ಶೀಘ್ರದಲ್ಲೇ ಜಿಟಿಟಿಸಿ ಕೇಂದ್ರ ಆರಂಭ : ರಘುಮೂರ್ತಿ.

ಚಳ್ಳಕೆರೆ

     ಬರದ ನಾಡಿನ ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗದ ಅವಕಾಶವನ್ನು ನೀಡುವ ಮೂಲಕ ನಿರುದ್ಯೋಗಿ ಯುವಕ, ಯುವತಿಯರ ಕನಸು ನನಸು ಮಾಡಲು 44.12 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆಗೆ ನಿರ್ಗಮನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಆದೇಶ ನೀಡಿ, ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಕೆಲವೇ ತಿಂಗಳಲ್ಲಿ ಈ ಕೇಂದ್ರ ತನ್ನ ಕಾಯಾರಂಭ ಮಾಡಲಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

    ಅವರು, ಬುಧವಾರ ಮಧ್ಯಾಹ್ನ ನಗರದ ಬಳ್ಳಾರಿ ರಸ್ತೆಯಲ್ಲಿರುವ ನಗರಸಭೆಯ ಕಸ ಸಂಸ್ಕಾರ ಘಟಕದ ಪಕ್ಕದಲ್ಲಿನ ಜಿಟಿಟಿಸಿ ಕೇಂದ್ರದ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು. ಈಗಾಗಲೇ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ನಿರಂತರವಾಗಿ ಕಾಮಗಾರಿ ಪ್ರತಿಯಲ್ಲಿದ್ದು, ಪ್ರಸ್ತುತ ರಾಜ್ಯದಲ್ಲಿ 22 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಚಳ್ಳಕೆರೆ ನಗರದಲ್ಲಿ ಮಾತ್ರ ಎಲ್ಲಾ ಸೌಲಭ್ಯಗಳುಳ್ಳ ಜಿಟಿಟಿಸಿ ಕೇಂದ್ರ ನಿರ್ಮಾಣವಾಗುತ್ತಿದೆ. ಈಗಾಗಲೇ ಅಧಿಕಾರಿ ವರ್ಗಕ್ಕೆ ಸ್ಪಷ್ಟ ಸೂಚನೆ ನೀಡಿ ಆದಷ್ಟು ಬೇಗನೆ ಈ ಕಾಮಗಾರಿಯನ್ನು ಪೂರೈಸುವಂತೆ ಸೂಚಿಸಲಾಗಿದೆ.

   ಜೊತೆಯಲ್ಲೇ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ ಇನ್ನೂ ಹಲವಾರು ಪ್ರದೇಶಗಳಲ್ಲಿ ಈ ಕೇಂದ್ರದ ಕಾಮಗಾರಿ ಮುಂದುವರೆದಿದ್ದು, ಚಳ್ಳಕೆರೆ ಕೇಂದ್ರದಲ್ಲಿ ಮಾತ್ರ ಎಲ್ಲಾ ನಿರುದ್ಯೋಗಿಗಳಿಗೆ ಅನುಕೂಲವಾಗುವಂತ ನಿಟ್ಟಿನಲ್ಲಿ ಬೋಧನೆ ಜೊತೆಗೆ ಹಾಸ್ಟಲ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುತ್ತದೆ. ನಗರದ ಬಳ್ಳಾರಿ ರಸ್ತೆಯಲ್ಲಿರುವ ಈಗಾಗಲೇ ಸರ್ಕಾರದಿಂದ ಮಂಜೂರಾತಿ ಪಡೆದ ಸುಮಾರು 4 ಎಕರೆ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಗುತ್ತಿಗೆ ಪಡೆದಿರುವ ಬೆಂಗಳೂರಿನ ಉಷಾ ಡೆವಲಪರ್ ಲಿಮಿಟೆಡ್‍ನವರು ಕಾಮಗಾರಿಗೆ ಅವಶ್ಯವಿರುವ ಎಲ್ಲಾ ಪೂರ್ವ ಸಿದ್ದತೆಯೊಂದಿಗೆ ಕಾರ್ಯನಿರತರಾಗಿದ್ದಾರೆಂದರು.

    ಉಷಾ ಡೆವಲಪರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಈಗಾಗಲೇ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಜಿಟಿಟಿಸಿ ಕೇಂದ್ರದಲ್ಲಿ ಬೋಧನಾ ಕೊಠಡಿ, ವರ್ಕ್‍ಶಾಫ್, ಸಿಬ್ಬಂದಿ ವಿಶ್ರಾಂತಿ ಕೊಠಡಿ ಮತ್ತು ವಸತಿ ಗೃಹಗಳನ್ನು ಸಹ ನಿರ್ಮಿಸಲಾಗುತ್ತಿದೆ ಎಂದರು.

   ಇದೇ ಸಂದರ್ಭದಲ್ಲಿ ಶಾಸಕರು ನಗರಸಭೆಯ ಸಂಸ್ಕರಣ ಘಟಕದ ಕಾಮಗಾರಿಯನ್ನು ಸಹ ವೀಕ್ಷಿಸಿದರು. ಪೌರಾಯುಕ್ತ ಜೆ.ಟಿ.ಹನುಮಂತರಾಜುರವರಿಗೆ ಸೂಚನೆ ನೀಡಿದ ಶಾಸಕರು, ಸಂಸ್ಕರ ಘಟಕದ ಒಳ ಆವರಣದಲ್ಲಿ ಕಸವನ್ನು ಎಲ್ಲಂದಲ್ಲೇ ಹಾಕದೆ ನೀಟಾಗಿರುವಂತೆ ಸೂಚಿಸಿದರು.

    ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾಹಿತಿ ನೀಡಿ, ಘಟಕದ ಒಳ ಆವರಣದಲ್ಲಿ ಸ್ವಚ್ಚತೆಯನ್ನು ಕಾಪಾಡುವ ದೃಷ್ಠಿಯಿಂದ ಸುತ್ತಲು ನೂರಾರು ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತಿದೆ. ಈಗಾಗಲೇ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಪ್ರತಿನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹಣೆಯಾಗುತ್ತಿದ್ದು, ಕೇಂದ್ರದ ಮುಂಭಾಗದ ವಿಶಾಲವಾದ ಜಾಗದಲ್ಲಿ ಹಂತ, ಹಂತವಾಗಿ ಕಸವನ್ನು ಸಂಗ್ರಹಿಸಲಾಗುತ್ತಿದೆ ಎಂದರು. ಕಸ ಸಂಸ್ಕರಣ ಘಟಕ ಪ್ರಾರಂಭವಾದಲ್ಲಿ ಇನ್ನೂ ಹೆಚ್ಚಿನ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

    ಜಿಟಿಟಿಸಿ ಕಂಪನಿಯ ಸಹಾಯಕ ವ್ಯವಸ್ಥಾಪಕ ನಾಗರಾಜು, ಲಕ್ಷ್ಮಣ್‍ನಾಯ್ಕ, ನಗರಸಭಾ ಸದಸ್ಯ ಬಿ.ಟಿ.ರಮೇಶ್‍ಗೌಡ, ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ್, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಸಹಾಯಕ ಇಂಜಿನಿಯರ್ ಲೋಕೇಶ್, ಸರ್ವೆ ಅಧಿಕಾರಿ ಬಾಬುರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap