ಹರಪನಹಳ್ಳಿ :
ಇತ್ತೀಚಿನ ದಿನದಲ್ಲಿ ಗುರು, ಶಿಷ್ಯರ ಸಂಬಂದ ಹಣಕಾಸಿನ ವ್ಯವಹಾರವಾಗಿದೆ ಎಂದು ನಿವೃತ್ತ ಶಿಕ್ಷಕ ವಿಶ್ವೇಶ್ವರಪ್ಪ ( ಈಶಪ್ಪ ) ವಿಷಾಧಿಸಿದರು.
ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ 2001-02ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ದಿನದಲ್ಲಿ ಒತ್ತಡದಿಂದ ಕಲಿಸಲಾಗುತ್ತಿದೆ, ಕೇವಲ ಅಂಕ ಮಾತ್ರ ಪರಿಗಣಿಸುವ ಪರಿಣಾಮ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಶಿಕ್ಷಕನಿಂದ ಪಾಠ ಕೇಳಿದ ಎಲ್ಲ ವಿದ್ಯಾರ್ಥಿಗಳು ವಿವೇಕ ಪಡೆಯುವುದಿಲ್ಲ, ಹಾಗೇಯ ಎಲ್ಲರೂ ಬುದ್ದಿವಂತರಾಗಲು ಸಾಧ್ಯವಿಲ್ಲ ಎಂದರು.
ಗುರುಗಳ ಮೇಲೆ ವಿದ್ಯಾರ್ಥಿಗಳಿಗೆ ಅಭಿಮಾ ಇರಬೇಕು. ಮೊಬೈಲ್,ಸಾಮಾಜಿಕ ಜಾಲತಾಣ ಇಂದಿನ ಶಾಲಾ ಮಕ್ಕಳನ್ನು ಹದಗೆಡಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ನಿವೃತ್ತ ಶಿಕ್ಷಕ ಧರ್ಮಶೇಖರಪ್ಪ ಮಾತನಾಡಿ, ಮಗು ಹುಟ್ಟಿನಿಂದ ಸಾಯುವ ತನಕ ಜೀವನ ಮೌಲ್ಯ ಕಲಿಯುತಿರುತ್ತಾನೆ. ಮಕ್ಕಳ ಸಾಧನೆ ಶಿಕ್ಷಕರಿಗೆ ದೊಡ್ಡ ಖುಷಿ ತರುತ್ತದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಗೌಸ್ ಪೀರ್ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರಿದಾಗ ಸಂತೋಷಪಡುವ ಮೊದಲ ವ್ಯಕ್ತಿ ಶಿಕ್ಷಕ ಎಂದರು. ನಿವೃತ್ತ ಶಿಕ್ಷಕ ಕೆ.ಎಸ್.ಹಡಗಲಿಮಠ ಮಾತನಾಡಿ, ಗುರು, ಶಿಷ್ಯರ ನಡುವಿನ ಸಂಬಂಧ ಸಾಮರಸ್ಯದಿಂದ ಕೂಡಿರಬೇಕು. ಆಗ ಗುರಿಸಾಧನೆ ಸುಲಭವಾಗುತ್ತದೆ ಎಂದು ಹೇಳಿದರು.ನಿವೃತ್ತ ಶಿಕ್ಷಕರಾದ ಲಕ್ಷ್ಮೇಶಪ್ಪ ಮಾತನಾಡಿ, ಕನ್ನಡ ಭಾಷೆಯಲ್ಲಿ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಬೇಕು ಎಂದರು.
ಬೆಳಗ್ಗೆ ಆಟೋಟಗಳನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ಶಿಕ್ಷಕ ನಾಗಭೂಷಣ ತರಬೇತಿ ನೀಡಿದರು. ಕೆ.ಎಸ್.ಹಡಗಲಿಮಠ, ಅಕ್ಕಮಹಾದೇವಿ, ಸರಸ್ವತಿ, ಬೋಜಪ್ಪ, ಈಶಪ್ಪ, ಲಕ್ಷ್ಮೇಶಪ್ಪ, ಧರ್ಮಶೇಖಪ್ಪ, ಗುರುಸಿದ್ದಪ್ಪ, ಕಾಳಪ್ಪ, ಅಂಜಿನಪ್ಪ ಸೇರಿದಂತೆ 20ಕ್ಕು ಹೆಚ್ಚು ಶಿಕ್ಷಕರನ್ನು ಸನ್ಮಾನಿಸಲಾಯಿತು.ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಜ್ಯೋತಿ ಬಸವರಾಜ್, ಬಸವರಾಜ್, ಪಕ್ಕೀರಗೌಡ್ರು, ಗಣೇಶ, ವೀರೇಶ, ಶಿವರಾಜ್, ವೀರೇಂದ್ರ, ಅನಿಸಿಕೆ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








