ಸಮಾಜದ ವಿಜ್ಞಾನ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ

ಚಳ್ಳಕೆರೆ

         ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಉತ್ತರ ಬರೆಯಬೇಕು. ಪ್ರತಿಯೊಂದು ಹಂತದಲ್ಲೂ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಶಿಕ್ಷಕರೂ ಸಹ ಸಮಯೋಚಿತವಾಗಿ ಬೋಧನೆಯನ್ನು ನೀಡುತ್ತಿದ್ದು, ವಿದ್ಯಾರ್ಥಿಗಳ ಪರಿಶ್ರಮ ಫಲಿತಾಂಶವನ್ನು ಉತ್ತಮ ಪಡಿಸುವಂತಾಗಬೇಕೆಂದು ಜಿಲ್ಲಾ ಉಪನಿರ್ದೇಶಕ ಅಂಥೋನಿ ರಾಜ್ ತಿಳಿಸಿದರು.

         ಅವರು,ಬುಧವಾರ ಇಲ್ಲಿನ ಬಾಪೂಜಿ ವಿದ್ಯಾಸಂಸ್ಥೆ ಆಡಿಟೋರಿಯಂನಲ್ಲಿ ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ಆಯ್ದ ಸಮಾಜದ ವಿಜ್ಞಾನ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ವಿಶೇಷವಾಗಿ ಪರೀಕ್ಷೆ ಕೇವಲ ಕೆಲವೇ ದಿನಗಳು ಉಳಿದಿದ್ದು, ಈ ಹಿನ್ನೆಲೆಯಲ್ಲಿ ಪ್ರತಿನಿತ್ಯವೂ ಈ ಸಮಯವನ್ನು ಗುಣಾತ್ಮಕ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸದುಪಯೋಗ ಪಡಿಸಿಕೊಳ್ಳಬೇಕು. ಕಳೆದ ಸಾರಿ ಈ ತಾಲ್ಲೂಕು ಎಸ್‍ಎಸ್‍ಎಲ್‍ಸಿಯಲ್ಲಿ ಶೇ.88 ಪಡೆದಿದ್ದು, ಈ ಬಾರಿ ಶೇ. 100ರ ಫಲಿತಾಂಶ ದಾಖಲಿಸಲು ನೆರವಾಗಬೇಕೆಂದರು.

         ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಮಾಹಿತಿಯ ಜೊತೆಗೆ ಇಂತಹ ಸಂವಾದ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣಗಳ ಮೂಲಕ ಪ್ರತಿಯೊಂದು ವಿಷಯದಲ್ಲೂ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಲಾಗುತ್ತಿದೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವ ಛಲಹೊಂದಿರಬೇಕು. ಶಿಕ್ಷಕರೂ ಸಹ ಉಳಿದಿರುವ ಅವಧಿಯಲ್ಲಿ ವಿದ್ಯಾರ್ಥಿಗಳ ಎಲ್ಲಾ ವಿಷಯಗಳ ಸಮಸ್ಯೆಗೆ ಸಕರಾತ್ಮಕವಾಗಿ ಸ್ಪಂದಿಸಬೇಕು. ಪರೀಕ್ಷೆ ಎಂಬ ಭಯವನ್ನು ತೊರೆದು ಫಲಿತಾಂಶದಲ್ಲಿ ಉತ್ತಮ ಸ್ಥಾನಗಳಿಸುತ್ತೇನೆಂಬ ಆತ್ಮವಿಶ್ವಾಸದಿಂದ ಶ್ರಮವಹಿಸಿ ಓದಬೇಕು ಎಂದರು.

          ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ಆಯ್ದ ವಿದ್ಯಾರ್ಥಿಗಳು ಮಾತ್ರ ಈ ಸಂವಾದಲ್ಲಿ ಭಾಗವಹಿಸಿದ್ದಾರೆ. ಸಮಾಜ ವಿಜ್ಞಾನ ವಿಚಾರ ಸಂಕಿರಣ ಎಲ್ಲಾ ವಿದ್ಯಾರ್ಥಿಗಳಿಗೂ ಅರ್ಥೈಸುವಂತೆ ಮಾಹಿತಿ ನೀಡಲಾಗಿದೆ. ಈಗಾಗಲೇ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳ ಎಲ್ಲಾ ವಿಷಯ ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ವಿಶೇಷ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಜಾಗೃತಗೊಳಿಸುವ ಹೊಣೆಯನ್ನು ನೀಡಲಾಗಿದೆ ಎಂದರು.

         ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಸಮಾಜ ವಿಜ್ಞಾನ ಶಿಕ್ಷಕರ ಕ್ಲಬ್ ಜಿಲ್ಲಾಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಪ್ರಸ್ತುತ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸವಾಲಾಗಿದ್ದು, ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ವಿಭಾಗದ ಫಲಿತಾಂಶವನ್ನು ಉತ್ತಮಗೊಳಿಸಲು ಜಿಲ್ಲಾ ಶಿಕ್ಷಕರ ಕ್ಲಬ್ ವತಿಯಿಂದ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಯಾವುದೇ ಹಂತದಲ್ಲೂ ವಿದ್ಯಾರ್ಥಿ ಯಾವ ವಿಷಯದಲ್ಲೂ ಹಿನ್ನಡೆ ಸಾಧಿಸಬಾರದು ಎಂಬ ಆಶಾಭಾವನೆಯನ್ನು ಶಿಕ್ಷಣ ಇಲಾಖೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಕರು ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದ್ಧಾರೆ. ಉತ್ತಮ ಫಲಿತಾಂಶವನ್ನು ಹೊಂದುವ ಗುರಿ ಎಲ್ಲಾ ಶಿಕ್ಷಕರ ಮುಂದಿದೆ ಎಂದರು.

          ಸಮಾಜದ ವಿಜ್ಞಾನ ವಿಚಾರ ಸಂಕಿರಣ ಹಾಗೂ ಸಂವಾದ ವಿಚಾರಗಳ ಬಗ್ಗೆ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಪರೀಕ್ಷೆ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳ ಬಗ್ಗೆ ಪಠ್ಯಪುಸ್ತಕಗಳ ಕ್ಲಿಷ್ಟ ವಿಷಯಗಳ ಬಗ್ಗೆ ಮಹದೇವಪ್ಪ ಕುಂದರಗಿ, ಸಮಾಜ ವಿಜ್ಞಾನದಲ್ಲಿ ಹೆಚ್ಚು ಅಂಕ ಗಳಿಸುವ ಬಗ್ಗೆ ಸಂತೋಷಕುಮಾರ್, ಮಲ್ಲಿಕಾರ್ಜುನ ಉಪಯುಕ್ತ ಮಾಹಿತಿ ನೀಡಿದರು.

          ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಂ.ಪಾಲಯ್ಯ, ವಿಷಯ ಪರಿವೀಕ್ಷಕ ಗೋವಿಂದಪ್ಪ, ತಾಲ್ಲೂಕು ಸಮಾಜ ವಿಜ್ಞಾನ ಶಿಕ್ಷಕರ ಕ್ಲಬ್ ಅಧ್ಯಕ್ಷ ಕೆ.ಪಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಶಿವಮೂರ್ತಿ, ಡಿ.ವೀರಣ್ಣ, ನಜೀರ್, ಸಂಚಾಲಕ ಡಿ.ಈರಣ್ಣ, ರಾಜ್ಯ ಪ್ರಶ್ನೆ ಪತ್ರಿಕೆ ವಿಭಾಗದ ಡಿ.ಚಿಕ್ಕಿರಪ್ಪ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap