ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ ಸ್ಮಾರ್ಟ್ ಸಿಟಿ ತುಮಕೂರು

ತುಮಕೂರು

     ಪ್ರತಿ ಕುಟುಂಬವೂ ವೈಯಕ್ತಿಕ ಶೌಚಾಲಯ ಹೊಂದಬೇಕು, ಬಯಲು ಬಹಿರ್ದೆಸೆ ಮುಕ್ತವಾಗಬೇಕು ಎಂಬ ಸರ್ಕಾರದ ಆಶಯ ಪೂರ್ಣವಾಗಿ ಈಡೇರಿಲ್ಲ. ಜಿಲ್ಲಾ ಕೇಂದ್ರ ತುಮಕೂರು ನಗರವೂ ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ. ನಗರದ ಕೊಳಗೇರಿಗಳ ಅರ್ಧಕ್ಕೂ ಹೆಚ್ಚು ನಿವಾಸಿಗಳು ವೈಯಕ್ತಿಕ ಶೌಚಾಲಯ ಹೊಂದಿಲ್ಲ. ಇವರಿಗೆ ಶೌಚಾಲಯಕ್ಕೆ ಬಯಲೇ ಗತಿ.

    ನಗರದ ಎನ್. ಆರ್. ಕಾಲೋನಿ, ಭಾರತಿ ನಗರ, ಕುರಿಪಾಳ್ಯ, ಲೇಬರ್ ಕಾಲೋನಿ, ಹೆಗಡೆ ಕಾಲೋನಿ, ಕ್ಯಾತ್ಸಂದ್ರದ ಎಸ್‍ಎಲ್‍ಎನ್ ನಗರ, ಎಳ್ಳರಬಂಡೆ ಮತ್ತಿತರ ಪ್ರದೇಶಗಳ ಅನೇಕ ಕುಟುಂಬದವರು ಶೌಚಾಲಯ ಹೊಂದಲು ಸಾಧ್ಯವಾಗಿಲ್ಲ.

ಇದಕ್ಕೆ ಕಾರಣ:

     ನಿವಾಸಿಗಳಲ್ಲಿನ ಅರಿವಿನ ಕೊರತೆ ಹಾಗೂ ಅಲ್ಲಿನ ಅನಾನುಕೂಲ ಪರಿಸ್ಥಿತಿ. ಶೌಚಾಲಯ ಇಲ್ಲದ ಕೊಳಗೇರಿಗಳಲ್ಲಿ ಕೆಲವು ಕಡೆ ಸಾರ್ವಜನಿಕ ಶೌಚಾಲಯಗಳಿವೆ. ಅಲ್ಲಿ ಹೋಗಿ ಬಳಸಿಕೊಳ್ಳುವ ವ್ಯವಧಾನ ಅಥವಾ ತಿಳುವಳಿಕೆ ಬಹತೇಕ ಜನರಿಗೆ ಇದ್ದಂತಿಲ್ಲ. ಸಮುದಾಯ ಶೌಚಾಲಯಗಳಲ್ಲಿ ದಿನಾ ಬೆಳಿಗ್ಗೆ ಕ್ಯೂ ನಿಲ್ಲುವವರಾರು ಎಂದು ಕೆಲವರು ಬಯಲಿಗೆ ಹೋಗುತ್ತಾರೆ.

     ಶೌಚಾಲಯ ಹೊಂದಬೇಕು ಎಂದು ಬಯಸುವ ಕೆಲವರಿಗೆ ಅವಕಾಶ ಇಲ್ಲದಂತಾಗಿದೆ. ಕೊಳಗೇರಿಗಳಲ್ಲಿ ಸಣ್ಣ ಜಾಗದಲ್ಲಿ ಮನೆ, ಗುಡಿಸಲು ಕಟ್ಟಿಕೊಂಡು ವಾಸಿಸುವ ಕುಟುಂಬಗಳಿಗೆ ಶೌಚಾಲಯ ಕಟ್ಟಿಕೊಳ್ಳಲು ಸ್ಥಳಾವಕಾಶವಿಲ್ಲ. ಕೆಲವರು ಇಲ್ಲಿ ಅನಧಿಕೃತವಾಗಿ ವಾಸ ಮಡುತ್ತಿದ್ದಾರೆ. ಅವರ ಹೆಸರಿಗೆ ಹಕ್ಕುಪತ್ರ ಸಿಕ್ಕಿಲ್ಲದ ಕಾರಣ ಸರ್ಕಾರದ ಯೋಜನೆಗಳಿಂದ ಶೌಚಾಲಯ ನಿಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರಿಗೆ ಬಯಲು ಬಹಿರ್ದೆಸೆ ಅನಿವಾರ್ಯ. ಇಂತಹ ಕುಟುಂಬದವರು ಶೌಚ ಬಾಧೆ ತೀರಿಸಿಕೊಳ್ಳುವುದು ಕೆರೆ ಅಂಗಳ, ಖಾಲಿ ನಿವೇಶನ, ರೈಲ್ವೇ ಹಳಿಗಳ ಪಕ್ಕ, ಪೊದೆಗಳಲ್ಲಿ.

     ಗಂಡಸರು ಮಕ್ಕಳಿಗೆ ಅಷ್ಟಾಗಿ ಸಮಸ್ಯೆಯಾಗದೇನೊ. ಆದರೆ ಹೆಣ್ಣಮಕ್ಕಳಿಗೆ ಬಯಲು ಬಹಿರ್ದೆಸೆ ದೊಡ್ಡ ಸಮಸ್ಯೆ. ಬೆಳಕು ಮೂಡುವ ಮೊದಲು, ಇಲ್ಲವೆ ರಾತ್ರಿ ಕತ್ತಲಾದ ನಂತರವೇ ಶೌಚಕ್ಕೆ ಹೋಗಬೇಕು. ಹಗಲಿನ ವೇಳೆಯಾದರೆ ಮಹಿಳೆಯರು ಕಾವಲಿಗಿರಲಿ ಎನ್ನವಂತೆ ಗುಂಪಿನಲ್ಲಿ ಹೋಗುವಂತಹ ಸ್ಥಿತಿ ಇದೆ.

      ತುಮಕೂರು ನಗರದಲ್ಲಿ ಘೋಷಿತ ಕೊಳಗೇರಿಗಳಲ್ಲಿ ಶೇಕಡ 30ರಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಶೇಕಡ 20ರಷ್ಟು ಜನ ಸಮುದಾಯ ಶೌಚಾಲಯಗಳನ್ನು ಅವಲಂಬಿಸಿದ್ದಾರೆ. ಉಳಿದ ಶೇಕಡ 50ರಷ್ಟು ಜನ ಬಯಲನ್ನೇ ಅವಲಂಬಿಸಿದ್ದಾರೆ ಎಂದು ಕರ್ನಾಟಕ ಸ್ಲಂ ಜನಾಂದೋಲನಾ ಸಂಘಟನೆಯ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಹೇಳುತ್ತಾರೆ.

     ಕೊಳಗೇರಿ ನಿವಾಸಿಗಳು ಕೂಲಿ ಕಾರ್ಮಿಕರು, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು. ಇವರು ತೀರಾ ಚಿಕ್ಕ ಜಾಗದಲ್ಲಿ ವಾಸಿಸುತ್ತಾರೆ. ಇಲ್ಲಿ ಶೌಚಾಲಯ ನಿರ್ಮಿಸಲು ಅಗತ್ಯವಿರುವಷ್ಟು ಜಾಗದ ಲಭ್ಯತೆ ಸಿಗುವುದಿಲ್ಲ. ಇಂತಹ ಕಡೆ ಸ್ಲಂ ನಿವಾಸಿಗಳ ಅನುಕೂಲಕ್ಕಾಗಿ ಎರಡು ವರ್ಷಗಳ ಹಿಂದೆ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿತ್ತು. ಟ್ರಾಕ್ಟರ್‍ಗಳಲ್ಲಿ ಕಮೋಡ್‍ಗಳನ್ನು ಅಳವಡಿಸಿ ಕೊಳಗೇರಿಗಳಲ್ಲಿ ಪ್ರತಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ನಿಗಧಿತ ಸ್ಥಳಗಳಲ್ಲಿ ನಿಲ್ಲಿಸಲಾಗುತ್ತಿತ್ತು. ಜನ ಅದರ ಬಳಕೆ ಮಾಡಿಕೊಳ್ಳುತ್ತಿದ್ದರು. ಪ್ರಾಯೋಗಿಕವಾಗಿ ಆರಂಭವಾದ ಈ ವ್ಯವಸ್ಥೆ ಅಲ್ಲಿಗೇ ನಿಂತುಹೋಯಿತು ಎಂದು ಹೇಳಿದರು.

     ನಾಗರೀಕ ಸಮಾಜದಲ್ಲಿ ಬಯಲು ಶೌಚ ಪದ್ದತಿ ಸಂಪೂರ್ಣ ನಿಲ್ಲಬೇಕು. ಪ್ರತಿಯೊಬ್ಬರೂ ಶೌಚಾಲಯ ಬಳಸುವಂತಾಗಬೇಕು. ಕೊಳಗೇರಿಗಳಲ್ಲಿ ಬೇಡಿಕೆ ಇರುವ ಕಡೆಗಳಲ್ಲಿ ಸ್ಥಳೀಯ ಆಡಳಿತವು ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡಿ ಅಲ್ಲಿ ನೀರಿನ ವ್ಯವಸ್ಥೆ, ಪೂರಕ ನಿರ್ವಹಣೆ ಮಾಡಿ ಬಳಕೆಗೆ ಅನುವು ಮಾಡಿಕೊಡಬೇಕು. ಮೊಬೈಲ್ ಶೌಚಾಲಯ ಸೇವೆ ಮತ್ತೆ ಆರಂಭಿಸಬೇಕು. ಶೌಚಾಲಯ ಬಳಕೆ ಬಗ್ಗೆ ಕೊಳಗೇರಿ ನಿವಾಸಿಗಳಲ್ಲಿ ಅರಿವು ಮೂಡಿಸಬೇಕು ಎಂದು ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap