ಸಮಾಜದಲ್ಲಿ ಸೇವಾ ಮನಸ್ಥಿತಿ ಹೆಚ್ಚಬೇಕು :ಡಾ. ಸ್ವಾಮಿ ವೀರೇಶಾನಂದ ಸರಸ್ವತಿ

ತುಮಕೂರು     ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಸಂಸ್ಥೆಯ ತುಮಕೂರು ಜಿಲ್ಲಾ ಶಾಖೆಯ ಸಹಯೋಗದಲ್ಲಿ ಬೆಳಗುಂಬದ ವಾಕ್ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಆವರಣದಲ್ಲಿ ಹತ್ತು ಕೋಟಿ ರೂ. ವೆಚ್ಚದ ವಿಶೇಷ ಚೇತನರಿಗೆ ಇನ್‍ಫೋಸಿಸ್ ಫೌಂಡೇಷನ್‍ನ ಕೌಶಲ್ಯ ತರಬೇತಿ ಕೇಂದ್ರಕ್ಕೆ ಕಾನೂನು, ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.

     ಈ ವೇಳೆ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಡಾ. ಸ್ವಾಮಿ ವೀರೇಶಾನಂದ ಸರಸ್ವತಿಯವರು, ಇನ್‍ಫೋಸಿಸ್ ಫೌಂಡೇಶನ್ ಉಪಾಧ್ಯಕ್ಷ ರಾಮದಾಸ್ ಕಾಮತ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಚೇರ್ಮನ್ ಎಸ್. ನಾಗಣ್ಣ, ಉಪಾಧ್ಯಕ್ಷ ಎಂ.ಕೆ.ಶ್ರೀಧರ್, ಶಾಸಕರಾದ ಡಿ.ಸಿ.ಗೌರಿಶಂಕರ್, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಹಾಗೂ ತುಮಕೂರು ಶಾಖೆ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ. ರಾಕೇಶ್‍ಕುಮಾರ್, ಸಂಸ್ಥೆ ಉಪಾಧ್ಯಕ್ಷರು ಹಾಗೂ ಜಿಪಂ ಸಿಇಒ ಶುಭಾ ಕಲ್ಯಾಣ್, ಎಸ್ಪಿ ಡಾ. ವಂಶಿಕೃಷ್ಣ, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಬೆಳಗುಂಬ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಗಳಾಗೌರಮ್ಮ ಮತ್ತಿತರರು ಹಾಜರಿದ್ದರು.

    ಇದರ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ. ಸ್ವಾಮಿ ವೀರೇಶಾನಂದ ಸರಸ್ವತಿಯವರು, ಸೇವೆ ಎನ್ನುವುದು ಪ್ರತಿಯೊಬ್ಬರ ಜೀವನಪರ್ಯಾಂತದ ಜೀವನ ಪದ್ಧತಿಯಾಗಬೇಕು. ಉಸಿರಾಟದಂತೆ ನಿತ್ಯ ಪ್ರಕ್ರಿಯೆಯಾಗಬೇಕು. ಅಸಹಾಯಕರು, ನೆರವಿನ ಅಗತ್ಯವಿರುವವರಿಗೆ ಸಹಾಯಾಸ್ತ ಚಾಚುವ ಮಾನವೀಯ ಮನೋಭಾವ ಬೆಳೆಯಬೇಕು ಎಂದರು.

    ಸ್ವಯಂ ಪ್ರೇರಿತ ಸೇವೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ವಿಶ್ವ ಯುದ್ಧಗಳ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯವರು ಯುದ್ಧದ ಗಾಯಾಳುಗಳಿಗೆ ತಾರತಮ್ಯವಿಲ್ಲದೆ ಶುಶ್ರೂಶೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸೇವೆ ಮೂಲಕ ಸಂಸ್ಥೆ ಅಸಂಖ್ಯಾತ ಜನರಿಗೆ ನೆರವಾಗಿದೆ ಎಂದು ಹೇಳಿದರು.

    ವಿಕಲ ಚೇತನರ ಸಮಸ್ಯೆಗೆ ಅಂಗವೈಕ್ಯತೆ ಕಾರಣವಲ್ಲ, ಸಮಾಜದ ಜವಾಬ್ದಾರಿ, ಜಾಗೃತಿ ಕೊರತೆ ಕಾರಣ ಎಂದ ಸ್ವಾಮೀಜಿ, ವಿಕಲಚೇತನರಲ್ಲಿರುವ ಚೈತನ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಸಮಾಜದ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಆಶಿಸಿದರು.

    ರೋಗಗಳು ಇಲ್ಲವೆಂದ ಮಾತ್ರಕ್ಕೆ ಸಮಾಜ ಆರೋಗ್ಯವಾಗಿದೆ ಎಂದೇನಲ್ಲ, ಆರೋಗ್ಯವಂತ ಮನಸ್ಥಿತಿಗಳೂ ಇರಬೇಕು, ಅಂತಹ ಮನಸ್ಸುಗಳನ್ನು ಸಿದ್ಧಪಡಿಸುವ ಕೆಲಸಗಳಾಗಬೇಕು. ಯುದ್ಧಗಳು ಮೊದಲು ಆರಂಭವಾಗುವುದು ಬುದ್ಧಿಯಿಂದ, ನಂತರ ಅವು ಕಾರ್ಯರೂಪಕ್ಕೆ ಬರುತ್ತವೆ. ಆದರೆ, ಖಡ್ಗದಿಂದ ಸಮಾಜ ಕಟ್ಟುತ್ತೇವೆ ಎಂದು ಹೊರಟವರು ಕಡೆಗಾಲದಲ್ಲಿ ಏನೇನಾದರು ಎಂಬುದನ್ನು ಇತಿಹಾಸ ಹೇಳಿದೆ ಎಂದರು.

   ವಿಜ್ಞಾನಿಗಳು ಲೌಕಿಕ ಸುಖಗಳನ್ನು ಸುಧಾರಿಸುತ್ತಾರೆ. ಆದರೆ, ಜನರ ಆಂತರಂಗದ ಪ್ರಶ್ನೆಗಳಿಗೆ ಉತ್ತರವಾಗುವುದಿಲ್ಲ ಎಂದ ಅವರು, ರೆಡ್‍ಕ್ರಾಸ್ ಸಂಸ್ಥೆಯ ಸೇವಾಕಾರ್ಯ ಅಂತ:ಕರಣ ತಟ್ಟುತ್ತದೆ ಎಂದರು.ಸಮಾಜ ಸೇವೆಯಲ್ಲಿ ಮಾದರಿಯಾಗಿರುವ ಇನ್ಫೋಸಿಸ್ ಫೌಂಡೇಷನ್ ದೇಶಾದ್ಯಂತ ಲಕ್ಷಾಂತರ ಜನರಿಗೆ ನೆರವಾಗಿದೆ. ಈ ಸಂಸ್ಥೆ ಕಾರ್ಯ ಮತ್ತಷ್ಟು ವಿಸ್ತರಣೆಗೊಂಡು ಹೆಚ್ಚು ಜನರಿಗೆ ಸಹಾಯ ದೊರೆಯಲಿ. ಸಂಸ್ಥೆ ಮುನ್ನಡೆಸುತ್ತಿರುವ ಸುಧಾಮೂರ್ತಿಯವರು ಕರ್ನಾಟಕದ ಮಹಾಲಕ್ಷ್ಮಿ ಎಂದು ಡಾ. ವೀರೇಶಾನಂದ ಸರಸ್ವತಿಯವರು ಶ್ಲಾಘಿಸಿದರು.

    ಇನ್ಫೋಸಿಸ್ ಫೌಂಡೇಷನ್‍ನ ಉಪಾಧ್ಯಕ್ಷ ರಾಮದಾಸ್ ಕಾಮತ್ ಮಾತನಾಡಿ, ಪ್ರಚಾರಕ್ಕಾಗಿ ಮಾಡುವುದು ಸೇವೆಯಾಗದು, ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳು ಇವತ್ತಿಗೂ ಬಹಳಷ್ಟು ಜನರಿಗೆ ಗೊತ್ತಿಲ್ಲ. ಗೊತ್ತಾಗುವುದು ಸಂಸ್ಥೆಯ ಉದ್ದೇಶವಲ್ಲ, ಸೇವೆಯೇ ಇದರ ಗುರಿ, ಧೈಯ. ಸಂಸ್ಥೆಯವರು ತಮ್ಮ ಹಣ, ಶ್ರಮ ಹಾಕಿ ಮಾಡುವ ಈ ಸೇವಾಕಾರ್ಯ ಶ್ರೇಷ್ಠವಾದುದು ಎಂದರು.
ವಿಶೇಷ ಚೇತನರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಏನು ಮಾಡಬೇಕು, ಅಸಹಾಯಕರಾಗಿ ಭಿಕ್ಷೆ ಬೇಡುವಂತಾಗಬಾರದು, ಅವರು ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ತಾವು ನಿಂತು ಬಾಳುವ ವ್ಯವಸ್ಥೆ ಆಗಬೇಕು. ಅದರ ಪ್ರಯತ್ನವೇ ಈಗ ನಡೆದಿದೆ ಎಂದು ಹೇಳಿದರು.

     ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಇನ್ಫೋಸಿಸ್ ಫೌಂಡೇಷನ್‍ನ ಕೌಶಲ್ಯ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿ ರೆಡ್ ಕ್ರಾಸ್ ಸಂಸ್ಥೆ ಹಾಗೂ ಇನ್ಫೋಸಿಸ್ ಫೌಂಡೇಷನ್‍ಗೆ ಗೌರವ ಸಲ್ಲಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.

    ಇನ್ಫೋಸಿಸ್ ಫೌಂಡೇಷನ್‍ನ ಉದಯ ಪ್ರಭು, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿ, ಡಿಹೆಚ್‍ಓ ಡಾ. ಚಂದ್ರಕಾ, ಉಪಾಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಖಜಾಂಚಿ ಜಿ.ವಿ.ವಾಸುದೇವ್, ಸದಸ್ಯರಾದ ಸಾಗರನಹಳ್ಳಿ ಪ್ರಭು, ಪ್ರೊ.ಕೆ. ಚಂದ್ರಣ್ಣ, ಬಿ.ಆರ್.ವೇಣುಗೋಪಾಲಕೃಷ್ಣ, ಸುರೇಂದ್ರ ಎ.ಷಾ, ಕೆ.ಜಿ.ಶಿವಕುಮಾರ್, ಟಿ.ಆರ್.ಮಲ್ಲೇಶಯ್ಯ, ಸುಭಾಷಿಣಿ ಆರ್ ಕುಮಾರ್, ಮುಸ್ತಾಕ್ ಅಹಮದ್, ಜಿ.ವೆಂಕಟೇಶ್, ಉಮೇಶ್, ಜಿ.ವಿ.ರಾಮಮೂರ್ತಿ, ಡಾ. ಡಿ.ಎನ್.ಯೋಗೀಶ್ವರಪ್ಪ, ಪ್ರಸನ್ನಕುಮಾರ್ ನಿವೃತ್ತ ಡಿಐಜಿ ಗೋಪಾಲ ಹೊಸೂರು, ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಆಡಿಟರ್ ಟಿ.ಆರ್. ಆಂಜನಪ್ಪ ಮತ್ತಿತರರು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap