ನವದೆಹಲಿ
ಖಾಲಿ ಇರುವ ಭಾರತ ಫುಟ್ಬಾಲ್ ತಂಡದ ಮುಖ್ಯ ತರಬೇತುದಾರ ಹುದ್ದೆಯ ನೇಮಕ ಕುರಿತಂತೆ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ನಾಲ್ಕು ಸಂಭಾವ್ಯರ ಸಂದರ್ಶನವನ್ನುಇಂದು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಚೆಟ್ರಿ ಬಳಗಕ್ಕೆ ಸಾರಥಿ ನೇಮಕವಾಗಲಿದ್ದಾರೆ.
ಗುರುವಾರ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ತಾಂತ್ರಿಕ ಸಮಿತಿಯು ಕೋಚ್ ನೇಮಕಕ್ಕೆ ಸಂಭಾವ್ಯರಾದ ಹಕನ್ ಎರಿಕ್ಸನ್, ಆಲ್ಬರ್ಟ್ ರೋಕಾ, ಇಗೋರ್ ಸ್ಟಿಮಾಕ್ ಹಾಗೂ ಲೀ ಮಿನ್ ಸುಂಗ್ ಅವರ ಸಂದರ್ಶನವನ್ನು ಪೂರ್ಣಗೊಳಿಸಿದೆ. ಈ ಎಲ್ಲರೂ ವಿದೇಶಿಗರಾಗಿದ್ದಾರೆ.
ಎಐಎಫ್ಎಫ್ ತಾಂತ್ರಿಕ ನಿರ್ದೇಶಕ ಇಸಾಕ್ ಡೊರು, ಉಪಾಧ್ಯಕ್ಷ ಹೆನ್ರಿ ಮೆನೆಜ್ಸ್, ಪ್ರಶಾಂತ್ ಬ್ಯಾನರ್ಜಿ, ಪ್ರದೀಪ್ ದತ್ತ, ಜಿ.ಪಿ ಪಲ್ಗೂಣ ಹಾಗೂ ಸುಂದರ್ ರಾಮನ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಇಶ್‌ಪಾಕ್ ಅಹಮದ್ ಅನುಮತಿಯ ಮೆರೆಗೆ ಗೈರಾಗಿದ್ದರು.
ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹಾಗೂ ರಾಷ್ಟ್ರೀಯ ತಂಡದ ನಿರ್ದೇಶಕ ಅಭಿಷೇಕ್ ಯಾದವ್ ಅವರೂ ಉಪಸ್ಥಿತರಿದ್ದರು. ಎಐಎಫ್‌ಎಫ್ ಸಂವಿಧಾನಿಕ ಮಂಡಳಿಯು ಮುಖ್ಯ ತರಬೇತುದಾರರ ಅಂತಿಮ ನೇಮಕ ಮಾಡಲು ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಿದೆ.
ಕಳೆದ ಜನವರಿಯಲ್ಲಿ ನಡೆದಿದ್ದ ಎಎಫ್‌ಸಿ ಏಷ್ಯನ್ ಕಪ್-2019 ಟೂರ್ನಿಯ ಗುಂಪು ಹಂತದಿಂದ ಭಾರತ ಫುಟ್ಬಾಲ್ ತಂಡ ನಿರ್ಗಮಿಸಿದ್ದರಿಂದ ನೊಂದಿದ್ದ ಸ್ಟಿಫೆನ್ ಕಾನ್‌ಸ್ಟಾಟಿನ್ ಅವರು ತಮ್ಮ ಕೋಚ್ ಸ್ಥಾನಕ್ಕೆ ದಿಡೀರ್ ರಾಜೀನಾಮೆ ಸಲ್ಲಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಮುಖ್ಯ ತರಬೇತುದಾರ ಹುದ್ದೆ ಖಾಲಿ ಇತ್ತು.
ಬಳಿಕ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಜಾಹಿರಾತು ನೀಡಿತ್ತು. ಜಗತ್ತಿನಾದ್ಯಂತ ಒಟ್ಟು 250 ಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಇದೀಗ ಕೇವಲ ನಾಲ್ವರಿಗೆ ಮಾತ್ರ ಸಂದರ್ಶನ ಮಾಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಭಾರತ ಫುಟ್ಬಾಲ್ ತಂಡದ ಕೋಚ್ ಹುದ್ದೆ ಭರ್ತಿಯಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
