ಸಮಾಜ ಸುಧಾರಕರು ಜಾತಿಗೆ ಸೀಮಿತವಲ್ಲ

ಚಿತ್ರದುರ್ಗ:

       ತ್ರಿಪದಿ ವಚನಗಳನ್ನು ರಚಿಸಿದ ಸಂತ ಕವಿ ಸರ್ವಜ್ಞರು ಸಮಾಜದ ಎಲ್ಲ ವರ್ಗದವರಿಗೂ ಬೇಕಾದ ಮಹಾನ್ ಬುದ್ದಿ ಜೀವಿ, ಅಂತಹ ಮಹಾನ್ ಸಾಧಕರನ್ನು ಕೇವಲ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸುವುದು ಬೇಡವೆಂದು ಶಾಸಕ ಜಿ. ಹೆಚ್ ತಿಪ್ಪಾರೆಡ್ಡಿ ಹೇಳಿದರು.

       ನಗರದ ತ.ರಾ.ಸು. ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಸಂತಕವಿ ಸರ್ವಜ್ಞ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನ್ ಸಾಧಕರಲ್ಲಿಯೇ ಸಾಧಕರು ಕವಿ ಸರ್ವಜ್ಞ.

          ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತ, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿ, ಸರಳವಾದ ಭಾಷೆಯೊಂದಿಗೆ ವಚನಗಳ ಮೂಲಕ ಜನಮನ್ನಣೆಯನ್ನು ಪಡೆದವರು. ಸಾಮಾನ್ಯವಾಗಿ ಜನಜನಿತವಾಗಿರುವ ನುಡಿಯಲ್ಲಿ ಎಲ್ಲಾ ತಿಳಿದವರನ್ನು ಸರ್ವಜ್ಞನಿಗೆ ಹೋಲಿಸಲಾಗುತ್ತದೆ. ಅದರರ್ಥ ಎಲ್ಲ ಬಲ್ಲವನು ಎಂಬ ಬಿರುದನ್ನು ಪಡೆದಾತ ಎಂದರು.

           ಪ್ರತಿಯೊಂದು ಹಳ್ಳಿಯಲ್ಲೂ ಕುಂಬಾರಿಕೆ ಮಾಡುವವರು ಇದ್ದೆ ಇರುತ್ತಿದ್ದರು. ಆದರೆ ಇದೀಗ ಆಧುನಿಕ ಜಗತ್ತಿಗೆ ಹೊಂದಿಕೊಂಡು ಈ ಕುಲಕಸುಬು ಕಣ್ಮರೆಯಾಗುವ ಹಂತದಲ್ಲಿದೆ. ನಿರುದ್ಯೋಗದ ಸಮಸ್ಯೆಯನ್ನು ಸಮಾಜದ ಯುವಕರು ಅನುಭವಿಸುತ್ತಾ ನಗರ ಪ್ರದೇಶಗಳಿಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನಿಯ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.

          ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಿ.ಬಿ ಶೈಲ ವಿಶೇಷ ಉಪನ್ಯಾಸ ನೀಡಿ, ತ್ರಿಪದಿಯ ಬ್ರಹ್ಮ, ಎಲ್ಲ ಬಲ್ಲವ ಮಹಾ ತತ್ವಜ್ಞಾನಿ ಸರ್ವಜ್ಞ ಬಹುಮುಖವುಳ್ಳ, ಹತ್ತು ಅವತಾರವೆತ್ತಿದ ಸತ್ಪುರುಷ. ನೈತಿಕ ಪ್ರಜ್ಞೆ ಮತ್ತು ವಚನಕಾರರ ವಾರಸುದಾರನಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಕಾಲಜ್ಞಾನಿ. ಕಠಿಣ ಭಾಷೆಯ ಚಂಪೂಕಾವ್ಯವನ್ನು ಸರಳವಾದ ಭಾಷೆಯ ಮುಖಾಂತರ ಸಾಮಾನ್ಯ ಜನರಿಗೆ ಅರ್ಥಗರ್ಭಿತವಾಗುವಂತೆ ಉಪದೇಶ ಮಾಡಿದ ಮಹಾ ಕವಿ ಸರ್ವಜ್ಞ.

         ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವನ ಹುಟ್ಟಿನಿಂದ ಅಳೆಯದೆ, ಅವನ ಸಾಧನೆಯ ಮುಖೇನ ಗುರುತಿಸಬೇಕು ಎಂದು ಹೇಳಿದ ಮಹಾ ಪುರುಷ, ಸಮಾಜದ ಹಲವು ರೋಗಗಳಿಗೆ ತ್ರಿಪದಿಗಳ ಮೂಲಕ ಔಷಧಿ ನೀಡಿ, ಲೋಕಾನುಭವ ಮಾಡಿ, ಜಾತಿ ಪದ್ದತಿಗೆ ಬಲವಾಗಿ ವಿರೋದಿಸಿ, ಜಾತಿಗಳೇ ತುಂಬಿ ತುಳುಕುತ್ತಿರುವ ನಮ್ಮ ದೇಶದಲ್ಲಿ ತಾರತಮ್ಯ ಧೋರಣೆಯನ್ನು ನಿಂದಿಸಿದ ಸಂತಕವಿ ಸರ್ವಜ್ಞ ಎಂದು ಹೇಳಿದರು.

          ಚಿಂತೆಯ ವೈರಾಗ್ಯದಲ್ಲಿ ಬದುಕು ಸ್ಮಶಾನದಲ್ಲಿ ಮುಳುಗುತ್ತಿರುವಾಗ, ಭವಿಷ್ಯತ್ತಿನ ಬಗ್ಗೆ ಯೋಚಿಸುವ ಬುದ್ದಿ ಜೀವಿಗಳನ್ನು ಹಾಗೂ ಸುಳ್ಳನ್ನು ಹೇಳುವವರ ವಿರುದ್ದ ಕೋಪಾಗ್ನಿಯಾದವನು, ಸಂತೆ ಮಾಡಿ ಮುಗಿಸುವ ಸಮಯದಷ್ಟು ನಮ್ಮ ಜೀವನವಿದ್ದು, ಅದರೊಳಗೊಂದಿಷ್ಟು ಸಾಧಿಸಿ ಬದುಕುವುದೇ ನಿಜವಾದ ಜೀವನ. ಹಣ, ಐಶ್ವರ್ಯವನ್ನು ಕೂಡಿಟ್ಟು ಸ್ವಾರ್ಥಕ್ಕಾಗಿ ಜೀವಸುವುದು ಬೇಡವೆಂದು ಸಂದೇಶ ಸಾರಿದ ಸರ್ವಜ್ಞರಂತಹ ದಾರ್ಶನಿಕರ ಸಂಸ್ಕಾರವನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು.

          ಕುಂಬಾರ ಗುರು ಪೀಠದ ಗುರುಬಸವ ತಿಪ್ಪೇಸ್ವಾಮಿ ಮಾತನಾಡಿ, ಕುಂಬಾರ ಸಮುದಾಯದ ಜನ ಸಂಘಟನೆಯಲ್ಲಿ ಹಿಂದಿದ್ದು, ಬೇರೆ ಸಮುದಾಯದ ಜನತೆ ಒಗ್ಗಟ್ಟಿನಿಂದ ತಮ್ಮ ಬಲ ಪ್ರದರ್ಶಿಸುತ್ತಾರೆ ಆದರೆ ನಮ್ಮ ಸಮಾಜದ ಜನರಲ್ಲಿ ಒಗ್ಗಟ್ಟು ಎನ್ನುವುದು ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

         ಸಮುದಾಯದ ಜನ ಒಗ್ಗಟ್ಟಿನಿಂದ ಕೂಡಿ ಶಿಕ್ಷಣವಂತರಾದರೆ, ರಾಜಕೀಯವಾಗಿ ಗುರುತಿಸಿಕೊಳ್ಳಬಹುದು ಹಾಗೂ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಂಡು ಇತರೆ ಸಮುದಾಯದಂತೆ ನಾವೂ ಕೂಡ ಮುನ್ನಡೆ ಸಾಧಿಸಬಹುದೆಂದು ಕಿವಿ ಮಾತು ಹೇಳಿದರು. ಸಮುದಾಯದ ಜನರಲ್ಲಿ ಶಿಕ್ಷಣವೆಂಬುದು ಅಮೃತವಿದ್ದಂತೆ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸಾಧನೆಯಾಗುವಂತೆ ಪೋಷಕರು ಜವಾಬ್ದಾರಿ ವಹಿಸಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಬೇಕು. ಕುಂಬಾರ ಸಮಾಜವನ್ನು ಪ್ರವರ್ಗ-1 ಕ್ಕೆ ಸೇರಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಮಠಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

         ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ನರಸಿಂಹಪ್ಪ, ಕಾರ್ಯದರ್ಶಿ ವೈ. ಮೃತ್ಯುಂಜಯ, ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ, ದಾವಣಗೆರೆ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕುಮಾರ್ ಹಾಗೂ ಸಂಗಡಿಗರು ಗೀತಗಾಯನ ಪ್ರಸ್ತುತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link