ಸೂಕ್ಷ್ಮನೀರಾವರಿ ಯೋಜನೆ-ರೈತರಿಗೆ ವರದಾನ!

ಹೊಸಪೇಟೆ:

    ಸತತ 3-4 ವರ್ಷದಿಂದ ಮಳೆ ಕೊರತೆಯಿಂದ ಕಂಗಾಲಾಗಿದ್ದ ರೈತರಿಗೆ ಸೂಕ್ಷ್ಮ ನೀರಾವರಿ ಯೋಜನೆಯು ವರದಾನವಾಗುವುದರ ಮೂಲಕ ಅವರ ಆರ್ಥಿಕ ಹೊರೆ ತಪ್ಪಿಸಲಿದೆ.

ಯಾವ ಯೋಜನೆ :

     ಪ್ರಧಾನಿ ನರೇಂದ್ರ ಮೋದಿರವರು ಸಂಕಷ್ಟದಲ್ಲಿರುವ ರೈತರಿಗಾಗಿ ಮತ್ತು ಕಡಿಮೆ ನೀರು ಬಳಕೆಮಾಡಿಕೊಂಡು ಕೃಷಿ ಬೆಳೆಗಳನ್ನು ಬೆಳೆಯುವ ರೈತ ವರ್ಗಕ್ಕೆ ಸಹಕಾರಿಯಾಗುವ ಸಲುವಾಗಿ ಸೂಕ್ಷ್ಮ ನೀರಾವರಿ ಯೋನೆಯನ್ನು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸಿದೆ.

     ಪ್ರತಿಯೊಬ್ಬ ರೈತರಿಗೂ ತಲಾ ಎರಡೂವರೆ ಇಂಚಿನ ನೀರಿನ 30 ಪೈಪ್, 5ಸ್ಪ್ರಿಂಕಲ್ (ತುಂತುರು ನೀರು ಸಿಂಪಡಿಸುವ ) ಯಂತ್ರಗಳನ್ನು ವಿತರಿಸುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಯಾವುದೇ ರೈತರು ಕೃಷಿ ಇಲಾಖೆಗೆ ನೇರವಾಗಿ ಇಲ್ಲ ಆಯಾ ಹೋಬಳಿ ಮಟ್ಟದ ಕೃಷಿ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಬಹುದು.

   ಜೊತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಜಮೀನುಗಳಲ್ಲಿ ಬೋರ್‍ವೆಲ್(ಕೊಳವೆಬಾವಿ)ಹೊಂದಿದ ದೃಢೀಕರಣ, ಆಧಾರ್ ಪ್ರಮಾಣ ಪತ್ರ ಮತ್ತು ಜಮೀನಿನ ಪಹಣೆಯೊಂದಿಗೆ ಅರ್ಜಿ ಸಲ್ಲಿಸಿ 5 ಎಕರೆಯೊಳಗಿನ ರೈತರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು.
ಹೊಸಪೇಟೆ ಸೇರಿದಂತೆ ಜಿಲ್ಲೆಯ ಬಳ್ಳಾರಿ, ಕಂಪ್ಲಿ, ಕುರುಗೋಡು, ಕೂಡ್ಲಿಗಿ, ಸಿರುಗುಪ್ಪ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು ಸೇರಿದಂತೆ ಇತರ ಎಲ್ಲ ತಾಲೂಕುಗಳಲ್ಲಿ ಈಗಾಗಲೇ ಈ ಯೋಜನೆಯ ಮೊದಲ ಭಾಗವಾಗಿ 300ಕ್ಕೂ ಹೆಚ್ಚು ರೈತರಿಗೆ ವಿತರಿಸಲಾಗಿದೆ.

     2ನೇ ಹಂತದ ವಿತರಣೆ ಕಾರ್ಯ ಆರಂಭವಾಗಿದ್ದು ಹೊಸಪೇಟೆ ತಾಲೂಕಿನ ಕಮಲಾಪುರ ಹೋಬಳಿ ವ್ಯಾಪ್ತಿಯ ಕಮಲಾಪುರ, ಬುಕ್ಕಸಾಗರ, ವೆಂಕಟಾಪುರ, ವಡ್ಡರಹಳ್ಳಿ, ನಲ್ಲಾಪುರ, ಚಿನ್ನಾಪುರ, ಹಂಪಿ, 76 ವೆಂಕಟಾಪುರ, ಭುವನಹಳ್ಳಿ, ಗಾದಿಗನೂರು, ಗುಂಡ್ಲುವದ್ದಿಗೇರಿ, ಬೈಲುವದ್ದಿಗೇರಿ, ಕಾಕುಬಾಳು, ಪಿ.ಕೆ. ಹಳ್ಳಿ ಸೇರಿದಂತೆ ಇತರ ಗ್ರಾಮೀಣ ಭಾಗದ ರೈತರು ಸಲ್ಲಿಸಿದ ಅರ್ಜಿಗೆ ಮೊದಲ ಹಂತದ ವಿಲೇವಾರಿಯೂ ಪೂರ್ಣಗೊಂಡಿದ್ದು 2ನೇ ಹಂತದ ವಿತರಿಸುವ ಕಾರ್ಯ ಭರದಿಂದ ಸಾಗಿದೆ.

      ಕಳೆದ ಹಲವು ವರ್ಷದಿಂದ ಹೊಸಪೇಟೆ ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮಳೆ ಅಭಾವದಿಂದ ಸತತ ಬೆಳೆ ಹಾನಿಯಿಂದ ಕಂಗಾಲಾಗಿದ್ದ ರೈತರಿಗೆ ಈ ಯೋಜನೆ ವರದಾನವಾಗಿದೆ. ಬೋರ್‍ವೆಲ್ ಹೊಂದಿರುವ ರೈತರು ಕಡಿಮೆ ನೀರಿನಲ್ಲಿ ಕನಿಷ್ಠ 5 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಲು ಈ ಯೋಜನೆ ಸಹಕಾರಿಯಾಗಲಿದೆ.

      ಯೋಜನೆಯಡಿ ಫಲಾನುಭವಿಗಳಿಗೆ 21700 ರೂ.ಗಳ ಮೌಲ್ಯದ ಪೂರ್ಣ ಘಟಕ ವೆಚ್ಚ ಸರಕಾರ ಭರಿಸಲಿದೆ. ಫಲಾನುಭವಿಯೂ ಈ ಯೋಜನೆ ಲಾಭಪಡೆಯಲು 1995 ರೂ.ಗಳನ್ನು ಮಾತ್ರ ಭರಿಸಬೇಕು. ಒಟ್ಟಾರೆ ಕಡಿಮೆ ನೀರಿನಲ್ಲಿ ರೈತರಿಗೆ ಹೆಚ್ಚು ಆದಾಯ ತರುವ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ಮೆಣಸಿನಕಾಯಿ, ಹತ್ತಿಗೆ ಸಹಕಾರಿಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap