ದಾವಣಗೆರೆ
ಕೇಂದ್ರ ಸರ್ಕಾರದ ಮಹಾತ್ವ ಕಾಂಕ್ಷಿಯಾಗಿರುವ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ದಾವಣಗೆರೆ ಮೊದಲ ಹಂತದಲ್ಲೇ ಆಯ್ಕೆ ಯಾಗಿದ್ದರೂ ಸಹ ಈ ವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ , ಕಾಮಗಾರಿಗಳ ವೇಗವನ್ನು ಹೆಚ್ಚಿಸಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಶಾಸಕ ಎಸ್.ಎ. ರವೀಂದ್ರನಾಥ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಕಾಮಗಾರಿ ಕುರಿತು ನಡೆದ ಸಭೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಐದು ವರ್ಷ ಸಮೀಪಿಸುತ್ತಾ ಬಂದರೂ ಸ್ಮಾರ್ಟ್ ಸಿಟಿ ಕಾಮಗಾರಿಗಳು ವೇಗ ಕಂಡುಕೊಂಡಿಲ್ಲ ಅಂದರೆ ಏನು ಅರ್ಥ? ಕಾಮಗಾರಿಗಳ ನಿರ್ವಹಣೆಯಲ್ಲಿ ನೀವುಗಳು ತೆಗೆದುಕೊಳ್ಳುತ್ತಿರುವ ಕ್ರಮ ಸರಿಯಾಗಿಲ್ಲ ಎಂಬ ಅನುಮಾನ ಬರುತ್ತದೆ. ಆದ್ದರಿಂದ ಪ್ರತಿ ತಿಂಗಳ 15 ಅಥವಾ 16ನೇ ದಿನಾಂಕದಂದು ಸಭೆ ನಡೆಸಿ ಚುರುಕು ಮುಟ್ಟಿಸುತ್ತೇನೆ ಎಂದರು.
ಇದಕ್ಕೂ ಮುನ್ನಾ ಶಾಸಕ ಎಸ್.ಎ. ರವೀಂದ್ರನಾಥ ಅವರು ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ 396 ಕೋಟಿ ಹಣ ಬಂದಿದೆ. ಖರ್ಚು ಮಾಡಿರುವುದು ಕೆಲವೇ ಕೋಟಿಗಳು. ಹೀಗಿರುವಾಗ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಅವರಿಗೆ ನಾವೇನೂ ಉತ್ತರ ಕೊಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು.
ಅದಕ್ಕೆ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರು ಸ್ಮಾರ್ಟ್‍ಸಿಟಿ ಯೋಜನೆಯ ಹಿರಿಯ ಅಧಿಕಾರಿ ಸತೀಶ್ ಅವರನ್ನು ತರಾಟೆಗೆ ತೆಗೆದುಕೊಂಡು, ನೀವು ಈ ಹಿಂದಿನ ಸಭೆಗಳಿಗೆ ಸರಿಯಾಗಿ ಬಂದಿಲ್ಲ. ಹೀಗಾಗಿ, ಇಂಥ ಗೊಂದಲಗಳು ಉಂಟಾಗುತ್ತಿವೆ. ಕಾಮಗಾರಿಯ ಕೆಲಸಕ್ಕೆ ಅಡಚಣೆ ಉಂಟಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ, ನಾನು ಬಗೆಹರಿಸುತ್ತೇನೆ. ಅದು ಬಿಟ್ಟು ನೀವು ಮಾಡುವುದಿಲ್ಲ. ನನಗೂ ಮಾಡಲಿಕ್ಕೂ ಹೇಳುವುದಿಲ್ಲ. ಇನ್ನೂ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.
ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ 74 ಕಾಮಗಾರಿಗಳನ್ನು ಮಾಡಬೇಕಿದೆ. ಅದರಲ್ಲಿ 11 ಕಾಮಗಾರಿಗಳು ಸಂಪೂರ್ಣವಾಗಿವೆ. 41 ಕಾಮಗಾರಿಗಳು ಪ್ರಗತಿಯಲ್ಲಿವೆ. ಅವುಗಳಲ್ಲಿ ರಸ್ತೆ, ಚರಂಡಿ, ಪಾರ್ಕ್ ಸೇರಿದಂತೆ ಇನ್ನಿತರೇ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿ ಸತೀಶ್ ವಿವರಣೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ವೀರೇಂದ್ರ ಕುಂದುಗೋಳ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯ ಕ್ರಮವಹಿಸಿರುವುದರ ಬಗ್ಗೆ, ರಾಜ ಕಾಲುವೆ ಸ್ವಚ್ಛತೆ, 2019-20 ನೇ ಸಾಲಿನಲ್ಲಿ ಪಾಲಿಕೆಯಿಂದ ತಯಾರಿಸಿಲಾದ ಕಾಮಗಾರಿಗಳ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ನಗರದಲ್ಲಿ ಕುಡಿಯುವ ನೀರಿಗಾಗಿ ಕೊರೆಸಲಾದ ಕೊಳವೆ ಬಾವಿಗಳಿಗೆ ಇನ್ನೂ ಮೋಟಾರ್ ಪಂಪ್‍ಗಳನ್ನು ಅಳವಡಿಸಿಲ್ಲ. ನಗರದ ಬಹುತೇಕ ಕಡೆಗಳಲ್ಲಿ ಬೀದಿ ದೀಪದ ಸಮಸ್ಯೆ ಹೆಚ್ಚಿದೆ. ನಗರದ ಹಲವೆಡೆ ಕಸ ನಿರ್ವಹಣೆಗೆ ಕಂಟೇನರ್‍ಗಳಿಲ್ಲದೆ, ಕಸದ ರಾಶಿ ಬಿದ್ದಿದೆ ಎಂದು ಪಾಲಿಕೆ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕೊರೆಸಲಾದ 6 ಕೊಳವೆ ಬಾವಿಗಳಿಗೆ ಶೀಘ್ರವಾಗಿ ಮೋಟಾರ್ ಅಳವಡಿಸಲಾಗುವುದು. ಹಾಗೂ ಮತ್ತೆ 6 ನೂತನ ಕೊಳೆವೆ ಬಾವಿಗಳನ್ನು ಕೊರೆಯಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಕಸದ ಸಮಸ್ಯೆ ನಿರ್ವಹಣೆಗಾಗಿ ನಗರಗಳಲ್ಲಿ ಡೋರ್ ಟು ಡೋರ್ ಮೂಲಕವೇ ಕಸ ಸಂಗ್ರಹಿಸುವಂತೆ ಹಾಗೂ ಕಂಟೇನರ್‍ಗಳನ್ನು ಎಲ್ಲಿಯೂ ಇಡದಂತೆ ಆದೇಶಿಸಲಾಗಿದೆ.
ಬೀದಿ ದೀಪಗಳ ಅಳವಡಿಕೆಯಲ್ಲಿ ಎಲ್ಲಾ ಕಡೆಯು ಎಲ್‍ಇಡಿ ಲೈಟ್‍ಗಳನ್ನು ಅಳವಡಿಸಲು ಸೂಚಿಸಲಾಗಿದ್ದು, ಇದುವರೆಗೂ ಯಾವುದೇ ಲೈಟ್‍ಗಳು ಸರಬರಾಜಾಗಿರುವುದಿಲ್ಲವಾದ್ದರಿಂದ ಬೀದಿ ದೀಪದ ಸಮಸ್ಯೆ ಹೆಚ್ಚಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ನಗರದಲ್ಲಿ ನೀರಿನ ಪೂರೈಕೆ ಮಾಡಲು ಅಗತ್ಯ ಹಣವಿದ್ದು, ಅಧಿಕಾರಿಗಳು ವಿಳಂಬ ಏಕೆ ಮಾಡುತ್ತಿದ್ದೀರಾ? ಅವಶ್ಯವಿರುವ ಕಡೆ ಮೋಟಾರ್ ಪಂಪ್‍ಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ನಗರದಲ್ಲಿ ಬೀದಿ ದೀಪ ಅವಶ್ಯಕತೆ ಕುರಿತು ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಬೇಕು ಎಂದು ಸೂಚಿಸಿದರು.ಸಭೆಯಲ್ಲಿ ದೂಡಾ ಆಯುಕ್ತ ಆದಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್, ಸ್ಮಾರ್ಟ್ ಸಿಟಿ ಯೋಜನೆಯ ಅಭಿಯಂತರರು, ಇತರೆ ಅಧಿಕಾರಿಗಳು ಹಾಜರಿದ್ದರು.