ತುಮಕೂರು
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಕೋಟ್ಯಂತರ ರೂ.ಗಳ ವೆಚ್ಚದ ಈ ಕಾಮಗಾರಿಗಳು ಯಾವ ಪರಿಸ್ಥಿತಿಯಲ್ಲಿವೆ? ಹೇಗೆ ನಡೆದಿವೆ ಎಂಬ ಯಾವ ಮಾಹಿತಿಗಳೂ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ.
ಟ್ವಿನ್ ಬಿನ್ಸ್ (ಸ್ಟೀಲ್ ಕಸದ ಡಬ್ಬಿ) ಉದಾಹರಣೆಯನ್ನೇ ತೆಗೆದುಕೊಂಡರೆ ನಗರದ ಬಿ.ಎಚ್.ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಅಳವಡಿಸಲಾಗಿದ್ದ ಈ ಕಸದ ಬುಟ್ಟಿಗಳು ಹೇಳ ಹೆಸರಿಲ್ಲದೆ ಕಾಣೆಯಾಗಿವೆ. ಎಲ್ಲೋ ಕೆಲವು ಕಡೆ ಪಳೆಯುಳಿಕೆಗಳಂತೆ ಕೆಲವಷ್ಟೇ ಉಳಿದುಕೊಂಡಿವೆ.
ನಗರದಲ್ಲಿ ಕಸದ ಸಮಸ್ಯೆ ನೀಗಿಸಬಹುದು, ರಸ್ತೆಗಳಲ್ಲಿ ಸಂಚರಿಸುವ ಜನ ಎಲ್ಲೆಂದರಲ್ಲಿ ಕಸ ಬಿಸಾಡದೆ ಈ ಡಬ್ಬಿಯಲ್ಲಿ ಹಾಕಲೆಂದು ಟ್ವಿನ್ ಬಿನ್ಸ್ ಪರಿಕಲ್ಪನೆ ಜಾರಿಗೆ ತರಲಾಯಿತು. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿಯೇ ಕಸ ವಿಲೇವಾರಿ ಹೆಸರಿನಲ್ಲಿ 48 ಕಡೆಗಳಲ್ಲಿ ಬುಟ್ಟಿಗಳನ್ನು ಅಳವಡಿಸಲಾಯಿತು. ಒಂದು ಜೋಡಿ ಟ್ವಿನ್ ಬಿನ್ಗೆ 12 ಸಾವಿರ ರೂ. ವೆಚ್ಚ ಮಾಡಲಾಗಿದೆ. ಅಂದರೆ 48 ಟ್ವಿನ್ ಬಿನ್ಸ್ಗೆ ಒಟ್ಟು 5,76000 ರೂ.ಗಳು ವೆಚ್ಚವಾಗಿದೆ. ನಗರದ ಬಿ.ಎಚ್.ರಸ್ತೆ, ಮಹಾನಗರ ಪಾಲಿಕೆ, ಅಮಾನಿಕೆರೆ ಪಾರ್ಕ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಪಕ್ಕ, ತುಮಕೂರು ವಿ.ವಿ. ಮುಂಭಾಗ, ಎಸ್.ಐ.ಟಿ.ಕಾಲೇಜು ಬಳಿ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ಇವುಗಳನ್ನು ಅಳವಡಿಸಲಾಗಿತ್ತು.
ಅದ್ಯಾರು ಈ ಪರಿಕಲ್ಪನೆ ಜಾರಿಗೆ ತಂದಿದ್ದರೋ ಅಂತೂ ಡಬ್ಬಿಗಳನ್ನು ಅಳವಡಿಸಲು ಅತ್ಯಂತ ಉತ್ಸಾಹ ತೋರಿಸಲಾಯಿತು. ಆರಂಭದಲ್ಲಿ ಯಾರಿಗೂ ಗೊತ್ತಿಲ್ಲದಂತೆ ರಸ್ತೆ ಬದಿಗಳಲ್ಲಿ ಇವು ತಲೆ ಎತ್ತಿದವು. ಇದರೊಳಗೆ ಕಸ ಹಾಕಬೇಕೆಂಬ ತಿಳವಳಿಕೆ ಜನತೆಗೆ ಇರಲೇ ಇಲ್ಲ. ಇವುಗಳು ಕಸದ ಡಬ್ಬಿಗಳು ಎಂಬ ತಿಳವಳಕೆ ಬರುವಷ್ಟರ ವೇಳೆಗೆ ಒಂದೊಂದಾಗಿ ಕಾಣೆಯಾಗತೊಡಗಿದವು. ಈ ಬಗ್ಗೆ ದೂರು ನೀಡಲಾಯಿತೆ? ಎಷ್ಟು ಕಳುವಾದವು? ಈ ಬಗ್ಗೆ ಕೈಗೊಂಡ ಕ್ರಮಗಳೇನು? ಎಂಬ ಬಗ್ಗೆ ಈವರೆಗೂ ಉತ್ತರವಿಲ್ಲ.
ಇತ್ತೀಚೆಗಷ್ಟೇ ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯ ಸಭೆ ನಡೆದಿತ್ತು. ಪಾಲಿಕೆ ಸದಸ್ಯರೊಬ್ಬರು ಈ ವಿಷಯ ಪ್ರಸ್ತಾಪಿಸಿ ಸ್ಟೀಲ್ ಕಸದ ಡಬ್ಬಿ ಅಳವಡಿಸುವಲ್ಲಿ ಹಗರಣವಾಗಿದೆ. ಒಂದಕ್ಕೆ 12 ಸಾವಿರ ರೂ.ಗಳ ವೆಚ್ಚ ಮಾಡಲಾಗಿದೆ. ಆದರೆ ಇವೆಲ್ಲ ಹಾಳಾಗಿ ಹೋಗಿವೆ. ಕೆಲವು ಕಡೆ ಕಳವು ಆಗಿವೆ.
ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ. ಇದೇ ಮಾದರಿಯ ಫೈಬರ್ ಕಸದ ಡಬ್ಬಿಗಳನ್ನು ರೈಲು ನಿಲ್ದಾಣದಲ್ಲಿ ಇರಿಸಿದ್ದು ಅಲ್ಲಿ ಒಂದಕ್ಕೆ ಕೇವಲ 3500 ರೂ.ಗಳು ಮಾತ್ರ ವೆಚ್ಚವಾಗಿದೆ ಎಂಬ ತಗಾದೆ ತೆಗೆದಿದ್ದರು. ಇದಕ್ಕೆ ಉತ್ತರ ನೀಡಿದ್ದ ಅಧಿಕಾರಿಗಳು ಪಾಲಿಕೆಯ ಪರಿಸರ ಇಂಜಿನಿಯರ್ಗಳ ಸಲಹೆ ಪಡೆದು 48 ಸ್ಥಳಗಳಲ್ಲಿ ಡಸ್ಟ್ ಬಿನ್ ಅಳವಡಿಸಲಾಗಿತ್ತು. ಈಗ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಅವುಗಳನ್ನು ತೆಗೆಯುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.
ಮೇಲಿನ ಪ್ರಶ್ನೆ ಮತ್ತು ಪ್ರತಿಕ್ರಿಯೆಯನ್ನೆ ಗಮನಿಸಿದಾಗ ಮುಂದಾಲೋಚನೆ ಇಲ್ಲದೆ ಕೈಗೊಂಡ ಕಾಮಗಾರಿಗಳು ಹೇಗೆ ಹಾಳಾಗುತ್ತವೆ? ಸಾರ್ವಜನಿಕರ ಹಣ ಹೇಗೆ ಪೋಲಾಗುತ್ತದೆ ಎಂಬುದು ತಿಳಿಯುತ್ತದೆ. ಈಗ ಕಾಮಗಾರಿಗಳು ನಡೆಯುತ್ತಿರುವುದರಿಂದ ತೆಗೆಸಿ ಹಾಕಲಾಗಿದೆ ಎಂದು ಹೇಳುವ ಅಧಿಕಾರಿಗಳಿಗೆ ಮುಂದಾಲೋಚನೆ ಇರಲಿಲ್ಲವೆ? ಸ್ಮಾರ್ಟ್ ಸಿಟಿಯ ಹಣ 5,76,000 ರೂ.ಗಳ ವೆಚ್ಚ ಅನಗತ್ಯವಾಗಿ ನೀರಿನಲ್ಲಿ ಹೋಮ ಮಾಡಿದಂತೆ ಆಗಲಿಲ್ಲವೆ? ಇದಕ್ಕೆ ಉತ್ತರಿಸುವವರು ಯಾರು?
ರಸ್ತೆ ಬದಿಯ ಈ ಕಸದ ಬುಟ್ಟಿಗಳನ್ನು ಖಾಸಗಿ ಕಂಪನಿಯವರು ಅಳವಡಿಸಿದ್ದಾರೆ. ಕಸವನ್ನು ತೆಗೆದುಕೊಂಡು ಹೋಗುವ ಜವಾಬ್ದಾರಿ ಪಾಲಿಕೆಯದ್ದು. ಕಸದ ಬುಟ್ಟಿ ಅಳವಡಿಸಿರುವವರು ಅದನ್ನು ಭದ್ರವಾಗಿರಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳು ವಾದಿಸುತ್ತಾರೆ.
ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಅದನ್ನು ನಿಯಂತ್ರಿಸಬೇಕು ಎಂಬ ಕಾರಣದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಬುಟ್ಟಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಒಣ ಕಸ ಹಾಗೂ ಹಸಿ ಕಸ ಎಂದು ವಿಂಗಡಣೆ ಮಾಡಿ ಎರಡು ಬುಟ್ಟಿಗಳನ್ನು ಅಳವಡಿಸಲಾಗಿದೆ ಎಂದು ಹೇಳುವ ಅಧಿಕಾರಿ ವರ್ಗ ಅದನ್ನು ನಿಭಾಯಿಸುವ ರೀತಿ ಮತ್ತು ಅಳವಡಿಸುವ ಯೋಜನೆಯ ಹಿನ್ನೆಲೆಯ ಮಾಹಿತಿಗಳ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಂತೆ ಕಾಣುತ್ತಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಹಣವಿದೆ. ಅದು ಖರ್ಚಾದರಷ್ಟೇ ಸಾಕು ಎನ್ನುವ ಧೋರಣೆ ಅಧಿಕಾರಿಗಳಿ ಗಿದೆಯೇ ಎಂಬ ಪ್ರಶ್ನೆಗಳು ಇದನ್ನೆಲ್ಲಾ ನೋಡಿದಾಗ ಮೂಡುವುದು ಸಹಜ. ಸ್ವಚ್ಛತೆಯ ಹೆಸರಿನಲ್ಲಿ ಒಂದು ಟ್ವಿನ್ ಬಿನ್ಗೆ 12 ಸಾವಿರ ದುಬಾರಿ ವೆಚ್ಚ ನೀಡಿರುವುದಲ್ಲದೆ, 5,76,000 ರೂ.ಗಳ ವೆಚ್ಚದ ಈ ಡಬ್ಬಿಗಳು ಕಾಣೆಯಾಗಿದ್ದು ವೃಥಾ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಸ್ಮಾರ್ಟ್ಸಿಟಿಯ ಹಣವನ್ನು.