ಹುಳಿಯಾರು:
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದ್ದು 200 ರೂ.ವರೆವಿಗೆ ದಂಡ ವಿಧಿಸಬಹುದಾಗಿದೆ. ಹಾಗಾಗಿ ಸಾರ್ವಜನಿಕರು ಇಂತಹವರ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರಾಧಿಕಾ ತಿಳಿಸಿದರು.
ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು, ಶೈಕ್ಷಣಿಕ ಸಂಸ್ಥೆಗಳಿಂದ 100 ಗಜ ಅಂತರದಲ್ಲಿ ಮಾರುವಂತೆ ಕಾನೂನಿದೆ, ಇದು ಉಲ್ಲಂಘನೆಯಾದರೆ ಮುಖ್ಯಶಿಕ್ಷಕರು, ಪ್ರಾಚಾರ್ಯರೇ 200 ರೂ. ದಂಡ ವಿಧಿಸಬಹುದಾಗಿದೆ ಎಂದು ಹೇಳಿದರು.
ಹಿರಿಯ ಪುರುಷ ಆರೋಗ್ಯ ಸಹಾಯಕ ವೆಂಕಟರಾಮಯ್ಯ ಅವರು ಮಾತನಾಡಿ ತಂಬಾಕು ಸೇವನೆಯಿಂದ ಹೃದ್ರೋಗ, ಶ್ವಾಸಕೋಶದ ಖಾಯಿಲೆಗಳು, ದೀರ್ಘಕಾಲಿಕ ಶ್ವಾಸಕೋಶದ ಅಡಚಣೆಯ ಖಾಯಿಲೆ, ಕಡಿಮೆ ತೂಕದ ಮಗುವಿನ ಜನನ, ಮೆದುಳಿನ ಸಂಕೋಚನ, ಅಲ್ಜೈಮರ್ ಖಾಯಿಲೆ, ಕುರುಡುತನ, ನಾಳೀಯ ಬಾಹ್ಯಾವರ್ಣದ ಖಾಯಿಲೆ, ಬ್ರಾಂಕೈಟಿಸ್, ಇಂಫಿಸಿಮಾ, ಲಕ್ಷಾ(ಪಾಶ್ರ್ವವಾಯು), ನೆನಪಿ ಶಕ್ತಿ ಕುಂದುವುದು, ಜ್ಞಾನಗ್ರಹಣದ ಕಾರ್ಯಹೀನತೆಯಂತಹ ಖಾಯಿಲೆಗಳು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಸುವಿಕೆಯಿಂದ ಸಂಭವಿಸುತ್ತವೆ ಎಂದರು.
ಇಂದಿನ ದಿನಮಾನಗಳಲ್ಲಿ ಮಕ್ಕಳು ತಮ್ಮ 14 ನೇ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಪೋಷಕರು ಮೊದಲು ಮಕ್ಕಳನ್ನು ರಕ್ಷಿಸುವುದು ಅತೀ ಮುಖ್ಯವಾಗಿದೆ. ಮಕ್ಕಳು ತಂಬಾಕು ಉತ್ಪನ್ನಗಳೆಡೆಗೆ ಆಕರ್ಷಿತರಾಗದಂತೆ ಮಾಡಲು ಪೋಷಕರು ತಂಬಾಕಿನ ದುಷ್ಪರಿಣಾಮಗಳನ್ನು ಮಕ್ಕಳ ಜೊತೆ ಮುಕ್ತವಾಗಿ ಚರ್ಚಿಸಬೇಕು.
ತಮ್ಮ ಮಕ್ಕಳ ಮುಂದೆ ನೇರವಾಗಿ ತಂಬಾಕು ಇತ್ಯಾದಿಗಳನ್ನು ಸೇವಿಸಬಾರದು. ಧೂಮಪಾನ ಹವ್ಯಾಸಿ ಸ್ನೇಹಿತರಿಂದ ತಮ್ಮ ಮಕ್ಕಳನ್ನು ದೂರವಿಡಬೇಕು ಎಂದರು.ಡಾ.ಪೂಜಾ, ಡಾ.ಚಂದನಾ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನಸೂಯಮ್ಮ, ಕಿರಿಯ ಆರೋಗ್ಯ ಸಹಾಯಕರಾದ ರೇಣುಕರಾಜ್, ಚಂದ್ರಕಾಂತ್, ಮಧು ಹಾಗೂ ಆಶಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.