ಬೆಂಗಳೂರು
ಬೆಳಗಾವಿ ನಗರಕ್ಕೆ ದಿನದ 24×7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಹೇಳಿದರು.ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅಭಯ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿ ನಗರಕ್ಕೆ 24×7 ನಿರಂತರ ಕುಡಿಯುವ ನೀರು ಒದಗಿಸಲು ವಿಶ್ವ ಬ್ಯಾಂಕ್ ನೆರವಿನಡಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇನ್ನೊಂದು ತಿಂಗಳಲ್ಲಿ ಈ ಯೋಜನೆ ಅನುಷ್ಠಾನ ಮಾಡುವ ಭರವಸೆ ನೀಡಿದರು.
ಈ ಕುಡಿಯುವ ನೀರು ಯೋಜನೆಗೆ 707.10 ಕೋಟಿ ರೂ. ವೆಚ್ಚವಾಗಲಿದ್ದು, ಈ ಯೋಜನೆ ಜಾರಿಯಾದರೆ ಬೆಳಗಾವಿ ನಗರದ ಕುಡಿಯುವ ನೀರಿನ ಯೋಜನೆ ಸಮಸ್ಯೆ ಬಗೆಹರಿಯಲಿದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆ ವತಿಯಿಂದ ವಿಶ್ವಬ್ಯಾಂಕ್ ನೆರವಿನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಡಿ 24×7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದದರು.
ಈ ಕಾಮಗಾರಿ ಗುತ್ತಿಗೆಯನ್ನು ಡಿಸೈನ್ ಬಿಲ್ಡ್ ಆಪರೇಟ್ ಟ್ರಾನ್ಸ್‍ಫರ್ (ಡಿಬಿಓಟಿ) ಮಾದರಿಯಲ್ಲಿ ನೀಡಲು ಒಪ್ಪಿಗೆ ನೀಡಲಾಗಿದ್ದು, ಈಗಾಗಲೇ ಟೆಂಡರ್ ಕರೆದು ಆರ್ಥಿಕ ಬಿಡ್‍ನ್ನು ತೆರೆಯಲಾಗಿದೆ. 7-3-2020 ರಂದು ನಡೆದ 19ನೇ ಅಧಿಕಾರಿಯುತ ಸಮಿತಿ ಸಭೆಯಲ್ಲಿ ಆರ್ಥಿಕ ಬಿಡ್‍ಗೆ ಅನುಮೋದನೆ ದೊರೆತಿದ್ದು, 12-3-2020 ರಂದು ವಿಶ್ವಬ್ಯಾಂಕ್‍ನಿಂದ ನಿರಕ್ಷೇಪಣಾ ಪತ್ರ (ಎನ್‍ಓಸಿ) ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಶ್ವಬ್ಯಾಂಕ್‍ನಿಂದ ನಿರಕ್ಷೇಪಣಾ ಪತ್ರ ದೊರೆತ ನಂತರ ಗುತ್ತಿಗೆ ಕರಾರು ಮಾಡಿಕೊಂಡು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಶ್ವಬ್ಯಾಂಕ್‍ಗೆ ಈ ಯೋಜನೆ ಸಂಬಂಧ ಸಮಗ್ರ ವರದಿಯನ್ನು ಸಲ್ಲಿಸಿದ್ದೇವೆ. ವಿಶ್ವಬ್ಯಾಂಕ್ ನೆರವಿನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ರಕ್ಕಸಕೊಪ್ಪ ಜಲಾಶಯದ ಎತ್ತರವನ್ನು ಹೆಚ್ಚಿಸಿ ಸಮರ್ಪಕ ಕುಡಿಯುವ ನೀರು ಒದಗಿಸುವ ಬಗ್ಗೆ ಸರ್ವೆ ನಡೆಸಿ ಜಲಾಶಯ ಎತ್ತರದಿಂದ ಆಗುವ ಅನಾಹುತಗಳು, ಸಾಧಕ-ಬಾಧಕಗಳು ಎಲ್ಲದರ ಬಗ್ಗೆಯೂ ಉನ್ನತ ಅಧಿಕಾರಿಗಳಿಂದ ವರದಿ ಪಡೆದು ಜಲಾಶಯ ಎತ್ತರದ ಬಗ್ಗೆ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಅಮೃತ್ ಯೋಜನೆಯಡಿ ಬೆಳಗಾವಿ ನಗರದಲ್ಲಿ 46.756 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗವನ್ನು ಅಳವಡಿಸುವ ಹಾಗೂ ಇನ್ನಿತರ ಕಾಮಗಾರಿಗಳನ್ನು 156 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಉತ್ತರ ಮತ ಕ್ಷೇತ್ರದಲ್ಲಿ 7.40 ಕಿ.ಮೀ.ನಲ್ಲಿ 2.95 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗ ಪೂರ್ಣಗೊಳಿಸಲಾಗಿದೆ. ದಕ್ಷಿಣ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 39.35 ಕಿ.ಮೀ. ಪೈಕಿ 33.09 ಕಿ.ಮೀ. ಒಳಚರಂಡಿ ಕಾಮಗಾರಿಗಳು ಪೂರ್ಣಗೊಂಡಿದೆ. ಆದಷ್ಟು ಶೀಘ್ರ ಈ ಕಾಮಗಾರಿಗಳು ಮುಗಿಯಲಿದೆ. ಕೆಲವೊಂದು ಭೂಸ್ವಾಧೀನ ತೊಂದರೆಗಳಿಂದ ಕಾಮಗಾರಿ ತಡವಾಗಿದೆ. ಏನೇ ಆದರೂ ಅಕ್ಟೋಬರ್ 2021ರ ವೇಳೆಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ಅವರು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ