ಬೆಂಗಳೂರು
ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ವೇತನಕ್ಕೆ ಹಣ ಬಿಡುಗಡೆ ಮಾಡಿಸಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಮೊದಲ ಹಂತದಲ್ಲಿ ಆರ್ಥಿಕ ನೆರವು ಪಡೆಯದೆ ಇರುವ ಆಟೋ-ಟ್ಯಾಕ್ಸಿ ಚಾಲಕರಿಂದ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ವಿಧಾನಪರಿಷತ್‍ನಲ್ಲಿ ಮಂಡಿಸಿ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಬಜೆಟ್‍ನಲ್ಲಿ ಸೇರ್ಪಡೆಯಾಗದೆ ಇರುವ ಮತ್ತು ಅನಿವಾರ್ಯವಾಗಿ ಎದುರಾಗುವ ಖರ್ಚುಗಳನ್ನು ನಿಭಾಯಿಸಲು ಪೂರಕ ಬಜೆಟ್‍ನ್ನು ಮಂಡಿಸಲಾಗುತ್ತದೆ. ಈ ಬಾರಿ 4008 ಕೋಟಿ ಹೆಚ್ಚುವರಿ ಬಜೆಟ್‍ನ್ನು ಮಂಡಿಸಲಾಗಿದೆ. ಇದರಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಸಲಕರಣೆಗಳ ಖರೀದಿಗೆ 1090 ಕೋಟಿ ಖರ್ಚಾಗಿದೆ. ಸಾರಿಗೆ ಸಂಸ್ಥೆಗಳ ನಷ್ಟದ ನಡುವೆ ಸಿಬ್ಬಂದಿಗಳಿಗೆ ವೇತನ ನೀಡಲು 543 ಕೋಟಿ ಬೇಕಿದೆ, ಕೋವಿಡ್ ಚಿಕಿತ್ಸೆಗೆ ಖಾಸಗಿ ಮೆಡಿಕಲ್ ಕಾಲೇಜುಗಳ ಮೂಲಸೌಲಭ್ಯಕ್ಕೆ 165 ಕೋಟಿ, ಉತ್ತಮ ಮಳೆಯಾಗಿ ಬಿತ್ತನೆ ಚೆನ್ನಾಗಿರುವುದರಿಂದ ಕೃಷಿ ಪರಿಕರಗಳು ಹಾಗೂ ಬೀಜ ಖರೀದಿಗೆ 100 ಕೋಟಿ, ಆಟೋ ರಿಕ್ಷಾ ಚಾಲಕರು ಸೇರಿದಂತೆ ಕುಶಲಕರ್ಮಿಗಳಿಗೆ ಕೋವಿಡ್ ಸಂಕಷ್ಟದ ವೇಳೆ 5 ಸವಿರ ರೂ ನೀಡಲು ಒಟ್ಟು 97.5 ಕೋಟಿ, ವಾರ್ತಾ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಜಾಹಿರಾತು ವಿಭಾಗದ ಬಿಲ್‍ಗಳ ಪಾವತಿಗೆ 56 ಕೋಟಿ, ಸಂಗೋಳ್ಳಿ ರಾಯಣ್ಣ ಪ್ರತಿಷ್ಠಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ಇತರ ವೆಚ್ಚಗಳಿಗೆ ಪೂರಕ ಬಜೆಟ್ ಮಂಡಿಸಲಾಗಿದೆ. ಇದು ಬಜೆಟ್ ಗಾತ್ರದಲ್ಲಿ ಶೇ.1.63 ರಷ್ಟಿದೆ. ಈ ವರ್ಷ ಪರಿಸ್ಥಿತಿಗಳು ಎದುರಾಗಿದ್ದರಿಂದ ಪೂರಕ ಬಜೆಟ್‍ನ ಗಾತ್ರ ಸ್ವಲ್ಪ ಹೆಚ್ಚಾಗಿದೆ ಎಂದು ಸಮರ್ಥಿಸಿಕೊಂಡರು.
ಈ ಬಗ್ಗೆ ಮಾತನಾಡಿದ ಜೆಡಿಎಸ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಅನುದಾನ ರಹಿತ ಶಾಲೆ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರ ವೇತನಕ್ಕೆ ಹಣ ನಿಗದಿ ಮಾಡಿಲ್ಲ. ನಿಮ್ಮ ಸರ್ಕಾರಕ್ಕೆ ಕರುಣೆ ಇಲ್ಲವೇ ಎಂದು ಪ್ರಶ್ನಿಸಿದರು. ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಇದಕ್ಕೆ ಧ್ವನಿಗೂಡಿಸಿ, ಶಿಕ್ಷಕರನ್ನು ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕುವವರೆಂದು ಹೊಗಳುತ್ತೇವೆ. ಆದರೆ ಕೋವಿಡ್ ಕಾಲದಲ್ಲಿ ಅವರಿಗೆ ಯಾವುದೇ ನೆರವು ನೀಡಿಲ್ಲ. ಮದುವೆಯಾಗಲು ನಿಶ್ಚಿತಾರ್ಥ ಆಗಿದ್ದವರಿಗೆ ಮದುವೆಯಾಗಿಲ್ಲ, ಮದುವೆಯಾದವರು ಪತ್ನಿಯನ್ನು ಕರೆ ತಂದು ಮನೆ ಮಾಡಿ ಸಂಸಾರ ಶುರು ಮಾಡಿಲ್ಲ. ಅವರಿಗೆ ಜೀವನ ಮಾಡಲು ಸಾಧ್ಯವಾಗದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.
ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ನೆರವು ದೊರಕಿಸಲು ಪ್ರಯತ್ನಿಸುವುದಾಗಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದರು. ಆಗ ಬಸವರಾಜ ಹೊರಟ್ಟಿ ಅವರು, ಮಸೂದೆ ಪಾಸ್ ಮಾಡಿಸಿಕೊಳ್ಳಲು ನೀವೆ ಬರುತ್ತಿರಾ, ಶಿಕ್ಷಕರಿಗೆ ನೆರವು ನೀಡಿ ಎಂದರೆ ಮುಖ್ಯಮಂತ್ರಿಯವರ ಮೇಲೆ ಹೇಳುತ್ತಿರಾ ಎಂದು ಸಿಟ್ಟಾದರು. ಇಲ್ಲಿ ನಾನು ಏನೇ ಮಾಡಿದರು ಮುಖ್ಯಮಂತ್ರಿಯವರ ಹೆಸರಿನಲ್ಲೆ ಮಾಡುತ್ತೇನೆ ಎಂದು ಮಾಧುಸ್ವಾಮಿ ಹೇಳಿದರು.
ಈ ವಿಷಯವಾಗಿ ನಿಮ್ಮನ್ನು ನಂಬಹುದೆ ಎಂದು ಹೊರಟ್ಟಿ ಕೇಳಿದರು. ನಂಬಿದರೆ ನಂಬಿ, ನಂಬದಿದ್ದರೆ ನಂಬ ಬೇಡಿ ಎಂದು ಮಾಧುಸ್ವಾಮಿ ಬೇಸರ ವ್ಯಕ್ತ ಪಡಿಸಿದರು. ಕನಿಷ್ಠ ಸ್ನೇಹಿತನ ಮಾತನ್ನು ನಂಬಬೇಕಪ್ಪ, ಅದನ್ನು ಬಿಟ್ಟು ನಂಬಬೇಕಾ ಎಂದು ಕೇಳಿದರೆ ನಾನು ಏನು ಹೇಳಲು ಸಾಧ್ಯ? ನಂಬಬೇಡ ಬಿಡು ಎಂದು ಹೊರಟ್ಟಿರವರ ಕುರಿತು ಅಸಮಾಧಾನ ವ್ಯಕ್ತ ಪಡಿಸಿದರು. ಕೆಲಸ ಮಾಡಿಸಿಕೊಡುತ್ತಿಯೋ ಟೋಪಿ ಹಾಕಿಸುತ್ತೀಯೋ ಎಂಬ ಆತಂಕ ಎಂದು ಹೊರಟ್ಟಿ ಹೇಳಿದಾಗ, ಟೋಪಿ ಹಾಕಿಸುವುದು ಉತ್ತರ ಕರ್ನಾಟಕದವರು ಎಂದು ಮಾಧುಸ್ವಾಮಿ ಹೊರಟ್ಟಿಯವರನ್ನು ಛೇಡಿಸಿದರು. ಇಬ್ಬರು ಸ್ನೇಹಿತರ ಜುಗಲ್ ಬಂದಿ ಒಂದಷ್ಟು ಕಾಲ ನಡೆಯಿತು.
ಆಡದೆ ಮಾಡುವವನು ರೂಢಿಯಲಿ ಉತ್ತಮನು ಎಂದು ನಿನ್ನ ಧರ್ಮ ಹೇಳಿದೆ, ಮಾಡಿ ತೋರಿಸುತ್ತೇನೆ ಎಂದು ಮಾಧುಸ್ವಾಮಿ ಹೇಳಿದರು.ಸಿಎಂ ಇಬ್ರಾಹಿಂ ಸೇರಿದಂತೆ ಅನೇಕ ಸದಸ್ಯರು ಚಾಲಕರು, ಕ್ಷೌರಿಕರಿಗೆ, ಮಡಿವಾಳರು ಸೇರಿದಂತೆ ವೃತ್ತಿ ಆಧಾರಿತರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ಲೆಕ್ಕ ನೀಡಿ ಎಂದರು.
ಇದಕ್ಕೆ ಉತ್ತರ ನೀಡಿದ ಮುಸುಕಿನ ಜೋಳದ 7.19 ಲಕ್ಷ ಹೆಕ್ಟರ್‍ಗೆ ಆರ್ಥಿಕ ನೆರವು ನೀಡಲಾಗಿದೆ. 12.35 ಹೆಕ್ಟರ್ ಹೂ ಬೆಳೆಗಾರರಿಗೆ, ಹಣ್ಣು, ತರಕಾರಿ ಬೆಳೆಗಾರರಿಗೆ 15 ಕೋಟಿ, ರೇಷ್ಮೆ ಬೆಳೆಗಾರರಿಗೆ 35 ಕೋಟಿ, ಕೌರಿಕರು, ಅಗಸರಿಗೆ 1.14 ಲಕ್ಷ ಜನರಿಗೆ 58 ಕೋಟಿ, ನೇಕಾರರಿಗೆ ನೆರವು ನೀಡಲಾಗಿದೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 178 ಕೋಟಿ ನಿಗದಿ ಮಾಡಲಾಗಿತ್ತು 2.14 ಲಕ್ಷ ಜನರಿಗೆ ನೆರವು ನೀಡಲಾಗಿದೆ. ಅರ್ಜಿ ಕರೆದಾಗ 2.45 ಲಕ್ಷ ಅರ್ಜಿ ಹಾಕಿದ್ದರು. 7 ಲಕ್ಷ ಜನ ನೋಂದಾಯಿತ ಚಾಲಕರಿದ್ದಾರೆ. ಬಹಳಷ್ಟು ಮಂದಿ ಅರ್ಜಿ ಹಾಕಿಲ್ಲ. 2.45 ಲಕ್ಷ ಮಂದಿ ಪೈಕಿ 30 ಸಾವಿರ ಅರ್ಜಿಗಳು ಪರಿಶೀಲನೆಯಲ್ಲಿವೆ. ಇನ್ನೊಮ್ಮೆ ಅರ್ಜಿ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸದಸ್ಯರಾ ತಿಪ್ಪೆಸ್ವಾಮಿ ಮಾತನಾಡಿ, ಮರಿತಿಬ್ಬೆಗೌಡ, ಪಿ.ಆರ್.ಸ್ವಾಮಿ, ವೈ.ಎ.ನಾರಾಯಣಸ್ವಾಮಿ, ರಮೇಶ್, ಎಂ. ನಾರಾಯಣಸ್ವಾಮಿ, ಸಿ.ಎಂ.ಇಬ್ರಾಹಿಂ ಸೇರಿ ಅನೇಕರು ಮಾತನಾಡಿ, ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ, ಹಮಾಲರು, ರಸ್ತೆ ಬದಿ ಪಾದರಕ್ಷೆ ಹೊಲೆಯುವ ಪುಟ್ಟ ಅಂಗಡಿ ಇಟ್ಟುಕೊಂಡವರಿಗೂ ನೆರವು ನೀಡಿ ಎಂದು ಮನವಿ ಮಾಡಿದರು. ಕೊನೆಗೆ ವಿಧೇಯಕ ಧ್ವನಿಮತದ ಮೂಲಕ ಅಂಗೀಕಾರವಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ