ಕೇಬಲ್‍ಗಳ ನಿಖರ ಮಾಹಿತಿ ಕೊರತೆಯಿಂದ ಸ್ಮಾರ್ಟ್ ರಸ್ತೆ ಅಭಿವೃದ್ಧಿ ನಿಧಾನ :ಡಿ ಸಿ

ತುಮಕೂರು
 
      ಬಿಎಸ್‍ಎನ್‍ಎಲ್ ಕೇಬಲ್‍ಗಳ ನಿಖರ ಮಾಹಿತಿಯಿಲ್ಲದಿರುವುದರಿಂದ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕೂಡಲೇ ತಮ್ಮ ಸಂಸ್ಥೆಯ ಕೇಬಲ್‍ಗಳು ಹಾದು ಹೋಗಿರುವ ಮಾರ್ಗದ ನಿಖರ ಮಾಹಿತಿಯನ್ನು ನೀಡಿ ಕಾಮಗಾರಿ ತ್ವರಿತವಾಗಿ ನಡೆಯಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
    ತಮ್ಮ ಕಚೇರಿಯಲ್ಲಿ ಇತ್ತೀಚೆಗೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಸಮನ್ವಯ ಸಮಿತಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.  ಬಿಎಸ್‍ಎನ್‍ಎಲ್ ಕೇಬಲ್‍ಗಳ ನಿಖರ ಮಾಹಿತಿಯಿಲ್ಲದೆ ಸ್ಮಾರ್ಟ್ ರಸ್ತೆ ಪ್ರಗತಿ ವಿಳಂಬವಾಗಿದೆ.  ಪ್ರಗತಿ ಕಾರ್ಯದಲ್ಲಿ ಬಿಎಸ್‍ಎನ್‍ಎಲ್ ಕೇಬಲ್‍ಗಳಿಗೆ ಹಾನಿಯಾದರೆ ಸ್ಮಾರ್ಟ್ ಸಿಟಿ ಹೊಣೆಯಾಗುವುದಿಲ್ಲ.  ರಸ್ತೆ ಅಗೆಯುವ ಹಾಗೂ ಚೇಂಬರ್ ನಿರ್ಮಿಸುವ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಅಧಿಕಾರಿಗಳು ಖುದ್ದು ಹಾಜರಿದ್ದು, ಕೇಬಲ್ ಲೇಯಿಂಗ್ ಮಾಹಿತಿ ನೀಡಿ ಸಹಕರಿಸಬೇಕೆಂದು ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ತಿಳಿಸಿದರು.
    ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳುವ ಎಲ್ಲ ಕಾಮಗಾರಿಗಳು ಶಾಶ್ವತ ಕಾಮಗಾರಿಗಳಾಗಬೇಕು.  ಸ್ಮಾರ್ಟ್ ರಸ್ತೆ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ  ಪುನಃ ರಸ್ತೆಗಳನ್ನು ಅಗೆಯಲು ಅವಕಾಶ ನೀಡುವುದಿಲ್ಲ. ಕೈಗೊಂಡ ಕಾಮಗಾರಿಗಳನ್ನೇ ಮತ್ತೆ ಮತ್ತೆ ಅನಗತ್ಯವಾಗಿ ಕೈಗೊಳ್ಳುವುದರಿಂದ ಸಾರ್ವಜನಿಕ ಹಣವನ್ನು ಪೋಲು ಮಾಡಿದಂತಾಗುತ್ತದೆ ಎಂದರಲ್ಲದೆ ನಿಯಮವನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
      ನಗರದ ವರ್ತುಲ ರಸ್ತೆ(ಕುಣಿಗಲ್-ಗುಬ್ಬಿ ರಸ್ತೆ) ಹಾಗೂ ಬಿ.ಹೆಚ್.ರಸ್ತೆಯಲ್ಲಿ ಕೆಲವು ಕಡೆ ಸ್ಥಳದ ವಿವಾದಗಳಿರುವ ಕಾರಣ 15 ದಿನಗಳೊಳಗೆ ಸರ್ವೆ ಕಾರ್ಯ ಮುಗಿಸಿ ಮುಂದಿನ ದಿನಗಳಲ್ಲಿ ಒತ್ತುವರಿಯಾಗದಂತೆ ಗಡಿ ಗುರುತು ಮಾಡಿ ಕಲ್ಲುಗಳನ್ನು ನೆಡಬೇಕೆಂದು ಸರ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ  ವರ್ತುಲ ರಸ್ತೆ ಮೇಲೆ ಹಾದುಹೋಗಿರುವ ಹೈ-ಟೆನ್ಷನ್ ಕೇಬಲ್ ಹಾಗೂ ಮ್ಯಾನ್‍ಹೋಲ್‍ಗಳನ್ನು ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
      ನಗರದಲ್ಲಿ   ಅಭಿವೃದ್ಧಿಪಡಿಸುತ್ತಿರುವ 17 ಸ್ಮಾರ್ಟ್ ರಸ್ತೆ ಹಾಗೂ 83 ರೋಡ್‍ಶೋಲ್ಡರ್ ಸ್ಥಳಗಳಿಗೆ ಪಾಲಿಕೆ, ಸ್ಮಾರ್ಟ್ ಸಿಟಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಸ್ಕಾಂ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಕಂಡುಬರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು.  ಸ್ಮಾರ್ಟ್ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಹಾಗೂ ಸ್ಥಳಾಂತರಿಸಬೇಕಾಗಿರುವ ಬೀದಿ ದೀಪಗಳು, ವಿದ್ಯುತ್ ಕಂಬಗಳ ಪಟ್ಟಿಯನ್ನು ಕೂಡಲೇ ಪಾಲಿಕೆಗೆ ನೀಡಬೇಕೆಂದು ಸ್ಮಾರ್ಟ್ ಸಿಟಿ ಇಂಜಿನಿಯರುಗಳಿಗೆ ಸೂಚನೆ ನೀಡಿದರು.
       ಅಮಾನಿಕೆರೆ ಅಂಗಳದಲ್ಲಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡವರನ್ನು ಕೂಡಲೇ ತೆರವುಗೊಳಿಸಿ ಹದ್ದುಬಸ್ತು ಗುರುತಿಸಬೇಕೆಂದು ಭೂ ಮಾಪನ ಇಲಾಖೆ ಹಾಗೂ  ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ನಗರದ ವಿವಿಧ ಸರ್ಕಾರಿ ಕಚೇರಿ ಕಟ್ಟಡದ ಮೇಲೆ ಸೋಲಾರ್ ರೂಫ್‍ಟಾಪ್ ಅಳವಡಿಸಲು 27 ಸರ್ಕಾರಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಉಳಿದ ಇಲಾಖೆಗಳು ಇಚ್ಛಿಸಿದಲ್ಲಿ ಮನವಿ ಸಲ್ಲಿಸಬಹುದಾಗಿದೆ ಎಂದರು.
     ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಹೆಲಿ ಟ್ಯಾಕ್ಸಿ ಯೋಜನೆಯನ್ನು ಅನುಷ್ಠಾನಗೊಳಿಸಲು 6617 ಎಕರೆ ವಿಸ್ತೀರ್ಣದ ಭೂಪ್ರದೇಶ ಅವಶ್ಯವಿದ್ದು, ಈ ಯೋಜನೆಯ ಪ್ರಾರಂಭಿಕ ಹಂತವಾಗಿ ರೀಸರ್ಚ್ ಅಂಡ್ ಡೆವೆಲಪ್‍ಮೆಂಟ್ ಯುನಿಟ್ ಸ್ಥಾಪಿಸುವ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.  ಸಭೆಯಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ. ಭೂಬಾಲನ್ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ. ಅಜಯ್, ವಿವಿಯ ಕುಲಸಚಿವ ಗಂಗಾನಾಯಕ, ಬಿ.ಟಿ. ರಂಗಸ್ವಾಮಿ, ಮತ್ತಿತರ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link