ಸೊಳ್ಳೆಗಳ ನಿಯಂತ್ರಣಕ್ಕೆ ಲಾರ್ವಾಹಾರಿ ಮೀನುಗಳ ವಿತರಣೆ

ಚಿತ್ರದುರ್ಗ :

     ಸೊಳ್ಳೆಗಳಿಂದ ಹರಡುವ ಡೆಂಗ್ಯು, ಚಿಕುಂಗುನ್ಯಾ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸೊಳ್ಳೆಗಳ ಲಾರ್ವ ತಿನ್ನುವ ಗಪ್ಪಿ ಮತ್ತು ಗಂಬೂಸಿಯಾ ಮೀನುಗಳನ್ನು ಸಮಸ್ಯಾತ್ಮಕ ಗ್ರಾಮಗಳಲ್ಲಿ ವಿತರಿಸಲು ಕ್ರಮ ಕೈಗೊಂಡಿದ್ದು, ಈ ದಿಸೆಯಲ್ಲಿ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಲಾರ್ವಾಹಾರಿ ಮೀನುಮರಿಗಳನ್ನು ಬುಧವಾರದಂದು ವಿತರಿಸಲಾಯಿತು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯಕೇಂದ್ರ ಜಿ.ಆರ್.ಹಳ್ಳಿ ಇವರ ಸಹಯೋಗದೊಂದಿಗೆ ಡೆಂಗ್ಯೂ ಜಾಗೃತಿ , ಹಾಗೂ ಲಾರ್ವಾಹಾರಿ ಮೀನು ವಿತರಣಾ ಕಾರ್ಯಕ್ರಮ ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಜರುಗಿತು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಬಿ.ವಿ.ಸವಿತಾ ಮಾತನಾಡಿ, ಡೆಂಗ್ಯೂ ನಿಯಂತ್ರಣ ಹಾಗೂ ಜಾಗೃತಿ ಮನೆ ಮಾತಾಗಬೇಕು. ಸಾರ್ವಜನಿಕರು ಅನೈರ್ಮಲ್ಯ ಕುರಿತು ಬೇರೆಯವರನ್ನು ದೂರುವ ಮೊದಲು, ತಮ್ಮ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರ ನೈರ್ಮಲ್ಯ ಕಾಪಾಡಲು ಮುಂದಾಗುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

      ತಾ.ಪಂ. ಸದಸ್ಯ ಎಮ್.ಆರ್.ಪ್ರಸನ್ನ ಮಾತನಾಡಿ, ನೀರು ಅಮೂಲ್ಯವಾದದ್ದು. ನೀರನ್ನು ಸಂಗ್ರಹಿಸುವಾಗ ಸಂಗ್ರಹಗಾರಗಳು, ತೊಟ್ಟಿಗಳನ್ನು ಚೆನ್ನಾಗಿ ತೊಳೆದು ನೀರು ಸಂಗ್ರಹಿಸಿಡಬೇಕು. ಸೊಳ್ಳೆಗಳು ಮರಿ ಮಾಡದಂತೆ ಸಂಗ್ರಹಗಾರಗಳನ್ನು ಮುಚ್ಚಬೇಕು. ಕಾಯಿಲೆ ಬಂದ ನಂತರ ಒದ್ದಾಡುವ ಬದಲು, ರೋಗವೇ ಬಾರದಹಾಗೆ ಮುನ್ನೆಚ್ಚರಿಕೆ ವಹಿಸಿ ಎಂದರು.

     ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್.ಬಿ.ವಿ. ಮಾತನಾಡಿ, ಜಿ.ಆರ್. ಹಳ್ಳಿಯಲ್ಲಿ ಶಂಕಿತ ಡೆಂಗ್ಯು ಕಂಡುಬಂದಿದ್ದು, ನಿಯಂತ್ರಣ ನಿಟ್ಟಿನಲ್ಲಿ ಲಾರ್ವ ಸಮೀಕ್ಷೆ ಕೈಗೊಳ್ಳಲಾಗಿದೆ. ಈಗಾಗಲೇ ಐದಾರು ದಿನದಿಂದ ದಿನವೂ ಆರೋಗ್ಯ ತಪಾಸಣೆ ನಡೆಸಿತ್ತಿದ್ದು, ಮುಂಜಾನೆ ಮುಸ್ಸಂಜೆ ಧೂಮೀಕರಣ ಕಾರ್ಯವು ಸಹ ನಡೆಯುತ್ತಿದೆ, ಜ್ವರ ಪ್ರಕರಣಗಳು ಕಡಿಮೆಯಾಗಿದೆ. ಜನರು ಭಯಪಡುವ ಅವಶ್ಯಕತೆ ಇಲ್ಲ. ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ಪ್ರತೀ ದಿನವೂ ನಡೆಯುತ್ತಿದೆ.

     ಮನೆಗಳಲ್ಲಿ ಲಾರ್ವಾ ಸಾಂದ್ರತೆ ಹೆಚ್ಚು ಇರುವುದರಿಂದ ಈ ಗ್ರಾಮದ ಮನೆಗಳಿಗೆ ಲಾರ್ವಾಹಾರಿ ಗಪ್ಪಿ ಮತ್ತು ಗಂಬೂಸಿಯಾ ಮೀನು ವಿತರಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಿ ಎಂದರು.

    ಜಿಲ್ಲಾ ಕೀಟ ಶಾಸ್ತ್ರಜ್ಞೆ ನಂದಿನಿಕಡಿ ಮಾತನಾಡಿ, ಲಾರ್ವಾಹಾರಿ ಗಪ್ಪಿ ಗ್ಯಾಂಬೂಶಿಯ ಮೀನುಗಳನ್ನು ನಿಮ್ಮ ಮನೆಯ ನೀರಿನ ಸಂಗ್ರಹ ಮೂಲಗಳಲ್ಲಿ ಬಿಡಬೇಕು. ಇದರಿಂದ ಸೊಳ್ಳೆಗಳ ಉತ್ಪತ್ತಿ ನಿಲ್ಲುತ್ತದೆ ಈ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದು ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಮನೆ ಮುಂದೆ ಚಿಪ್ಪು, ಟೈರು, ಒಡೆದ ಮಡಿಕೆ ಪ್ಲಾಸ್ಟಿಕ್ ಕಪ್, ಇತರೆ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಿ, ಸಾಧ್ಯವಾದಷ್ಟು ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಿ ಜ್ವರ ತಲೆನೋವು ಇದ್ದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ ರಕ್ತಪರೀಕ್ಷೆ ಮಾಡಿಸಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ ಎಂದರು.

      ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಡೆಂಗ್ಯೂ ಜಾಗೃತಿ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಬಾಗವಹಿಸಿದ ಸಾರ್ವಜನಿಕರಿಗೆ ಲಾರ್ವಹಾರಿ ಮೀನು ಮರಿಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಮೇಘನ, ಪಿ.ಡಿ.ಒ. ಚೇತನ್ ಬಾಬು, ಗ್ರಾ.ಪಂ. ಉಪಾಧ್ಯಕ್ಷೆ ಗೀತಮ್ಮ, ರೈತ ಮುಖಂಡರಾದ ಜಿ.ಟಿ.ವೆಂಕಟೇಶ ರೆಡ್ಡಿ, ಪಾತಣ್ಣ ರೆಡ್ಡಿ, ಕೀಟಶಾಸ್ತ್ರಜ್ಞ ಸಿದ್ದಪ್ಪಸ್ವಾಮಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಆರೋಗ್ಯ ಸಹಾಯಕರು, ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap