಿವೆ. ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ, ದೂರದೃಷ್ಠಿ ಕೊರತೆ ಕಾರಣದಿಂದ ರಸ್ತೆಗಳು ಮೂಲ ಸ್ವರೂಪ ಕಳೆದುಕೊಳ್ಳುತ್ತವೆ.

      ರಸ್ತೆ ಕಾಮಗಾರಿ ನಡೆಸುವ ಸಂದರ್ಭದಲ್ಲೇ ಮುಂದೆ ನಡೆಯುವ ಕಾಮಗಾರಿಗಳಿಗೆ ಮುಂಚೆಯೇ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರೆ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ರಸ್ತೆ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿಯೇ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಒಳಗೊಂಡು ಯೋಜನೆಯನ್ನು ಕಾರ್ಯಗತಗೊಳಿಸಿದರೆ ಅದು ವ್ಯವಸ್ಥಿತ ರಸ್ತೆಯಾಗಿ ರೂಪುಗೊಳ್ಳುತ್ತದೆ. ಇಂತಹ ರಸ್ತೆಯೇ ಸ್ಮಾರ್ಟ್ ರಸ್ತೆ. ಸ್ಮಾರ್ಟ್ ರಸ್ತೆ ಪರಿಕಲ್ಪನೆಯು ಟೆಂಡರ್ ಶ್ಯೂರ್ ರಸ್ತೆಗಳ ಹೆಸರಿನಲ್ಲಿ ಬೆಂಗಳೂರಿನಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಮಾದರಿಯಲ್ಲಿ ತುಮಕೂರು ಸ್ಮಾರ್ಟ್‍ಸಿಟಿ ವತಿಯಿಂದ ನಗರದಲ್ಲಿಯೂ ಸಹ ಸ್ಮಾರ್ಟ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

      ಸೌಕರ್ಯ ಹಾಗೂ ಗುಣಮಟ್ಟದ ಆದ್ಯತೆ ಅನುಸರಿಸಿ ಸ್ಮಾರ್ಟ್ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದರಲ್ಲಿ ಅಗತ್ಯವಿರುವ ಕಡೆ ಪಾದಚಾರಿ ಮಾರ್ಗಗಳು, ಯುಟಿಲಿಟಿ ಡಕ್ಟ್‍ಗಳು, ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ಬಸ್‍ಗಳು ರಸ್ತೆ ಬದಿ ನಿಲ್ಲಲು ಅನುಕೂಲವಾಗುವ ಬಸ್ ಬೇಗಳು ಮತ್ತು ರಸ್ತೆ ಬದಿಯ ವ್ಯಾಪಾರದ ಸ್ಥಳಗಳು ಎಲ್ಲವೂ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ಮಾಡುವ ಪರಿಕಲ್ಪನೆಯಲ್ಲಿ ಸ್ಮಾರ್ಟ್‍ಸಿಟಿ ಲಿಮಿಟೆಡ್ ತುಮಕೂರಿನಲ್ಲಿ ಸ್ಮಾರ್ಟ್ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ.

       ನಗರದ ರಸ್ತೆಗಳು ಯಾವುದೇ ಸೂಕ್ತ ಮಾರ್ಗದರ್ಶನವಿಲ್ಲದೆ ವ್ಯವಸ್ಥಿತವಿಲ್ಲದ್ದನ್ನು ಒಂದು ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು ಟೆಂಡರ್ ಶ್ಯೂರ್‍ನ ಮುಖ್ಯ ಉದ್ದೇಶವಾಗಿದೆ. ನಾಗರೀಕ ಏಜೆನ್ಸಿಗಳು ಒಂದೇ ರಸ್ತೆಯಲ್ಲಿ ಸಮನ್ವಯತೆ ಇಲ್ಲದೆ ಮನಬಂದಂತೆ ಪದೇ ಪದೇ ಅಗೆದು ಹಾಳುಗೆಡವುದನ್ನು ನಿವಾರಿಸಲು ಇದು ಉಪಕ್ರಮವಾಗಿದೆ.

       ಏನಿದು ಟೆಂಡರ್ ಶ್ಯೂರ್ ರಸ್ತೆ? ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ರಸ್ತೆಗಳನ್ನು ವಿನ್ಯಾಸಗೊಳಿಸುವ ಯೋಜನೆಯೇ ಟೆಂಡರ್ ಶ್ಯೂರ್. ಈ ಯೋಜನೆಯಡಿ ಮತ್ತೆ ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ದೂರಸಂಪರ್ಕ ಇಲಾಖೆ, ಪಾಲಿಕೆ, ಜಲಮಂಡಳಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಸಂಸ್ಥೆಗಳ ಅವಶ್ಯಕತೆಗಳನ್ನು ಪೂರೈಸಲು ಏಕಗವಾಕ್ಷಿ ವ್ಯವಸ್ಥೆಯಡಿ ನಗರದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ.

     ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್ ಫೈಬರ್ ಕೇಬಲ್, ಬೀದಿದೀಪ, ಸಿಗ್ನಲ್ ದೀಪ, ಸಿ.ಸಿ.ಟಿ.ವಿ ಕೇಬಲ್, ಎಲ್ಲದಕ್ಕೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್ (ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ) ವ್ಯವಸ್ಥೆ ಇರುತ್ತದೆ. ಪಾದಚಾರಿಗಳಿಗೆ ಸಮರ್ಪಕವಾದ ಫುಟ್‍ಪಾತ್ ಸೌಲಭ್ಯ, ಸೈಕಲ್ ಸವಾರರಿಗೆ ಪ್ರತ್ಯೇಕ ಮಾರ್ಗ, ದೊಡ್ಡ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್, ಪ್ರತ್ಯೇಕ ವಾಹನ ನಿಲುಗಡೆ ಸ್ಥಳ, ಸೇರಿ ವಿಶೇಷ ಸೌಲಭ್ಯಗಳೂ ಇರುತ್ತವೆ.

ಸ್ಮಾರ್ಟ್ ಆಗಲಿರುವ ರಸ್ತೆಗಳು

     ಪೈಲೆಟ್ ಪ್ರಾಜೆಕ್ಟ್ ಆಗಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯನ್ನು ಸ್ಮಾರ್ಟ್ ರಸ್ತೆಯಾಗಿ ಪರಿವರ್ತಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ಯಾಕೇಜ್ ಒಂದರಲ್ಲಿ ಜೆ ಸಿ ರಸ್ತೆ, ಎಂ ಜಿ ರಸ್ತೆ, ವಿವೇಕಾನಂದ ರಸ್ತೆ, ಹೊರಪೇಟೆ ರಸ್ತೆಗಳು ಸ್ಮಾರ್ಟ್ ರಸ್ತೆಗಳಾಗಲಿವೆ.

     ಪ್ಯಾಕೇಜ್ ಎರಡರಲ್ಲಿ ಮಂಡಿಪೇಟೆ ರಸ್ತೆ, ಮಂಡಿಪೇಟೆ ಒಂದು ಮತ್ತು ಎರಡನೇ ರಸ್ತೆಗಳು, ಖಾಸಗಿ ಬಸ್ ನಿಲ್ದಾಣ ರಸ್ತೆ, ಬಸ್ ನಿಲ್ದಾಣ ಉತ್ತರ ಹಾಗೂ ದಕ್ಷಿಣ ದಿಕ್ಕಿನ ರಸ್ತೆಗಳು, ಮಹಾವೀರ್ ಜೈನ್ ಭವನ್ (ರೈಲ್ವೇ ಸ್ಟೇಷನ್) ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಂತರದ ಹಂತಗಳಲ್ಲಿ ಅಶೋಕ ರಸ್ತೆ, ಡೀಸಿ ಕಚೇರಿ ರಸ್ತೆ, ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, ಡಾ. ರಾಧಾಕೃಷ್ಣನ್ ರಸ್ತೆ, ಬೆಳಗುಂಬ ರಸ್ತೆ ಹಾಗೂ ಬಿ ಹೆಚ್ ರಸ್ತೆಯನ್ನು ಸ್ಮಾರ್ಟ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ಹಲವೆಡೆ ಕಾಮಗಾರಿ ಆರಂಭವಾಗಿವೆ.

ಕಾಮಗಾರಿ ವಿಳಂಬ

       ಸದ್ಯ ವಿವಿಧ ರಸ್ತೆಗಳಲ್ಲಿ ಯುಟಿಲಿಟಿ ಡಕ್ಟ್ ನಿರ್ಮಾಣದ ಕೆಲಸ ಆರಂಭವಾಗಿದೆ. ಇದರಿಂದ ಆ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕಾಮಗಾರಿ ವೇಗವಾಗಿ ನಡೆಯಿತ್ತಿಲ್ಲ, ವಿಳಂಬ ಮಾಡಲಾಗುತ್ತಿದೆ ಎಂಬುದು ನಾಗರೀಕರ ದೂರು. ನಿಯಮಿತವಾಗಿ ಕೆಲಸ ನಡೆದಿವೆ. ಇದರಿಂದ ಸಾರ್ವಜನಿಕರಿಗೆ ತಾತ್ಕಾಲಿಕ ತೊಂದರೆ ಆಗಬಹುದು, ಸ್ಮಾರ್ಟ್ ರಸ್ತೆಗಳ ಯಶಸ್ವಿ ಅನುಷ್ಠಾನದ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಬೇಕೆಂದು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ.ಟಿ. ರಂಗಸ್ವಾಮಿಯವರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap